ಮಹಾತ್ಮ ಗಾಂಧಿ ಪ್ರತಿಮೆ ತೆರವು: ಮಾಹಿತಿ ಇಲ್ಲವೆಂದ ಅಸ್ಸಾಂ ಸಿಎಂ ಹಿಮಂತ ಶರ್ಮಾ
1 min readಅಸ್ಸಾಂನ ಡೂಮ್‌ಡೂಮಾ ಪಟ್ಟಣದಲ್ಲಿ ಗಡಿಯಾರದ ಗೋಪುರ ನಿರ್ಮಾಣಕ್ಕಾಗಿ ಮಹಾತ್ಮ ಗಾಂಧಿ ಅವರ ಪ್ರತಿಮೆಯನ್ನು ತೆರವುಗೊಳಿಸಲಾಗಿದೆ. ಈ ಬಗ್ಗೆ ಪ್ರತಿಕ್ರಿಯಿಸಿದ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ, ಇದರ ಬಗ್ಗೆ ನನಗೆ ಮಾಹಿತಿ ಇಲ್ಲ. ಅಧಿಕಾರಿಗಳೊಂದಿಗೆ ಚರ್ಚಿಸುತ್ತೇನೆ ಎಂದು ಹೇಳಿದ್ದಾರೆ.
ಮಹಾತ್ಮ ಗಾಂಧಿ ಪ್ರತಿಮೆ ತೆರವುಗೊಳಿಸಲು ತಿನ್ಸುಕಿಯಾ ಜಿಲ್ಲಾಡಳಿತ ಕೈಗೊಂಡ ಕ್ರಮದ ಬಗ್ಗೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಟೀಕೆ ವ್ಯಕ್ತವಾಗಿದೆ.
ಮಹಾತ್ಮಾ ಗಾಂಧಿ ಮರಿಮೊಮ್ಮಗ ತುಷಾರ್ ಗಾಂಧಿ ಅವರ ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿದ್ದು, ‘ಅಸ್ಸಾಂನ ಬಿಜೆಪಿ ಸರ್ಕಾರವು ಬಾಪು ಅವರ ಪ್ರತಿಮೆಯನ್ನು ಗಡಿಯಾರದ ಗೋಪುರ ನಿರ್ಮಾಣಕ್ಕಾಗಿ ತೆರವುಗೊಳಿಸಲು ನಿರ್ಧರಿಸಿರುವುದು ಆಶ್ಚರ್ಯವೇನಿಲ್ಲ. ಬಿಜೆಪಿಗರ ಗುಲಾಮಗಿರಿಯ ವಸಾಹತುಶಾಹಿ ಮನಸ್ಥಿತಿ ಮುಂದುವರಿದಿದೆ ಎಂಬುದಕ್ಕೆ ಇದೇ ಸಾಕ್ಷಿ’ ಎಂದು ಬೇಸರ ವ್ಯಕ್ತಪಡಿಸಿದ್ದರು.
ತುಷಾರ್ ಗಾಂಧಿ ಅವರ ಪೋಸ್ಟ್‌ಗೆ ಪ್ರತಿಕ್ರಿಯಿಸಿದ ಶರ್ಮಾ, ‘ತಿನ್ಸುಕಿಯಾ ಜಿಲ್ಲಾಡಳಿತ ಕೈಗೊಂಡಿರುವ ನಿರ್ಧಾರದ ಬಗ್ಗೆ ನನಗೆ ಮಾಹಿತಿ ಇಲ್ಲ. ನನಗೆ ಸತ್ಯಾಂಶವನ್ನು ಪರಿಶೀಲಿಸಲು ಅವಕಾಶ ಮಾಡಿಕೊಡಿ. ಅಸ್ಸಾಂ ಮಹಾತ್ಮಾ ಗಾಂಧಿ ಅವರಿಗೆ ಹೆಚ್ಚು ಋಣಿಯಾಗಿದೆ’ ಎಂದು ಹೇಳಿದ್ದಾರೆ.
‘ಜವಾಹರಲಾಲ್ ನೆಹರೂ ನೇತೃತ್ವದ ಕಾಂಗ್ರೆಸ್ ಪಕ್ಷವು ಗ್ರೂಪಿಂಗ್ ಯೋಜನೆಯಡಿ ಅಸ್ಸಾಂ ಅನ್ನು ಪಾಕಿಸ್ತಾನಕ್ಕೆ ಸೇರಿಸಲು ಬಯಸಿದಾಗ ಮಹಾತ್ಮ ಗಾಂಧಿ ಅವರು ಭಾರತ ರತ್ನ ಗೋಪಿನಾಥ್ ಬೊರ್ಡೊಲೊಯ್ ಅವರೊಂದಿಗೆ ದೃಢವಾಗಿ ನಿಂತಿದ್ದರು’ ಎಂದು ಶರ್ಮಾ ಸ್ಮರಿಸಿದ್ದಾರೆ.
ಗಡಿಯಾರದ ಗೋಪುರ ನಿರ್ಮಾಣ ಮಾಡುವ ಉದ್ದೇಶದಿಂದ ಡೂಮ್‌ಡೂಮಾ ಪಟ್ಟಣದ ಹೃದಯ ಭಾಗದಲ್ಲಿದ್ದ ಮಹಾತ್ಮಾ ಗಾಂಧೀಜಿ ಪ್ರತಿಮೆಯನ್ನು ಪುರಸಭೆ ಅಧಿಕಾರಿಗಳು ಬುಧವಾರ ತೆರವುಗೊಳಿಸಿದ್ದರು. ಪುರಸಭೆ ಕ್ರಮ ಖಂಡಿಸಿ ಸ್ಥಳೀಯರು ಪ್ರತಿಭಟನೆ ನಡೆಸಿದ್ದರು.
ಮಹಾತ್ಮಾ ಗಾಂಧೀಜಿ ಅವರ ಪ್ರತಿಮೆ ಇದ್ದ ಮೂಲ ಸ್ಥಳದಲ್ಲೇ ಹೊಸ ಮತ್ತು ಎತ್ತರದ ಪ್ರತಿಮೆಯನ್ನು ಸ್ಥಾಪಿಸಲಾಗುವುದು ಎಂದು ಡೂಮ್‌ಡೂಮಾ ಶಾಸಕ ರೂಪೇಶ್ ಗೋವಾಲಾ ಭರವಸೆ ನೀಡಿದ್ದಾರೆ.