ಸುಸಜ್ಜಿತ ಕಟ್ಟಡವಿದ್ದರೂ ಬರುತ್ತಿಲ್ಲ ಪ್ರಕರಣಗಳು
1 min readಸುಸಜ್ಜಿತ ಕಟ್ಟಡವಿದ್ದರೂ ಬರುತ್ತಿಲ್ಲ ಪ್ರಕರಣಗಳು
ನವ ನವೀನ ಯಂತ್ರೋಪಕರಣಗಳಿದ್ದರೂ ಉಪಯೋಗವಿಲ್ಲ
ಆಪರೇಷನ್ ಥಿಯೇಟರ್, ವೈದ್ಯರು, ಸಿಬ್ಬಂದಿ ಇದ್ದರೂ ಪ್ರಕರಣಗಳೇ ಇಲ್ಲ
ಇದು ಚಿಕ್ಕಬಳ್ಳಾಪುರ ಪಶು ಆಸ್ಪತ್ರೆಯ ದುಸ್ಥಿತಿ
ಇಲ್ಲಿ ಕಾಣ್ತಾ ಇರೋ ಸುಸಜ್ಜಿತ ಕಟ್ಟಡ ಒಮ್ಮೆ ನೋಡಿ, ಅದೇ ರೀತಿಯಲ್ಲಿ ಒಳಗಿನ ಯಂತ್ರೋಪಕರಣಗಳನ್ನೂ ಕಣ್ತುಂಬಿಕೊಳ್ಳಿ, ಅಷ್ಟೇ ಅಲ್ಲ, ಇಲ್ಲಿರುವ ವೈದ್ಯರು, ಸಿಬ್ಬಂದಿಯನ್ನೂ ನೋಡಿಬಿಡಿ. ನೀವು ಸರ್ಕಾರಿ ಕಚೇರಿಗಳಿಗೆ ಹೋದರೆ ನಾನಾ ನೆಪ ಹೇಳಿ ನಿಮ್ಮ ಕೆಲಸ ಮುಂದೂಡುವುದನ್ನು ನೋಡಿರ್ತೀರಿ, ಆದರೆ ಇಲ್ಲಿ ಯಾರೂ ಬರಲೇ ಇಲ್ಲವಲ್ಲ ಅಂತ ಕಾದು ಕೂರುವ ಸ್ಥಿತಿ ನಿರ್ಮಾಣವಾಗಿದೆ. ಹಾಗಾದರೆ ಇಷ್ಟೆಲ್ಲಾ ಸುಸಜ್ಜಿತವಾದ ಸೌಲಭ್ಯಗಳಿದ್ದರೂ ಯಾಕೆ ಯಾರೂ ಬರ್ತಿಲ್ಲ ಅಂತೀರಾ? ಮುಂದೆ ನೋಡಿ.
ಯಾವುದೇ ಸರ್ಕಾರಿ ಕಚೇರಿ, ಸರ್ಕಾರಿ ಆಸ್ಪತ್ರೆಗೆ ಹೋದರೆ ವಿನಾ ಕಾರಣ ಕಾಯಿಸೋದನ್ನ ನೀವು ನೋಡಿರ್ತೀರಿ. ನೋಡೋದೇನು ಅನುಭವಿಸಿಯೂ ಇರ್ತೀರಿ. ಆದರೆ ಇಲ್ಲಿನ ಆಸ್ಪತ್ರೆಗೆ ರೋಗಿಗಳೇ ಬರಲಿಲ್ಲವಲ್ಲಾ ಅಂತಾ ವೈದ್ಯರು ಸೇರಿದಂತೆ ಸಿಬ್ಬಂದಿ ಕಾದು ಕೂರುವ ಸ್ಥಿತಿ. ಇನ್ನು ಈ ಆಸ್ಪತ್ರೆಯಲ್ಲಿ ಶಸ್ತç ಚಿಕಿತ್ಸೆಯಿಂದ ಔಷಧಗಳವರೆಗೂ ಎಲ್ಲಾ ರೀತಿಯ ಸೌಲಭ್ಯ ಇದೆ. ಅಷ್ಟೇ ಅಲ್ಲಾ, ಆಪರೇಷನ್ ಥಿಯೇಟರ್, ಸರ್ಜನ್ ಎಲ್ಲರೂ ಇದ್ದಾರೆ. ಆದರೆ ರೋಗಿಗಳೇ ಇಲ್ಲ. ಯಾಕೆ ಇಲ್ಲಿಗೆ ರೋಗಿಗಳು ಬರ್ತಿಲ್ಲ ಅಂತೀರಾ ಈ ರಸ್ತೆಯನ್ನೊಮ್ಮೆ ನೋಡಿ..ಈ ಬಿರುಕು ಬಿಟ್ಟ ರಸ್ತೆ ಇದೆಯಲ್ಲಾ,
ಇದು ಮಳೆ ಬಂದರೆ ಕೆಸರುಗದ್ದೆಯಂತಾಗುತ್ತದೆ. ಈ ಕೆಸರುಗದ್ದೆಯಂತಹ ರಸ್ತೆಯಲ್ಲಿ ನೀವು ದ್ವಿಚಕ್ರ ವಾಹನದಲ್ಲಿಯೋ ಅಷ್ಟೇಕೆ ತ್ರಿಚಕ್ರ ವಾಹನದಲ್ಲಿ ಸಾಗಿದರೂ ಪಲ್ಟಿಯಾಗಿ ಬೀಳೋದು ಗ್ಯಾರೆಂಟಿ. ಇದು ಕೇವಲ ಬಾಯಿ ಮಾತಿಗೆ ಹೇಳುತ್ತಿರುವ ಮಾತಲ್ಲ, ಈಗಾಗಲೇ ಆಟೋ ಸೇರಿದಂತೆ ಅನೇಕ ಬೈಕುಗಳಲ್ಲಿ ಇಲ್ಲಿ ಚಿಕಿತ್ಸೆಗೆ ಬಂದು ಬಿದ್ದು ಗಾಯಗೊಂಡ ನಿದರ್ಶನಗಳು ಬಹಳಷ್ಟಿವೆ. ಆದರೆ ಅದೃಷ್ಟಕ್ಕೆ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ ಎಂಬುದು ಸಮಾಧಾನದ ಸಂಗತಿ. ಈ ರಸ್ತೆ ಕಾರಣಕ್ಕೇ ಇಲ್ಲಿಗೆ ರೋಗಿಗಳು ಬರುತ್ತಿಲ್ಲ ಅಂತ ಭಾವಿಸಬೇಡಿ, ಈ ರಸ್ತೆಯ ಜೊತೆಗೆ ಇನ್ನೂ ಹಲವು ಸಮಸ್ಯೆಗಳಿವೆ. ಅವು ಏನೂ ಅಂತ ನೋಡಿ.
ಚಿಕ್ಕಬಳ್ಳಾಪುರ ನಗರದ ಹೃದಯ ಭಾಗದಲ್ಲಿದ್ದ ಪಶು ವೈದ್ಯಕೀಯ ಚಿಕಿತ್ಸಾಲಯವನ್ನು ನಗರ ಹೊರವಲಯದ ಚಿತ್ರಾವತಿ ಪ್ರದೇಶಕ್ಕೆ ಸ್ಥಳಾಂತರಿಸಿ ಒಂದು ವರ್ಷವೇ ಕಳೆದಿದೆ. ಈ ಸ್ಥಳಾಂತತರಕ್ಕೆ ಆಗ ಜನಾಕ್ರೋಶ ವ್ಯಕ್ತವಾಗಿತ್ತು. ಸ್ಥಲಾಂತರದಿoದ ಹಲವು ಸಮಸ್ಯೆ ಎದುರಿಸಬೇಕಾಗುತ್ತದೆ ಎಂದು ಜಾನುವಾರುಗಳ ಮಾಲೀಕರು ಅಳಲು ತೋಡಿಕೊಂಡಿದ್ದರು. ಆದರೂ ಸ್ಥಳಾಂತರ ಮಾಡಲಾಗಿದ್ದು, ಈಗ ವರ್ಷ ಪೂರೈಸಿದೆ.
ಚಿತ್ರಾವತಿ ಪ್ರಾದೇಶಿಕ ಸಾರಿಗೆ ಕಚೇರಿ ಸಮೀಪ 2 ಕೋಟಿ ವೆಚ್ಚದಲ್ಲಿ ನಿರ್ಮಿಸಿರುವ ನೂತನ ಕಟ್ಟಡಕ್ಕೆ ನಗರದ ಅಂಬೇಡ್ಕರ್ ವೃತ್ತದ ಸಮೀಪವಿದ್ದ ಪಶು ಚಿಕಿತ್ಸಾಲಯವನ್ನು ಸ್ಥಳಾಂತರಿಸಿದ್ದು, 3 ಕಿ.ಮೀ ದೂರದಲ್ಲಿರುವ ಚಿಕಿತ್ಸಾಲಯಕ್ಕೆ ನಾಯಿ, ಕೋಳಿ, ಕುರಿಯನ್ನು ಆಟೋದಲ್ಲಿ ದುಪ್ಪಟ್ಟು ಹಣ ನೀಡಿ ಸಾಗಿಸಬೇಕಾಗಿದೆ. ಅಲ್ಲದೆ ಹಸು, ಎಮ್ಮೆ, ದೊಡ್ಡ ಗಾತ್ರದ ಜಾನುವಾರುಗಳನ್ನು ಸಾಗಿಸಲು ಹರಸಾಹಸ ಪಡುವ ಸ್ಥಿತಿ ನಿರ್ಮಾಣವಾಗಿದೆ.
ಪಶು ಚಿಕಿತ್ಸಾಲಯ ಇರುವ ಚಿತ್ರಾವತಿ ಪ್ರದೇಶದ ವ್ಯಾಪ್ತಿಯಲ್ಲಿ ಯಾವುದೇ ಔಷಧಾಲಯ ಇಲ್ಲವಾಗಿದ್ದು, ಅಗತ್ಯವಿರುವ ಔಷಧಗಳನ್ನು ಖರೀದಿಸಲು ಚೀಟಿಯೊಂದಿಗೆ ಮತ್ತೆ ನಗರಕ್ಕೆ ಹೋಗಬೇಕಿದೆ. ಅಲ್ಲದೆ ನಗರದಲ್ಲಿ ಔಷಧಗಳನ್ನು ಖರೀದಿಸಿ ವೈದ್ಯರ ಬಳಿ ಪರಿಶೀಲನೆಗಾಗಿ ಮತ್ತೆ ಅಲ್ಲಿಗೆ ತೆರಳಬೇಕಾಗಿದೆ. ಇದರಿಂದ ಚಿಕಿತ್ಸಾಲಯಕ್ಕೆ ಬರುವ ರೈತರು ಎರಡೆರಡು ಬಾರಿ ಓಡಾಡಬೇಕಾಗಿದೆ ಇದರಿಂದ ಪಶು ಸಾಕಾಣಿಕೆದಾರರು ಸಂಕಷ್ಟ ಎದುರಿಸುವಂತಾಗಿದೆ.
ಸರ್ಕಾರಿ ರಜೆ, ಭಾನುವಾರದಂದು ಜಾನುವಾರುಗಳಿಗೆ ತುರ್ತು ಚಿಕಿತ್ಸೆಗಾಗಿ ಕನಿಷ್ಠ ಅರ್ಧ ದಿನ ಕರ್ತವ್ಯ ನಿರ್ವಹಿಸಬೇಕೆಂಬ ಸರ್ಕಾರದ ನಿಯಮವಿದ್ದರೂ, ಅದನ್ನು ಉಲ್ಲಂಘಿಸುತ್ತಿರುವ ಇಲ್ಲಿನ ವೈದ್ಯರು, ಅಂತಹ ದಿನಗಳಂದು ಆಸ್ಪತ್ರೆಗೆ ಬರುತ್ತಿಲ್ಲ. ಬಂದರೂ ನಿಗಧಿತ ಅವಧಿಯವರೆಗೆ ಸೇವೆ ಸಲ್ಲಿಸದೆ ಬೀಗ ಜಡಿದು ಮನೆ ಸೇರುತ್ತಾರೆ ಎಂದು ಜಾನುವಾರುಗಳ ಮಾಲೀಕರು ಅಳಲು ತೋಡಿಕೊಂಡಿದ್ದಾರೆ.
ನೂತನ ಪಶು ಚಿಕಿತ್ಸಾಲಯಕ್ಕೆ ಮಾರ್ಗ ಸೂಚಿಸುವ ನಾಮಫಲಕ ಅಳವಡಿಸಲಾಗಿದೆಯಾದರೂ ಅದರ ಸುತ್ತ ಗಿಡಗಂಟಿಗಳು ಬೆಳೆದು ನಾಮಫಲಕವೇ ಕಾಣಿಸದಂತಾಗಿದೆ. ಇದರಿಂದ ಪಶು ಚಿಕಿತ್ಸಾಲಯ ಎಲ್ಲಿದೆ ಎಂದು ಜಾನುವಾರು ಮಾಲೀಕರು ಹುಡುಕಾಡುವ ದುಸ್ತಿತಿ ನಿರ್ಮಾಣವಾಗಿದೆ. ಅಲ್ಲದೆ ಚಿಕಿತ್ಸಾಲಯಕ್ಕೆ ತೆರಳುವ ರಸ್ತೆ ಮಳೆ ಬಂದರೆ ಕೆಸರು ಗದ್ದೆಯಾಗಿ ಮಾರ್ಪಡುವ ಮೂಲಕ ಸಂಚಾರಕ್ಕೆ ಯೋಗ್ಯವಿಲ್ಲದಂತೆ ಮಾರ್ಪಡುತ್ತದೆ.
2 ಕೋಟಿ ವೆಚ್ಚದಲ್ಲಿ ನೂತನ ಪಶು ಚಿಕಿತ್ಸಾಲಯ ನಿರ್ಮಾಣಕ್ಕೆ ಅನುದಾನ ಬಿಡುಗಡೆಯಾಗಿದ್ದರಿಂದ ಜಾಗದ ಕೊರತೆಯಿಂದ ಜಿಲ್ಲಾಡಳಿತ ಚಿತ್ರಾವತಿ ಸಮೀಪ 1.5 ಎಕರೆ ಮಂಜೂರು ಮಾಡಿತ್ತು. ಸಂಶೋಧನಾಲಯ, ಪ್ರಯೋಗಾಲಯ, ತರಬೇತಿ ಕಟ್ಟಡ ತಲೆಯೆತ್ತಿವೆ. ಎಲ್ಲಾ ಕಟ್ಟಡಗಳೊಂದಿಗೆ ಸುಸಜ್ಜಿತ ಪಶುಚಿಕಿತ್ಸಾಲಯ ನಿರ್ಮಾಣ ಮಾಡಲಾಗಿದೆ. ಆದರೆ ಚಿಕಿತ್ಸೆಗಾಗಿ ಜಾನುವಾರುಗಳೇ ಬರುತ್ತಿಲ್ಲ. ಚಿಕ್ಕಬಳ್ಳಾಪುರ ನಗರದಲ್ಲಿ ಚಿಕಿತ್ಸಾಲಯ ಇದ್ದಾಗ ಪ್ರತಿನಿತ್ಯ 50 ರಿಂದ 60 ಪ್ರಕರಣಗಳು ಬರುತ್ತಿದ್ದು, ಇದೀಗ ದಿನಕ್ಕೆ ೨೦ ಬರುವುದೂ ದುಸ್ತರವಾಗಿದೆ.
ಇದರ ಜೊತೆಗೆ ರಸ್ತೆ ಕೆಸರುಮಯವಾಗಿರುವ ಕಾರಣ ಒಮ್ಮೆ ಆಟೋದಲ್ಲಿ ಕುರಿಗಳನ್ನು ತುಂಬಿಕೊoಡು ಚಿಕಿತ್ಸೆಗಾಗಿ ಬರುವಾಗ ಆಟೋ ಕುರಿಗಳ ಸಮೇತ ಪಲ್ಟಿಯಾಗಿ ಹಲವರು ಗಾಯಗೊಂಡಿದ್ದರoತೆ. ಅಲ್ಲದೆ ಪ್ರತಿನಿತ್ಯ ಬೈಕಿನಲ್ಲಿ ಬರುವವರು ಬೀಳುವುದು ಏಳುವುದೇ ಕಾಯಕವಾಗಿದೆಯಂತೆ. ಇನ್ನು ಔಷಧ ಚೀಟಿ ಬರೆದುಕೊಟ್ಟರೆ ನಗರಕ್ಕೆ ಹೋಗಿ ತರಬೇಕಿದೆ. ಈ ಎಲ್ಲಾ ಸಮಸ್ಯೆಗಳಿಂದ ಬಳಲುತ್ತಿರುವ ಚಿಕ್ಕಬಳ್ಳಾಪುರ ಪಶು ಆಸ್ಪತ್ರೆಗೆ ಚಿಕಿತ್ಸೆ ಆಗಬೇಕಿದೆ. ಆದರೆ ಚಿಕಿತ್ಸೆ ಮಾಡುವವರೇ ಬರವಾಗಿದ್ದಾರೆ.