ಸಿಎಂ ತವರು ಜಿಲ್ಲೆಯಲ್ಲಿಯೇ ಕಾಣದ ಬೆಳಕಿನ ಭಾಗ್ಯ!
1 min readಸಿಎಂ ತವರು ಜಿಲ್ಲೆಯಲ್ಲಿಯೇ ಕಾಣದ ಬೆಳಕಿನ ಭಾಗ್ಯ!
15 ವರ್ಷಗಳಿಂದ ವಿದ್ಯುತ್ ಸಂಪರ್ಕವಿಲ್ಲದೆ ಪರದಾಟ
ಜನಪ್ರತಿನಿಧಿಗಳು, ಅಧಿಕಾರಿಗಳ ಕಾರ್ಯವೈಕರಿಗೆ ನಿದರ್ಶನ
ಸಿಎಂ ತವರು ಜಿಲ್ಲೆಯಲ್ಲಿಯೇ ಇಲ್ಲ ಬೆಳಕಿನ ವ್ಯವಸ್ಥೆಗೆ ಆಕ್ರೋಶ
ದೇಶಕ್ಕೆ ಸ್ವಾತಂತ್ರ ಬಂದು 76 ವರ್ಷಗಳೇ ಕಳೆದಿವೆ. ಮೊನ್ನೆಯಷ್ಟೇ ಸ್ವಾತಂತ್ರದ ವಜ್ರ ಮಹೋತ್ಸವ ಆಚರಿಸಿಕೊಂಡಿದೆ ದೇಶ. ಗರೀಬಿ ಹಠಾವೋ, ಸ್ವಚ್ಛ ಭಾರತ್ ಹೆಸರಿನಲ್ಲಿ ನಾನಾ ಯೋಜನೆಗಳು ದೇಶದ ಬಡತನ ತೊಲಗಿಸಿ, ನವ ನಾಗರೀಕತೆಯತ್ತ ಜನರನ್ನು ಕೊಂಡೊಯ್ಯಲು ಜಾರಿಯಾಗಿವೆ. ಆದರೆ ಅವು ಜನರಿಗೆ ನಿಜವಾಗಿಯೂ ತಲುಪಿಲ್ಲ ಎಂಬುದಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ತವರು ಜಿಲ್ಲೆಯ ಈ ಗ್ರಾಮವೇ ನಿದರ್ಶನ. ಹಾಗಾದರೆ ಯಾವುದು ಆಗ್ರಾಮ, ಏನು ಅಲ್ಲಿನ ಸಮಸ್ಯೆ ಅಂತೀರಾ? ನೀವೇ ನೋಡಿ.
ದೀಪದ ಕೆಳಗೆ ಕತ್ತಲು ಅಂತಾರಲ್ಲ, ಅದು ನಮ್ಮ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ತವರು ಜಿಲ್ಲೆಗೆ ಹೇಳಿ ಮಾಡಿಸಿದಂತಿದೆ. ಸಾಂಸ್ಕೃತಿಕ ನಗರಿ ಎಂಬ ಪ್ರಖ್ಯಾತಿಗೆ ಪಾತ್ರವಾಗಿರುವ ಮೈಸೂರು ಜಿಲ್ಲೆಯ ಗ್ರಾಮವೊಂದಕ್ಕೆ ಇನ್ನೂ ವಿದ್ಯುತ್ ಸಂಪರ್ಕವೇ ನೀಡಿಲ್ಲ ಎಂದರೆ ನಂಬಲು ಸಿದ್ಧರಿದ್ದೀರಾ? ಅದರಲ್ಲೂ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿನಿಧಿಸುತ್ತಿರುವ ಕ್ಷೇತ್ರಕ್ಕೆ ಹೊಂದಿಕೊAಡೇ ಇರುವ ಕ್ಷೇತ್ರದಲ್ಲಿ ಇಂತಹ ಅನಾಗರಿಕ ಗ್ರಾಮವೊಂದಿದೆ ಎಂಬುದು ಪ್ರಸ್ತುತ ವ್ಯವಸ್ಥೆಗೆ ಹಿಡಿದ ಕನ್ನಡಿಯಾಗಿದೆ.
ಈ ಗ್ರಾಮಕ್ಕೆ ವಿದ್ಯುತ್ ಸಂಪರ್ಕವನ್ನ ಈವರೆಗೂ ಕಲ್ಪಿಸಿಲ್ಲ. ಇದು ನಾಗರಿಕ ಸಮಾಜವೇ ತಲೆ ತಗ್ಗಿಸುವ ವಿಚಾರವಾಗಿದ್ದು, ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯನವರ ತವರು ಜಿಲ್ಲೆ, ಸಂಸದ ಸುನೀಲ್ ಬೋಸ್ ಮತ್ತು ಶಾಸಕ ದರ್ಶನ್ ಧ್ರುವನಾರಾಯಣ್ ಪ್ರತಿನಿಧಿಸುವ ನಂಜನಗೂಡು ತಾಲ್ಲೂಕಿನ ದೊಡ್ಡಕವಲಂದೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗಟ್ಡವಾಡಿ ಗ್ರಾಮದ ಪ್ರಸ್ತುತ ಸ್ಥಿತಿ. ಗಟ್ಟವಾಡಿ ಗ್ರಾಮಸ್ಥರು ಇನ್ನೂ ವಿದ್ಯುತ್ ದೀಪವನ್ನೇ ಕಂಡಿಲ್ಲ ಎಂದರೆ ನಾವು ಎಂತಹ ಸಮಾಜದಲ್ಲಿದ್ದೇವೆ ಎಂಬ ಸಂದೇಹ ಬಾರದೇ ಇರದು.
ಗಟ್ಟವಾಡಿ ಗ್ರಾಮದ ಜನತಾ ಕಾಲೋನಿಯಲ್ಲಿ ವಾಸಿಸುವ ಸುಮಾರು 40ಕ್ಕೂ ಹೆಚ್ಚು ಮನೆಗಳಿಗೆ ಕಳೆದ 15 ವರ್ಷಗಳಿಂದ ವಿದ್ಯುತ್ ಸಂಪರ್ಕವಿಲ್ಲದೆ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಬಡಾವಣೆಯ ನಿವಾಸಿಗಳು ವಿದ್ಯುತ್ ಸಂಪರ್ಕಕ್ಕಾಗಿ ಕಳೆದ ಒಂದು ದಶಕದಿಂದ ಪರಿಪಾಟಲು ಪಡುತ್ತಿದ್ದಾರೆ. ವಿದ್ಯುತ್ ಕಂಬಗಳನ್ನು ಅಳವಡಿಸಿ ಕೊಡಿ ಎಂದು ಸಂಬoಧ ಪಟ್ಟ ಸ್ಥಳೀಯ ಗ್ರಾಮ ಪಂಚಾಯಿತಿಗೆ ಅಲೆದಾಡಿದರೂ ಈವರೆಗೆ ಕ್ಯಾರೇ ಎಂದಿಲ್ಲ. ರಾತ್ರಿ ಆದ್ರೆ ಈ ಬಡಾವಣೆ ಸಂಪೂರ್ಣವಾಗಿ ಕಗ್ಗತ್ತಿಲಿನಲ್ಲಿ ಮುಳುಗುತ್ತದೆ.
ವಿದ್ಯಾಬ್ಯಾಸಕ್ಕಾಗಿ ಮಕ್ಕಳು ಮೇಣದ ಬತ್ತಿಯನ್ನ ಅವಲಂಬಿಸಿದ್ದಾರೆ. ವಿದ್ಯುತ್ ಸಂಪರ್ಕಕ್ಕಾಗಿ ದೊಡ್ಡ ಕವಲಂದೆ ಗ್ರಾಮ ಪಂಚಾಯಿತಿಗೆ ಇಲ್ಲಿನ ನಿವಾಸಿಗಳು ಅಲೆದು ಬಸವಳಿದಿದ್ದಾರೆ. ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ನಿರ್ಮಲಾ ಗ್ರಾಮಸ್ಥರ ಮನವಿಗೆ ಸ್ಪಂದಿಸುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ವಿದ್ಯುತ್ ವ್ಯವಸ್ಥೆ ಇಲ್ಲದೆ ಮಕ್ಕಳ ಶೈಕ್ಷಣಿಕ ಚಟುವಟಿಕೆಗೆ ಅಡಚಣೆ ಉಂಟಾಗಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಕತ್ತಲಾದ್ರೆ ಹೊರಗಡೆ ಓಡಾಡಲು ಸಾಧ್ಯವಾಗುತ್ತಿಲ್ಲ. ಜೀವ ಭಯದಿಂದ ಮನೆಗಳಿಂದ ಹೊರಬರಲು ಆಗುತ್ತಿಲ್ಲ. ಭಾಗ್ಯಜ್ಯೋತಿ ಹೆಸರಲ್ಲಿ ಸರ್ಕಾರ ಕೋಟ್ಯಾಂತರ ಹಣ ವೆಚ್ಚ ಮಾಡುತ್ತಿದೆ. ಸಿಎಂ ತವರು ಜಿಲ್ಲೆಯಲ್ಲಿರುವ ಈ ಬಡಾವಣೆ ಮಾತ್ರ ಜನಪ್ರತಿನಿಧಿಗಳಿಗಾಗಲಿ ಅಧಿಕಾರಿಗಳಿಗಾಗಲಿ ಕಣ್ಣಿಗೆ ಬೀಳದಿರುವುದು ವಿಷಾಧನೀಯ.
ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ಕಾರ್ಯವೈಕರಿಗೆ ಗ್ರಾಮಸ್ಥರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಗಟ್ಟವಾಡಿ ಗ್ರಾಮಸ್ಥರ ಸಹನೆಯ ಕಟ್ಟೆ ಒಡೆಯುವ ಮುನ್ನ ಅಧಿಕಾರಿಗಳು ಎಚ್ಚೆತ್ತುಕೊಳ್ಳಬೇಕಿದೆ. ಈ ಗ್ರಾಮಕ್ಕೆ ವಿದ್ಯುತ್ ಸಂಪರ್ಕ ಕಲ್ಪಿಸುವ ಮೂಲಕ ನಾಡಿನ ದೊರೆ ಸಿದ್ದರಾಮಯ್ಯ ಅವರ ಹೆಸರಿಗೆ ಕಳಂಕ ಬಾರದಂತೆ ನೋಡಿಕೊಳ್ಳಬೇಕಾದ ಜವಾಬ್ದಾರಿ ಸಂಬoಧಿಸಿದ ಅಧಿಕಾರಿಗಳ ಮೇಲಿದ್ದು, ಈ ನಿಟ್ಟಿನಲ್ಲಿ ಅಧಿಕಾರಿಗಳು ಮುಂದಾಗುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ.