ಕೊಡಗಿನಲ್ಲಿ ಮಳೆ ಸುರಿದಾಗಲೆಲ್ಲ ‘ಆ ದುರಂತ’ ನೆನಪಾಗುವುದೇಕೆ?
1 min readಅಬ್ಬರಿಸಿದ ವರುಣ, ಎಲ್ಲಿ ನೋಡಿದರೂ ಕುಸಿದ ಗುಡ್ಡ, ಕಾಫಿ ತೋಟಗಳು, ಧರೆಗುರುಳಿದ ಮನೆಗಳು, ಭೂಮಂಡಲನ್ನೇ ಒಂದು ಮಾಡಿದ ಜಲರಾಶಿ, ಕುಸಿದ, ಬಿರುಕುಬಿಟ್ಟ ರಸ್ತೆಗಳು, ಅಡ್ಡಾದಿಡ್ಡಿ ನೆಲಕ್ಕುರಳಿದ ಮರಗಳು, ವಿದ್ಯುತ್ ಕಂಬಗಳು, ನೀರಿನಲ್ಲಿ ಮುಳುಗಡೆಯಾದ ವಸತಿ ಪ್ರದೇಶಗಳು, ಮುಗಿಲು ಮುಟ್ಟಿದ ಆಕ್ರಂದನ, ಒಂದೇ ಊರಲ್ಲಿದ್ದರೂ ತಮ್ಮವರನ್ನು ಸಂಪರ್ಕಿಸಲಾಗದೆ ಅಸಹಾಯಕತೆಯಿಂದ ಕಣ್ಣೀರಿಡುತ್ತಿರುವ ಜನ..
ಇದೆಲ್ಲವೂ 2018ರಲ್ಲಿ ಕೊಡಗಿನಲ್ಲಿ ಮಳೆಗಾಲದಲ್ಲಿ ಸಂಭವಿಸಿದ ಜಲಪ್ರಳಯದ ದೃಶ್ಯಗಳು.
ಕೊಡಗಿನಲ್ಲಿ ಕುಂಭದ್ರೋಣ ಮಳೆ ಸುರಿದಾಗಲೆಲ್ಲ ಜನರ ಮುಂದೆ ಅವತ್ತಿನ ಆ ಭಯಾನಕ ದೃಶ್ಯಗಳು ಎದುರಿಗೆ ಬಂದು ನಿಲ್ಲುತ್ತವೆ. 2018ರಿಂದ 2020ರವರೆಗೆ ಮೂರು ವರ್ಷಗಳ ಕಾಲ ಮಳೆಗಾಲದಲ್ಲಿ ಭೂಕುಸಿತ ಸಂಭವಿಸಿತ್ತಲ್ಲದೆ, ಮೂರು ವರ್ಷವೂ ಜನ ಮತ್ತು ಜಾನುವಾರನ್ನು ಬಲಿಪಡೆದಿತ್ತು. ಅದುವರೆಗೆ ನೋಡದ ವರುಣನ ರುದ್ರನರ್ತನವನ್ನು ಜನ ನೋಡಿದ್ದರು ಅಷ್ಟೇ ಅಲ್ಲದೆ ಬೆಚ್ಚಿ ಬಿದ್ದಿದ್ದರು. ಇವತ್ತಿಗೂ ಕೊಡಗಿನಲ್ಲಿ ಮಳೆಗಾಲ ಬಂತೆಂದರೆ ಸಣ್ಣಗೆ ನಡುಕವುಂಟಾಗುತ್ತದೆ. ಮನೆ ಎದುರಿನ, ಹಿಂಬದಿಯ ಬೆಟ್ಟಗುಡ್ಡಗಳು ಯಾವಾಗ ಕುಸಿದು ಬಿಡುತ್ತವೆಯೋ ಎಂಬ ಭಯ ಕಾಡುತ್ತದೆ.
ಅವತ್ತು ಅಂದರೆ 2018ರ ಆಗಸ್ಟ್ ನಲ್ಲಿ ಆಗಿದ್ದು ಬರೀ ಮಳೆ, ಭೂಕುಸಿತವಲ್ಲ ಅರ್ಥಾತ್ ಜಲಪ್ರಳಯ. ಅವತ್ತಿನ ಮುಂಗಾರು ಆರಂಭವೇ ವಿಚಿತ್ರವಾಗಿತ್ತು. ಮುಂಗಾರು ಆರಂಭದ ಮೊದಲೇ ಇಲ್ಲಿ ಭೂಮಿ ಕಂಪಿಸಿತ್ತು.. ಭಾರೀ ಸದ್ದುಗಳು ಕೇಳಿ ಬಂದಿದ್ದವು. ಸಿಡಿಲು ಗುಡುಗಿನ ಆರ್ಭಟಗಳು ಜೋರಾಗಿದ್ದವು. ಸಿಡಿಲ ಅಬ್ಬರ ಕೇಳಿದ ಹಿರಿಯರು ಇಂತಹದೊಂದು ಗುಡುಗು, ಸಿಡಿಲಿನ ಸದ್ದನ್ನು ತಮ್ಮ ಜೀವನಾವಧಿಯಲ್ಲೇ ಕೇಳಿರಲಿಲ್ಲ ಎಂದಿದ್ದರು. ಬಹುಶಃ ಅವತ್ತು ನಡೆದ ಒಂದೆರಡು ಘಟನೆಗಳು ಜಲಪ್ರಳಯದ ಮುನ್ಸೂಚನೆಯಾಗಿತ್ತಾ? ಗೊತ್ತಿಲ್ಲ ಆದರೆ ಗೊತ್ತಾಗುವ ಹೊತ್ತಿಗೆ ದುರಂತವೊಂದು ನಡೆದು ಹೋಗಿತ್ತು.
ಹಾಗೆನೋಡಿದರೆ ಕೊಡಗಿನವರಿಗೆ ಮಳೆ ಹೊಸತೇನಲ್ಲ. ಎಂತಹದ್ದೋ ಕುಂಭದ್ರೋಣ ಮಳೆಗಳನ್ನು ನೋಡಿದ್ದಾರೆ. ಅದಕ್ಕೆ ಅಂಜದೆ ಎದೆಗೊಟ್ಟು ಬದುಕು ಸಾಗಿಸಿದ್ದಾರೆ. ಬೆಟ್ಟಗುಡ್ಡಗಳ ನಡುವೆ, ನದಿ ಬದಿಯಲ್ಲಿ ಯಾವುದೇ ಭಯವಿಲ್ಲದೆ ಒಂಟಿ ಮನೆಗಳನ್ನು ಕಟ್ಟಿಕೊಂಡು ಬದುಕು ಸವೆಸಿದ್ದಾರೆ. ಆದರೆ ಅಂತಹ ಜನ ಅವತ್ತು ತಮ್ಮ ಕಣ್ಣಮುಂದೆ ನಡೆದ ದುರಂತದಿಂದ ನಲುಗಿ ಹೋಗಿದ್ದರು. ಕಷ್ಟಪಟ್ಟು ಕಟ್ಟಿದ ಮನೆ, ಮಾಡಿದ ತೋಟ, ಚಿನ್ನಾಭರಣ, ವಾಹನ ಎಲ್ಲವನ್ನೂ ಕಳೆದುಕೊಂಡು ಜೀವ ಉಳಿದರೆ ಸಾಕೆಂದು ಆಶ್ರಯ ಬೇಡಿ ಗಂಜಿಕೇಂದ್ರ ಸೇರಿದ್ದರು. ಅಲ್ಲಿ ತಮಗಾದ ತೊಂದರೆಯನ್ನು ನೆನೆಯುತ್ತಾ ಕಣ್ಣೀರಿಟ್ಟಿದ್ದರು.
ಇದೆಲ್ಲವೂ ನಡೆದು ಐದಾರು ವರ್ಷಗಳು ಕಳೆದಿವೆ. 2018 ರಿಂದ 2020ರ ತನಕವೂ ಮಳೆಗಾಲದಲ್ಲಿ ಪ್ರವಾಹ ಭೂಕುಸಿತದ ಮೂಲಕ ಬಲಿಪಡೆದಿದ್ದ ವರುಣ ಆ ನಂತರ ತನ್ನ ಅಬ್ಬರವನ್ನು ಕಡಿಮೆ ಮಾಡಿದ್ದನು. 2021 ಮತ್ತು 22ರಲ್ಲಿ ಮಳೆ ಸುರಿದು ಪ್ರವಾಹ ಸೃಷ್ಟಿಯಾಗಿತ್ತಾದರೂ ಹೇಳಿಕೊಳ್ಳುವಂತಹ ದುರಂತಗಳು ಸಂಭವಿಸಿರಲಿಲ್ಲ. ಮುಂಗಾರು ಆಶಾದಾಯಕವಾಗಿತ್ತು. ಆದರೆ 2023ರಲ್ಲಿ ಮಾತ್ರ ಮುಂಗಾರು ಬಿರುಸುಗೊಳ್ಳದೆ ಬರಗಾಲ ಸೃಷ್ಟಿಯಾಗಿತ್ತು. ಈ ಬಾರಿ ಬೇಸಿಗೆಯಲ್ಲಿ ಮಳೆ ಬಾರದೆ ಹೋದರೂ ಮುಂಗಾರಿನ ಆರಂಭ ಉತ್ತಮವಾಗಿದೆ.
ಆದರೆ ಮಳೆ ಅಬ್ಬರಿಸಿದಾಗಲೆಲ್ಲ ಭಯದ ವಾತಾವರಣ ಇಲ್ಲಿ ಸೃಷ್ಟಿಯಾಗುತ್ತದೆ. ಅದಕ್ಕೆ ಕಾರಣಗಳು ಏನು ಎಂಬುದನ್ನು ನೋಡುತ್ತಾ ಹೋದರೆ ಪ್ರಕೃತಿ ನಮ್ಮ ಕಡೆಗೆ ಬೊಟ್ಟು ಮಾಡಿ ತೋರಿಸುತ್ತದೆ. 2018ಕ್ಕೂ ಮೊದಲು ಕೆಲವು ವರ್ಷಗಳ ಕಾಲ ಇಲ್ಲಿ ವಾಡಿಕೆಯ ಮಳೆ ಸುರಿಯುತ್ತಿರಲಿಲ್ಲ. ಹೀಗಾಗಿ ಇಲ್ಲಿನ ಜನ ಮಳೆಯ ಬಗ್ಗೆ ತಲೆಕೆಡಿಸಿಕೊಂಡಿರಲಿಲ್ಲ. ನದಿಗಳು ಉಕ್ಕಿ ಹರಿಯದೆ ಕೆಲವು ವರ್ಷಗಳೇ ಕಳೆದು ಹೋಗಿದ್ದವು. ಜತೆಗೆ ಆಧುನಿಕ, ವಾಣಿಜ್ಯಕರಣದ ಬದುಕು ಇಲ್ಲಿ ತೆರೆದುಕೊಳ್ಳತೊಡಗಿತು. ಪರಿಣಾಮ ಹಿಂದಿನವರು ಯಾವುದನ್ನು ಮಾಡಬೇಡಿ ಎಂದಿದ್ದರೋ ಅದನ್ನೇ ಇಲ್ಲಿನವರು ಮಾಡತೊಡಗಿದ್ದರು.
ನದಿ ದಡಗಳು ಒತ್ತುವರಿಯಾಗಿ ಮನೆಗಳು ಮೇಲೆದ್ದವು. ಸದಾ ನೀರಿನಾಶ್ರಯವಿದ್ದ ಪ್ರದೇಶಗಳನ್ನು ಭತ್ತದ ಗದ್ದೆಯಾಗಿಸಿ ಬೆಳೆ ಬೆಳೆಯುವಲ್ಲಿ ಹಿರಿಯರು ಸಫಲರಾಗಿದ್ದರು. ಆದರೆ ಅವುಗಳನ್ನು ನಿವೇಶನಗಳನ್ನಾಗಿ ಪರಿವರ್ತಿಸಿ ಮಾರಾಟ ಮಾಡುವ ಕಾರ್ಯಗಳು ನಡೆದವು. ಹೊರಗಿನವರು ಬಂದು ಗುಡ್ಡಪ್ರದೇಶಗಳನ್ನು ಖರೀದಿಸಿ ಅಲ್ಲಿ ಜೆಸಿಬಿ ಬಳಸಿ ರಸ್ತೆಗಳನ್ನು ಮಾಡಿದರು, ಕಟ್ಟಡ ಕಟ್ಟಿ ಹೋಂಸ್ಟೇ, ರೆಸಾರ್ಟ್ ಮಾಡಿ ಹಣ ಸಂಪಾದಿಸುವ ದಾರಿ ಕಂಡುಕೊಂಡರು. ಬೆಟ್ಟಗುಡ್ಡವೆನ್ನದೆ ಮನೆಗಳು ತಲೆ ಎತ್ತಿದವು. ಮುಂದೆ ಏನು ಆಗಲ್ಲ ಎಂಬ ಹುಂಬ ಧೈರ್ಯ ಏನು ಮಾಡಬಾರದಿತ್ತೋ ಅದನ್ನು ಮಾಡಿಸಿತು.
ಪಟ್ಟಣ ಪ್ರದೇಶದಲ್ಲಿ ಎಲ್ಲೆಂದರಲ್ಲಿ ಮನೆಗಳಾದವು. ನೀರು ಹರಿದು ಹೋಗಲು ಅವಕಾಶವಿಲ್ಲದಂತೆ ಕಟ್ಟಡಗಳು ಎದ್ದು ನಿಂತವು ಪರಿಣಾಮ ಒಂದಷ್ಟು ಪ್ರದೇಶಗಳು ಜಲಾವೃತವಾಗುವಂತಾಯಿತು. ಗುಡ್ಡಗಳನ್ನು ಅಗೆದು ಹಳ್ಳ, ಕಂದಕಗಳಿಗೆ ಮಣ್ಣು ಸುರಿದು ಮಾಡಿದ ರಸ್ತೆಗಳು ಮಳೆಯ ಅಬ್ಬರವಿಲ್ಲದ ಕಾರಣ ಏನೂ ಆಗಿರಲಿಲ್ಲ ಆದರೆ 2018ರ ಕುಂಭದ್ರೋಣ ಮಳೆಗೆ ಗುಡ್ಡ ಕುಸಿಯುತ್ತಿದ್ದಂತೆಯೇ ರಸ್ತೆಗಳು ಕುಸಿದವು, ಬಿರುಕು ಬಿಟ್ಟವು. ಅದು ಈಗಲೂ ಮುಂದುವರೆಯುತ್ತಾ ಸಾಗಿದ್ದು, ಮಳೆ ಹೆಚ್ಚಾದಂತೆಲ್ಲ ಅಲ್ಲಲ್ಲ ರಸ್ತೆ, ಭೂಕುಸಿತಗಳು ಸಂಭವಿಸುವುದು ಕಂಡು ಬರುತ್ತಿದೆ. ಜತೆ ಮಳೆ ಬಂದು ಹಳ್ಳಕೊಳ್ಳ, ನದಿಗಳು ಉಕ್ಕಿ ಹರಿದರೆ ನೀರು ಮನೆಯೊಳಗೆ ನುಗ್ಗುತ್ತದೆ.
ನದಿತಟದ ಪ್ರದೇಶಗಳಲ್ಲಿ ವಸತಿ ಪ್ರದೇಶಗಳು ನಿರ್ಮಾಣಗೊಂಡಿದ್ದು, ಪ್ರವಾಹ ಏರ್ಪಟ್ಟಾಗಲೆಲ್ಲ ಮನೆಗಳು ಜಲಾವೃತವಾಗುತ್ತವೆ. ಇನ್ನು ಗುಡ್ಡವನ್ನು ಸಮತಟ್ಟು ಮಾಡಿ ಕಟ್ಟಡ ನಿರ್ಮಿಸಿದ್ದರಿಂದ ಭೂ ಕುಸಿತ ಸಂಭವಿಸುತ್ತಿವೆ. ಹೀಗಾಗಿ ಧಾರಾಕಾರ ಮಳೆ ಸುರಿಯಲಾರಂಭಿಸಿದಾಗ ಜಿಲ್ಲೆಯ ಜನರಲ್ಲಿ ಆತಂಕ ನಿರ್ಮಾಣವಾಗುತ್ತಿದೆ. ಇದು ಮುಗಿಯುವ ಕತೆಯಲ್ಲ ಪ್ರತಿ ಮಳೆಗಾಲದ ವ್ಯಥೆಯಾಗಿ ಮುಂದುವರೆಯುತ್ತಿರುವುದಂತು ಸತ್ಯ.
#ctvnews #ctvNews #ctv
Top News: Latest Trending in India, Buzz, World Trending News, Hot on Social Media, What is Trending in the World, Trending on Social Media.
►Watch LIVE: https://shashwatha.com/player.php?url=https://shashwatha.com/hls/shashwatha/ctvnews.m3u8
►CTV News : https://ctvnewskannada.com/
►Subscribe to Ctv News: https://www.youtube.com/channel/UCHtq26kA5D5anCbPD3HoURw
►Big News Big Update : https://ctvnewskannada.com/
► Download CTV Android App: https://play.google.com/store/apps/details?id=com.ctv.ctvnews
► Like us on Facebook: https://www.facebook.com/ctvnewschikkaballapura
► Follow us on Instagram: https://www.instagram.com/ctvnewschikkaballapura/
► Follow us on Twitter: https://twitter.com/ctvnewscbpura
-news #ctv #ctvnewskannada #ctvchikkaballapura #ctvnewsmedia #ctvlive#ctvnewsupdate #todaynews #latestnewstoday