ಅಮಿತ್ ಶಾ ಹೇಳಿಕೆ ಖಂಡಿಸಿ ದಲಿತ ಸಂಘಟನೆಗಳ ಪ್ರತಿಭಟನೆ

ಶಿಡ್ಲಘಟ್ಟದಲ್ಲಿ ಅಪರಾಧ ಮಾಸಾಚರಣೆ

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಗುಣಮುಖರಾಗಲಿ

ರಾಗಿ, ಹುರಳಿ ಒಕ್ಕಣೆ ಕೇಂದ್ರವಾದ ರಾಜ್ಯ ಹೆದ್ದಾರಿ

December 25, 2024

Ctv News Kannada

Chikkaballapura

ವಾಲ್ಮೀಕಿ ಅಭಿವೃದ್ಧಿ ನಿಗಮದ ಅಕ್ರಮ: ನಾಳೆ ಬಿಜೆಪಿಯಿಂದ ಸಿಎಂ ಸಿದ್ಧರಾಮಯ್ಯ ನಿವಾಸಕ್ಕೆ ಮುತ್ತಿಗೆ

1 min read

ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದಲ್ಲಾದ ಕೋಟ್ಯಂತರ ರೂಪಾಯಿ ಹಗರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇರವಾಗಿ ಶಾಮೀಲಾಗಿದ್ದಾರೆ ಎಂದು ಆರೋಪಿಸಿರುವ ಪ್ರತಿಪಕ್ಷ ನಾಯಕ ಆರ್‌.ಅಶೋಕ, ನೈತಿಕತೆಯ ಹೊಣೆ ಹೊತ್ತು ಮುಖ್ಯಮಂತ್ರಿ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದ್ದಾರೆ.

ಮುಖ್ಯಮಂತ್ರಿ ರಾಜೀನಾಮೆ ನೀಡದಿದ್ದಲ್ಲಿ ಬಿಜೆಪಿಯಿಂದ ಇನ್ನಷ್ಟು ತೀವ್ರ ಹೋರಾಟ ನಡೆಸಲಾಗುವುದು ಎಂದು ಅವರು ಖಡಕ್‌ ಎಚ್ಚರಿಕೆ ನೀಡಿದ್ದಾರೆ.

ಈ ಹಗರಣದಲ್ಲಿ ಮಾಜಿ ಸಚಿವ ಬಿ.ನಾಗೇಂದ್ರ ಸಣ್ಣ ನೆಪ ಮಾತ್ರ. ಇದರ ಹಿಂದೆ ಮುಖ್ಯಮಂತ್ರಿ ಸಿದ್ದರಾಮಯ್ಯನವರ ನೇರ ಪಾತ್ರವಿದೆ. ಹಣಕಾಸು ಸಚಿವರೂ ಆಗಿರುವ ಮುಖ್ಯಮಂತ್ರಿಯ ಗಮನಕ್ಕೆ ಬಾರದೆ 187 ಕೋಟಿ ರೂ. ಮೊತ್ತದ ಹಗರಣ ನಡೆಯಲು ಸಾಧ್ಯವೇ ಇಲ್ಲ. ಸಿದ್ದರಾಮಯ್ಯ ತಮ್ಮ ಕುರ್ಚಿ ಉಳಿಸಿಕೊಳ್ಳಲು ಲೋಕಸಭಾ ಚುನಾವಣೆಗಾಗಿ ರಾಹುಲ್‌ ಗಾಂಧಿ ಬಳಗಕ್ಕೆ ಈ ಹಣ ತಲುಪಿಸಲು ಪ್ರಯತ್ನ ಮಾಡಿದ್ದಾರೆ. ಆದರೆ ಕಾಂಗ್ರೆಸ್‌ನ ದುರದೃಷ್ಟವೆಂಬಂತೆ ಪ್ರಾಮಾಣಿಕ ಅಧಿಕಾರಿಯ ಆತ್ಮಹತ್ಯೆಯಿಂದಾಗಿ ಹಗರಣ ಹೊರಬಂದಿದೆ. ಈಗ ಇದನ್ನು ಮುಚ್ಚಿಹಾಕಲು ಎಲ್ಲ ಬಗೆಯ ಪ್ರಯತ್ನಗಳನ್ನು ಮಾಡಲಾಗಿದೆ ಎಂದು ಆರ್‌.ಅಶೋಕ ಆರೋಪಿಸಿದ್ದಾರೆ.

ದಲಿತರ ಚಾಂಪಿಯನ್‌ ಎಂದು ಕರೆದುಕೊಳ್ಳುವ ಸಿಎಂ ಸಿದ್ದರಾಮಯ್ಯ ಈ ಹಗರಣ ಮಾಡಿಯೇ ತಮ್ಮ ಸ್ಥಾನ ಭದ್ರ ಮಾಡಿಕೊಳ್ಳಲು ನೋಡಿದ್ದರು. ಹೈಕಮಾಂಡ್‌ಗೆ ಕಪ್ಪ ಸಲ್ಲಿಸದೇ ಇದ್ದಲ್ಲಿ ಸಿಎಂ ಸ್ಥಾನ ಕಳೆದುಕೊಂಡು ಅದನ್ನು ಡಿ.ಕೆ.ಶಿವಕುಮಾರ್‌ಗೆ ಬಿಟ್ಟುಕೊಡಬೇಕಾಗಿತ್ತು. ಅದನ್ನು ತಪ್ಪಿಸಲು ದಲಿತರ ಹಣವನ್ನು ದುರ್ಬಳಕೆ ಮಾಡಿದ್ದಾರೆ. ಸಚಿವ ಬಿ.ನಾಗೇಂದ್ರ ಅವರಿಂದ ರಾಜೀನಾಮೆ ಪಡೆದು ತಮ್ಮ ತಲೆಯನ್ನು ಉಳಿಸಿಕೊಂಡಿದ್ದಾರೆ ಎಂದು ದೂರಿದ್ದಾರೆ.

ದಲಿತರಿಗೆ ಸೇರಿದ ಒಟ್ಟು 187 ಕೋಟಿ ರೂಪಾಯಿಯನ್ನು ಬೇನಾಮಿ ಐಟಿ ಕಂಪನಿಗಳ ಖಾತೆಗೆ ವರ್ಗಾಯಿಸಲಾಗಿದೆ. ಈವರೆಗೆ ಆರೋಪಿಗಳಿಂದ 14 ಕೋಟಿ ರೂ, ಬ್ಯಾಂಕ್‌ ಖಾತೆಗಳಿಂದ 10 ಕೋಟಿ ರೂ. ವಶಕ್ಕೆ ಪಡೆಯಲಾಗಿದೆ. ಉಳಿದ ಹಣವನ್ನು ಸಿಎಂ ಸಿದ್ದರಾಮಯ್ಯ ತಮ್ಮ ಜೇಬಿನಿಂದ ಕೊಡುತ್ತಾರಾ ಅಥವಾ ಕೆಪಿಸಿಸಿ ಬ್ಯಾಂಕ್‌ ಖಾತೆಯಿಂದ ಪಡೆಯಲಾಗುವುದೇ ಎಂಬ ಬಗ್ಗೆ ಮಾಹಿತಿ ಇಲ್ಲ. ನಷ್ಟವಾದ ಈ ಹಣ ದಲಿತರಿಗೆ ಸೇರಿದ್ದು, ಇದನ್ನು ವಾಪಸ್‌ ಪಡೆಯಲು ಏನು ಮಾಡುತ್ತಾರೆ ಎಂದು ಸರ್ಕಾರ ಸ್ಪಷ್ಟ ಮಾಹಿತಿ ನೀಡಬೇಕಿದೆ ಎಂದು ಆರ್‌.ಅಶೋಕ ಒತ್ತಾಯಿಸಿದ್ದಾರೆ.

ಬಾಕಿ ಹಣ ಎಲ್ಲಿ ಹೋಯಿತು? ಅಂದರೆ ಅದನ್ನು ಗುಳುಂ ಮಾಡಲಾಗಿದೆಯೇ? ನಿಗಮದ ಹಣ ಪಕ್ಕದ ತೆಲಂಗಾಣ ರಾಜ್ಯದ ಚಿನ್ನಾಭರಣ ಅಂಗಡಿಗಳು, ಮದ್ಯದ ಅಂಗಡಿಗಳು ಸೇರಿದಂತೆ ನೂರಾರು ಖಾತೆಗಳಿಗೆ ವರ್ಗಾವಣೆ ಆಗಿದೆ. ಅದು ಸಹ ಮಾರ್ಚ್ ತಿಂಗಳ ಅಂತ್ಯದಲ್ಲಿ ನಡೆದಿದೆ. ಅಂತರರಾಜ್ಯ ವಹಿವಾಟು ಆಗಿರುವ ಇಷ್ಟೊಂದು ದೊಡ್ಡ ಬಹುಕೋಟಿ ಹಗರಣವನ್ನು ಸಿಬಿಐಗೆ ಕೊಡಲು ಹಿಂದೇಟು ಯಾಕೆ? ಈ ಹಗರಣಕ್ಕೂ ತೆಲಂಗಾಣ ಚುನಾವಣೆಗೂ ಇರುವ ನಂಟು ಹೊರಬರಬಹುದು ಎಂಬ ಭಯವೇ? ಎಂದು ಅವರು ಮುಖ್ಯಮಂತ್ರಿಯವರನ್ನು ಪ್ರಶ್ನೆ ಮಾಡಿದ್ದಾರೆ.

ವಿಶೇಷ ತನಿಖಾ ದಳ ಯಾರು ಯಾರನ್ನೋ ವಿಚಾರಣೆ ಮಾಡುತ್ತಿದೆ. ಆದರೆ ಈವರೆಗೆ ಮಾಜಿ ಸಚಿವ ಬಿ.ನಾಗೇಂದ್ರ ಅವರನ್ನು ಕೂರಿಸಿ ವಿಚಾರಣೆ ನಡೆಸಿಲ್ಲ. ಹಣಕಾಸು ಸಚಿವರೂ ಆಗಿರುವ ಮುಖ್ಯಮಂತ್ರಿಗಳ ಬಳಿ ಪೊಲೀಸರು ಯಾವುದೇ ಪ್ರಶ್ನೆಗಳನ್ನು ಕೇಳಿಲ್ಲ. ಹಣಕಾಸು ಇಲಾಖೆಯ ಗಮನಕ್ಕೆ ಬಾರದೆ ಇದು ನಡೆದಿಲ್ಲ ಎಂದಾದ ಮೇಲೆ ಸಿದ್ದರಾಮಯ್ಯ ಯಾಕೆ ಈ ಬಗ್ಗೆ ಮಾತನಾಡುತ್ತಿಲ್ಲ ಎಂದು ಅವರು ಪ್ರಶ್ನಿಸಿದ್ದಾರೆ.

ಮಾಜಿ ಸಚಿವ ಬಿ.ನಾಗೇಂದ್ರ ಅವರನ್ನು ಬಲಿಪಶು ಮಾಡಿ ದೊಡ್ಡ ತಲೆಗಳನ್ನು ರಕ್ಷಿಸಲಾಗುತ್ತಿದೆ. ಈ ಪ್ರಕರಣಕ್ಕೆ ತಾರ್ಕಿಕ ಅಂತ್ಯ ಸಿಗುವವರೆಗೆ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೆ ನೀಡುವವರೆಗೂ ನಮ್ಮ ಹೋರಾಟ ನಿಲ್ಲುವುದಿಲ್ಲ. ಜೂನ್ 3 ರಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹಾಗೂ ನಾನು ಕಾರ್ಯಕರ್ತರೊಂದಿಗೆ ಮುಖ್ಯಮಂತ್ರಿಗಳ ನಿವಾಸಕ್ಕೆ ಮುತ್ತಿಗೆ ಹಾಕಲಿದ್ದೇವೆ. ಬುಧವಾರ ಬೆಳಗ್ಗೆ 9.30ಕ್ಕೆ ಕುಮಾರಕೃಪಾ ಅತಿಥಿ ಗೃಹದಿಂದ ಮೆರವಣಿಗೆಯಲ್ಲಿ ಹೊರಟು ಸಿಎಂ ನಿವಾಸಕ್ಕೆ ಮುತ್ತಿಗೆ ಹಾಕಲಾಗುವುದು ಎಂದು ಆರ್‌.ಅಶೋಕ ತಿಳಿಸಿದ್ದಾರೆ.

About The Author

Leave a Reply

Your email address will not be published. Required fields are marked *