ಉಪಯೋಗಕ್ಕೆ ಬಾರದ ಪ್ರಯಾಣಿಕರ ತಂಗುದಾಣ
1 min readಉಪಯೋಗಕ್ಕೆ ಬಾರದ ಪ್ರಯಾಣಿಕರ ತಂಗುದಾಣ
ಉಪಯೋಗಿಸಲು ಆಗದಂತೆ ಕಾಲುವೆ ಅಡ್ಡಿ
ಇನ್ನು ಕೆಲವು ಉಪಯೋಗಿಸಲಾರದ ಸ್ಥಿತಿಯಲ್ಲಿವೆ
ಗ್ರಾಮೀಣ ಭಾಗದಿಂದ ಸಾರ್ವಜನಿಕ ಬಸ್ ಸಂಚಾರ ಇರುವ ಮುಖ್ಯ ರಸ್ತೆಗಳಿಗೆ ಸಂಪರ್ಕ ಕಲ್ಪಿಸುವ ಕ್ರಾಸ್‌ಗಳಲ್ಲಿ ಪ್ರಯಾಣಿಕರಿಗೆ ತಮ್ಮ ಮಾರ್ಗದ ಬಸ್ ಬರುವವರೆಗೂ ಮಳೆ, ಬಿಸಿಸಿನಿಂದ ರಕ್ಷಣೆ ಪಡೆಯಲು ಮತ್ತು ವಿಶ್ರಮಿಸಲು ಅನುಕೂಲಕ್ಕಾಗಿ ಪ್ರಯಾಣಿಕರ ತಂಗುದಾಣಗಳನ್ನು ನಿರ್ಮಿಸಲಾಗಿದೆ. ಆದರೆ ಬಾಗೇಪಲ್ಲಿ ತಾಲೂಕಿನಲ್ಲಿ ಹಾಗೆ ನಿರ್ಮಿಸಲಾಗಿರುವ ತಂಗುದಾಣಗಳು ಇಂದು ಉಪಯೋಗಕ್ಕೆ ಬಾರದಂತಾಗಿರುವುದು ಮಾತ್ರ ವಿಪರ್ಯಾಸ.
ಬಾಗೇಪಲ್ಲಿ ತಾಲೂಕಿನ ನಲ್ಲಪರೆಡ್ಡಿಪಲ್ಲಿ, ಚನ್ನರಾಯನಪಲ್ಲಿ, ಚಿನ್ನೇಪಲ್ಲಿ ಸೇರಿದಂತೆ ಬಾಗೇಪಲ್ಲಿ ಪಟ್ಟಣದ ಗೂಳೂರು ಸರ್ಕಲ್ ಬಳಿ ತಂಗುದಾಣಗಳನ್ನು ನಿರ್ಮಿಸಲಾಗಿದೆ. ಕೆಲ ತಂಗುದಾಣಗಳು ನಿರ್ಮಿಸಿ ಅನೇಕ ವರ್ಷಗಳೇ ಕಳೆದಿವೆ. ಇನ್ನು ಕೆಲವು ಇತ್ತೀಚಿ ವರ್ಷಗಳಲ್ಲಿಯೇ ನಿರ್ಮಿಸಿರುವುದಾಗಿದೆ. ಆದರೆ ಸಾವಿರಾರು ರುಪಾಯಿ ವೆಚ್ಚದಲ್ಲಿ ನಿರ್ಮಿಸಿರುವ ಈ ತಂಗುದಾಣಗಳು ಪ್ರಸ್ತುತ ಉಪಯೋಗಕ್ಕೆ ಬಾರದಂತಾಗಿವೆ.
ಬಾಗೇಪಲ್ಲಿ ತಾಲೂಕಿನ ನಲ್ಲಪರೆಡ್ಡಿಪಲ್ಲಿ ಕ್ರಾಸ್ ಬಳಿ 2016-17ನೇ ಸಾಲಿನ ಕೆಎಲ್‌ಎಲ್‌ಎಡಿಪಿ ಯೋಜನೆಯಡಿ ಸುಮಾರು ೫ ಲಕ್ಷ ರೂಪಾಯಿ ವೆಚ್ಚದಲ್ಲಿ ಪ್ರಯಾಣಿಕರ ತಂಗುದಾಣ ನಿರ್ಮಿಸಲಾಗಿದೆ. ಇದರ ಉಪಯೋಗ ಮಾತ್ರ ಪ್ರಯಾಣಿಕರಿಕೆ ದೊರೆಯುತ್ತಿಲ್ಲ, ಬದಲಾಗಿ ಸಿನಿಮಾ ಪೋಸ್ಟರ್‌ಗಳನ್ನು ಅಂಟಿಸಲು ಸೀಮಿತವೆಂಬoತಾಗಿದೆ. ಇದರ ಜೊತೆಗೆ ಪುಡಾರಿಗಳು ಮದ್ಯಸೇವನೆಗೆ ಸೂಕ್ತ ಜಾಗವಾಗಿ ಬದಲಾಗಿವೆ. ಕಟ್ಟಡ ಉತ್ತಮವಾಗಿದ್ದು, ಸುಸ್ಥಿತಯಲ್ಲಿದ್ದರೂ ಹಲವು ವರ್ಷಗಳ ಹಿಂದೆ ಯಾವುದೋ ನೀರಾವರಿ ಕಾಮಗಾರಿ ನೆಪದಲ್ಲಿ ನಲ್ಲಪರೆಡ್ಡಿಪಲ್ಲಿ ಕೆರೆಯ ಕೋಡಿ ಇರುವ ಜಾಗದಿಂದ ರಸ್ತೆ ಬದಿ ದೊಡ್ಡಮಟ್ಟದ ಕಾಲುವೆ ತೆಗೆಯಲಾಗಿದೆ.
ಹಾಗೆ ತೆಗೆದಿರುವ ಕಾಲುವೆ ಪ್ರಯಾಣಿಕರ ತಂಗುದಾಣದ ಮುಂಭಾಗದಲ್ಲೂ ತೋಡಿದ್ದು, ಆ ಕಾಲುವೆಯನ್ನು ದಾಟಲಾಗಷ್ಟು ಆಳವಾಗಿದೆ. ಇದರಿಂದಾಗಿ ಬಸ್‌ಗಾಗಿ ಕಾಯುವ ಪ್ರಯಾಣಿಕರು ಮರದ ಕೆಳಗೆಯೋ ಅಥವಾ ರಸ್ತೆ ಬದಿಯಲ್ಲೋ ಆಸರೆ ಪಡೆಯುತ್ತಾರೆ ಹೊರತು ಈ ತಂಗುದಾಣದ ಒಳಗೆ ಹೋಗಲು ಸಾಧ್ಯವಾಗುತ್ತಿಲ್ಲ. ನಮ್ಮ ಗ್ರಾಮದ ಕ್ರಾಸ್‌ನಲ್ಲಿ ಪ್ರಯಾಣಿಕರಿಗಾಗಿ ತಂಗುದಾಣ ಇದ್ದರೂ ಅದರ ಮುಂಭಾಗದಲ್ಲಿ ತೆಗೆದ ಕಾಲುವೆಯಿಂದಾಗಿ ತಂಗುದಾಣದೊಳಗೆ ಹೋಗಲು ಹಿಂಜರಿಯಬೇಕಾಗಿದೆ. ಒಂದು ವೇಳೆ ಬೇರೆ ಕಡೆಯಿಂದ ತಂಗುದಾಣ ಸುತ್ತಿಕೊಂಡು ಹೋದಾಗ ಬಸ್ ಬಂದ ತಕ್ಷಣ ಓಡಿ ಹೋಗಿ ಬಸ್ ಹತ್ತಲು ಸಾಧ್ಯವಾಗುವುದಿಲ್ಲ. ಹಾಗಾಗಿ ತಂಗುದಾಣವಿದ್ದರೂ ಬಳಸಲಾಗುತ್ತಿಲ್ಲ ಎಂದು ಪ್ರಯಾಣಿಕರು ಅಳಲು ತೋಡಿಕೊಂಡಿದ್ದಾರೆ.
ಇನ್ನು ನಲ್ಲಪರೆಡ್ಡಿಪಲ್ಲಿ ಗ್ರಾಮದ ಎನ್.ರವಿಚಂದ್ರ ಮಾತನಾಡಿ, ದಿಢೀರ್ ಮಳೆ ಬಂದಾಗ ಅಥವಾ ಬಸ್ ತಡವಾದಾಗ ಪ್ರಯಾಣಿಕರ ತಂಗುದಾಣದಲ್ಲಿ ವಿಶ್ರಮಿಸಲು ಸಾಧ್ಯವಾಗದಂತೆ ತಂಗುದಾಣದ ಮುಂದೆ ಕಾಲುವೆ ತೆಗೆದು ಅಡ್ಡಿ ಪಡಿಸಲಾಗಿದೆ. ಸಧ್ಯಕ್ಕೆ ಕಾಲುವೆ ಕಾಮಗಾರಿ ಮೂರು ವರ್ಷಗಳಿಂದ ಸ್ಥಗಿತವಾಗಿದ್ದು, ಪುನರಾರಂಭವಾಗುವ ಲಕ್ಷಣಗಳು ಕಾಣುತ್ತಿಲ್ಲ. ಇದರಿಂದಾಗಿ ವಯೋವೃದ್ಧರು,ರೋಗಿಗಳು,ವಿದ್ಯಾರ್ಥಿಗಳು ರಸ್ತೆ ಬದಿಯಲ್ಲೆ ಕುಳಿತು ಬಸ್ ಗಾಗಿ ಕಾಯುವ ಪರಿಸ್ಥಿತಿ ಎದುರಾಗಿದೆ ಎಂದು ಹೇಳಿದರು.