ಗ್ರಾಮೀಣ ಮಕ್ಕಳಿಗೆ ಶಾಪವಾದ ದೂರದ ನಡಿಗೆ
1 min readಗ್ರಾಮೀಣ ಮಕ್ಕಳಿಗೆ ಶಾಪವಾದ ದೂರದ ನಡಿಗೆ
ಶಿಡ್ಲಘಟ್ಟ ತಾಲೂಕಿನ ಪುಲಿಚೆರ್ಲು ಗ್ರಾಮದ ಸಮಸ್ಯೆಗೆ ಬೇಕಿದೆ ಪರಿಹಾರ
ಹತ್ತಾರು ಮಕ್ಕಳ ವ್ಯಾಸಂಗಕ್ಕೆ ಅಡ್ಡಿಯಾದ ದೂರದ ನಡಿಗೆ
ಅದೊಂದು ಗುಡ್ಡಗಾಡು ಗ್ರಾಮ, ಆ ಗ್ರಾಮದಲ್ಲಿರೋ ಸರ್ಕಾರಿ ಶಾಲೆಗೆ ಬರೋ ಮಕ್ಕಳೆಲ್ಲಾ ಬಡವರ ಮಕ್ಕಳೇ. ಅಷ್ಟೇ ಅಲ್ಲಾ ಸುತ್ತಮುತ್ತಲ ಆರು ಕಿಲೋಮೀಟರ್ ವ್ಯಾಪ್ತಿಯ ಐದಾರು ಗ್ರಾಮಗಳಿಂದ ಮಕ್ಕಳು ಬರಬೇಕಿದ್ದು, ಪ್ರತಿನಿತ್ಯ ನಡೆದುಕೊಂಡೇ ಬರುವ ಶಿಕ್ಷೆ ಈ ಮಕ್ಕಳಿಗೆ ಎದುರಾಗಿದೆ. ಇದೇ ಕಾರಣಕ್ಕೆ ಶಾಲೆಯಲ್ಲಿ ಕಲಿಯುವವರ ಸಂಖ್ಯೆ ದಿನೇ ದಿನೇ ಕುಂಠಿತವಾಗುತ್ತಿರುವ ಆತಂಕವೂ ಎದುರಾಗಿದ್ದು, ಇದಕ್ಕೆ ಸರ್ಕಾರ ಮಾತ್ರವಲ್ಲ, ಸಮಾಜಸೇವಕರೂ ಸಹಕಾರ ನೀಡಬೇಕಿದೆ.
ಶಿಡ್ಲಘಟ್ಟ ತಾಲ್ಲೂಕಿನ ಪಲಿಚೆರ್ಲು ಗ್ರಾಮದಲ್ಲಿ ಸರ್ಕಾರಿ ಪ್ರೌಢಶಾಲೆ ಇದೆ. ಈ ಸರ್ಕಾರಿ ಪ್ರೌಢಶಾಲೆಯಲ್ಲಿ 9 ಮತ್ತು 10ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ 67 ಮಂದಿ ವಿದ್ಯಾರ್ಥಿಗಳಿದ್ದಾರೆ. ಶಾಲೆಯಲ್ಲಿ ನಾಲ್ಕು ಮಂದಿ ಶಿಕ್ಷಕರಿದ್ದು, ಪುಲಿಚೆರ್ಲು ಗ್ರಾಮದ ಸುತ್ತಮುತ್ತಲ ಆರು ಕಿಮೀ ವ್ಯಾಪ್ತಿಯಿಂದ ವ್ಯಾಸಂಗಕ್ಕಾಗಿ ಮಕ್ಕಳು ಈ ಗ್ರಾಮಕ್ಕೆ ನಡೆದು ಬರಬೇಕಿದ್ದು, ರಕ್ಷಣೆ, ದೂರ ಮುಂತಾದ ಕಾರಣಗಳಿಂದ ಕಲಿಯುವ ಮಕ್ಕಳ ಸಂಖ್ಯೆ ಕ್ಷೀಣಿಸುತ್ತಿದೆ. ಅದರಲ್ಲೂ ಹೆಣ್ಣು ಮಕ್ಕಳು ವಿದ್ಯಾಭ್ಯಾಸದಿಂದ ವಂಚಿತವಾಗುವ ಆತಂಕ ಎದುರಾಗಿದೆ.
ಸರ್ಕಾರ ಶಿಕ್ಷಣ ಉತ್ತೇಜನಕ್ಕಾಗಿ ನಾನಾ ರೀತಿಯ ಸೌಲಭ್ಯಗಳನ್ನು ಒದಗಿಸುತ್ತಿದೆ. ಆದರೂ ಗ್ರಾಮೀಣ ಪ್ರದೇಶದಲ್ಲಿ ಮಾತ್ರ ಸಾಕ್ಷರತೆ ಪ್ರಮಾಣ ಹೆಚ್ಚುತ್ತಿಲ್ಲ. ಇದಕ್ಕೆ ಕಾರಣ ದೂರ ಶಿಕ್ಷಣ ಎಂಬ ಸಮಸ್ಯೆ. ಪ್ರೌಢ ಶಿಕ್ಷಣಕ್ಕೆ ಬರೋದೆಲ್ಲಾ ಬೆಳೆದ ಹೆಣ್ಮು ಮಕ್ಕಳೇ ಆಗಿದ್ದು, ಬೆಳಗ್ಗೆ ಮತ್ತು ಸಂಜೆ ದಾರಿಯಲ್ಲಿ ನಡೆದು ಬರುವಾಗ ಆಗಬಾರದ ಅನಾಹುತಗಳು ಆಗಲಿವೆ ಎಂಬ ಪೋಷಕರ ಆತಂಕ ಹೆಣ್ಣುಮಕ್ಕಳನ್ನು ಶಿಕ್ಷಣಕ್ಕೆ ದೂರ ಮಾಡುತ್ತಿದೆ ಎಂದರೆ ತಪ್ಪಾಗಲಾರದು.
ಆಧುನಿಕ ಜಗತ್ತಿನಲ್ಲಿಯೂ ಕಿಲೋಮೀಟರ್ ಗಟ್ಟಲೆ ನಡೆದುಹೋಗಿ ಶಿಕ್ಷಣ ಪಡೆಯಬೇಕಾದ ಅನಿವಾರ್ಯ ಸ್ಥಿತಿ ಎದುರಾಗಿದ್ದು, ಇದೇ ಕಾರಣಕ್ಕೆ ಹೆಣ್ಮು ಮಕ್ಕಳಿಗೆ ಉನ್ನತ ಶಿಕ್ಷಣ ಎಂಬುದು ಗಗನ ಕುಸಮವಾಗಲು ಕಾರಣವಾಗಿದೆ. ಕಾಡು ದಾರಿಗಳಲ್ಲಿ ಕಿಲೋಮೀಟರ್ ಗಟ್ಟಲೆ ನಡೆದು ಬರಲು ಮನೆಗಳಲ್ಲಿ ಪೋಷಕರು ಒಪ್ಪದ ಕಾರಣ ಈಗಾಗಲೇ ಹಲವರ ಶಿಕ್ಷಣ ಕುಂಠಿತವಾಗಿದೆ. ಇನ್ನು ಮಳೆ, ಚಳಿ, ಗಾಳಿ, ಬಿಸಿಲೆನ್ನದೆ ನಡೆಯುವ ತ್ರಾಸ ಮಕ್ಕಳಿಗೆ ತಪ್ಪಿಲ್ಲ. ಇದರ ಜೊತೆಗೆ ಅನಾರೋಗ್ಯ ಕಾರಣದಿಂದಲೂ ಹಲವರ ವಿದ್ಯಾಭ್ಯಾಸ ನಿಲ್ಲುತ್ತಿರುವುದು ದುರಂತವೇ ಸರಿ.
ಪುಲಿಚೆರ್ಲು ಗ್ರಾಮದ ಪ್ರೌಢಶಾಲೆಯಲ್ಲಿ ಮಕ್ಕಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಕುಂಠಿತವಾಗುತ್ತಿದೆ. ಇದಕ್ಕೆ ಕಾರಣ ದೂರದ ನಡಿಗೆಯೇ ಎನ್ನುತ್ತಿವೆ ಮೂಲಗಳು. ಈ ಶಾಲೆಗೆ ಸುತ್ತಮುತ್ತಲ ಐದು ಹಳ್ಳಿಗಳಿಂದ ವಿದ್ಯಾರ್ಥಿಗಳು ವ್ಯಾಸಂಗಕ್ಕಾಗಿ ಬರುತ್ತಿದ್ದು, ಮರಿಹಳ್ಳಿಯಿಂದ 15 ವಿದ್ಯಾರ್ಥಿಗಳು ಶಾಲೆಗೆ ಬರುತ್ತಿದ್ದು, ಇವರು ಪ್ರತನಿತ್ಯ ಬೆಳಗ್ಗೆ ಮತ್ತು ಸಂಜೆ ೪ ಕಿಲೋಮೀಟರ್ ನಡೆಯಬೇಕಿದೆ.
ಮುಮ್ಮನಹಳ್ಳಿ ಗ್ರಾಮದಿಂದ 5 ವಿದ್ಯಾರ್ಥಿಗಳು ಬರುತ್ತಿದ್ದು, ಇವರೂ 4 ಕಿಲೋಮೀಟರ್ ದೂರವನ್ನು ಪ್ರತಿನಿತ್ಯ ಬೆಳಗ್ಗೆ ಮತ್ತು ಸಂಜೆ ಸವಿಯಬೇಕಿದೆ. ತೋಕಲಹಳ್ಳಿ ಕೇವಲ ಮೂವರು ವಿದ್ಯಾರ್ಥಿಗಳು ಮಾತ್ರ ಬರುತ್ತಿದ್ದು, ಇವರು 6 ಕಿಲೋಮೀಟರ್ ದೂರದಿಂದ ಬರಬೇಕಿದೆ. ಸೋಮನಹಳ್ಳಿಯಿಂದ 8 ಮಂದಿ ವಿದ್ಯಾರ್ಥಿಗಳು ಬರುತ್ತಿದ್ದು, ಇವರು ಎರಡು ಕಿಲೋಮೀಟರ್ ದೂರವನ್ನು ಪ್ರತಿನಿತ್ಯ ನಡೆಯಬೇಕಿದೆ. ಇನ್ನು ಕೊನೆಯದಾಗಿ ಕನ್ನಪ್ಪನಹಳಿ 18 ವಿದ್ಯಾರ್ಥಿಗಳು ಬರುತ್ತಿದ್ದು, ಇವರು 4 ಕಿಲೋಮೀಟರ್ ದೂರವನ್ನು ಪ್ರತಿನಿತ್ಯ ಕ್ರಮಿಸಬೇಕಿದೆ.
ಇಂತಹ ಗ್ರಾಮೀಣ ಪ್ರದೇಶದಲ್ಲಿ ಮುಖ್ಯವಾಗಿ ಹೆಣ್ಣು ಮಕ್ಕಳನ್ನು ಕಳುಹಿಸಲು ಪೋಷಕರು ಹಿಂದೇಟು ಹಾಕಿ, ವಿದ್ಯಾಭ್ಯಾಸವನ್ನು ಮೊಟುಕುಗೊಳಿಸುತ್ತಿದ್ದರೆ, ಇನ್ನು ಹಲವರು ದೂರದ ಕಾರಣಕ್ಕೆ ಶಿಕ್ಷಣದಿಂದ ವಂಚಿತವಾಗುವoತಾಗಿದೆ. ಇದೇ ರೀತಿಯ ಸಮಸ್ಯೆ ಶಿಡ್ಲಘಟ್ಟ ತಾಲೂಕಿನ ಮತ್ತೊಂದು ಗ್ರಾಮದಲ್ಲಿಯೂ ಈ ಹಿಂದೆ ಎದುರಾಗಿತ್ತು. ಗೌಡನಹಳ್ಳಿ ಗ್ರಾಮದ ಸರ್ಕಾರಿ ಶಾಲೆಗೆ ಸುತ್ತಮುತ್ತಲ ಹಳ್ಳಿಗಳಿಂದ ಮಕ್ಕಳ ನಡೆದು ಬರುತ್ತಿರುವುದನ್ನು ಕಂಡ ದಾನಿಗಳು ಈ ಸರ್ಕಾರಿ ಶಾಲೆಗೆ ಬಸ್‌ನ್ನು ಕೊಡುಗೆಯಾಗಿ ನೀಡಿದ್ದಾರೆ.
ಬಸ್‌ಗೆ ಅಗತ್ಯವಿರುವ ಇಂಧನ ಮತ್ತು ಅದರ ಚಾಲಕ ವೇತನ ಸೇರಿ ಇತರೆ ನಿರ್ವಹಣೆಯನ್ನು ಶಾಲೆಯ ಶಿಕ್ಷಕರೊಬ್ಬರು ವಹಿಸಿದ ಕಾರಣ ಆ ಶಾಲೆಯಲ್ಲಿ ಬಸ್ ಯಶಸ್ವಿಯಾಗಿ ಚಾಲನೆಯಲ್ಲಿದ್ದು, ಮಕ್ಕಳು ಕೂಡಾ ನಿರ್ಭೀತಿಯಿಂದ ಶಾಲೆಗೆ ಬರುತ್ತಿದ್ದಾರೆ. ಇದರಿಂದಾಗಿ ಈ ಶಾಲೆಯಲ್ಲಿ ಮಕ್ಕಳ ಸಂಖ್ಯೆ ಹೆಚ್ಚಾಗಿದೆ. ಅದೇ ರೀತಿಯ ಸಂಕಷ್ಟ ಎದುರಿಸುತ್ತಿರುವ ಪಲಿಚೆರ್ಲು ಪ್ರೌಢಶಾಲೆಗೂ ದಾನಿಗಳು ನೆರವು ನೀಡಿದಲ್ಲಿ ಸುತ್ತಮುತ್ತಲ ಗ್ರಾಮಗಳ ಮಕ್ಕಳ ವಿದ್ಯಾಭ್ಯಾಸಕ್ಕೆ ಸಹಕಾರಿಯಾಗಲಿದೆ.
ಪುಲಿಚೆರ್ಲು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 100 ಮಂದಿ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಇಲ್ಲಿಗೆ ಸುತ್ತಮುತ್ತಲ ನಾಲ್ಕಾರು ಹಳ್ಳಿಗಳಿಂದ ವಿದ್ಯಾರ್ಥಿಗಳು ನಡೆದುಕೊಂಡು ಬರುತ್ತಿದ್ದಾರೆ. ಸುಬ್ಬರಾಯನಹಳ್ಳಿ, ಈಗ್ಲೆಟ್ಟಹಳ್ಳಿ, ಬೈರಗಾನಹಳ್ಳಿ, ತಿಮ್ಮಸಂದ್ರ, ಬಳೇಹೊಸಹಳ್ಳಿ, ಮರಿಹಳ್ಳಿ, ಮುಮ್ಮನಹಳ್ಳಿ ಮುಂತಾದ ಹಳ್ಳಿಗಳಿಂದ ಮಕ್ಕಳು ಈ ಶಾಲೆಗೆ ಬರುತ್ತಾರೆ. ಗ್ರಾಮೀಣ ಮಕ್ಕಳು ಪ್ರತಿಭಾವಂತರು. ಅವರಿಗೆ ಶಾಲೆಯಲ್ಲಿ ಶಿಕ್ಷಣ ಸೇರಿದಂತೆ ಅಗತ್ಯ ಸೌಲಭ್ಯ ದೊರೆತಲ್ಲಿ ಶಿಕ್ಷಣದಿಂದ ವಂಚಿತರಾಗುವುದನ್ನು ತಪ್ಪಿಸಬಹುದಾಗಿದೆ.