ಮಾಲೂರಿನಲ್ಲಿ ಪೊಲೀಸ್ ಜನಸಂಪರ್ಕ ಸಭೆ
1 min readಮಾಲೂರಿನಲ್ಲಿ ಪೊಲೀಸ್ ಜನಸಂಪರ್ಕ ಸಭೆ
ಅಪರಾಧ ತಡೆಗೆ ಸಾರ್ವಜನಿಕರ ಸಹಕಾರ ಅಗತ್ಯ
ಕೋಲಾರ ಎಸ್‌ಪಿ ನಾರಾಯಣ್ ಮನವಿ
ಬೀಟ್ ಸದಸ್ಯರು ಮತ್ತು ಸಾರ್ವಜನಿಕರು ಪೊಲೀಸರ ಜತೆ ಕೈ ಜೋಡಿಸಿದರೆ ಅಪರಾಧ ಪ್ರಕರಣ ಕಡಿಮೆಯಾಗಲಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ. ನಾರಾಯಣ ಅಭಿಪ್ರಾಯಪಟ್ಟರು. ಮಾಲೂರು ಬೆಂಗಳೂರು ಮುಖ್ಯ ರಸ್ತೆಯ ವಿಶ್ವನಾಥ ಕಲ್ಯಾಣ ಮಂಟಪದಲ್ಲಿ ಕೋಲಾರ ಜಿಲ್ಲಾ ಪೋಲಿಸ್ ಇಲಾಖೆಯಿಂದ ನಶೆ ಮುಕ್ತ ಜಿಲ್ಲೆಯನ್ನಾಗಿಸುವ ಉದ್ದೇಶದಿಂದ ಹಮ್ಮಿಕೊಂಡಿದ್ದ ಜನ ಸಂಪರ್ಕ ಸಭೆಯಲ್ಲಿ ಅವರು ಮಾತನಾಡಿದರು.
ಬೀಟ್ ಸದಸ್ಯರು ಮತ್ತು ಸಾರ್ವಜನಿಕರು ಪೊಲೀಸರ ಜತೆ ಕೈ ಜೋಡಿಸಿದರೆ ಅಪರಾಧ ಪ್ರಕರಣ ಕಡಿಮೆಯಾಗಲಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ. ನಾರಾಯಣ ಅಭಿಪ್ರಾಯಪಟ್ಟರು. ಮಾಲೂರು ಬೆಂಗಳೂರು ಮುಖ್ಯ ರಸ್ತೆಯ ವಿಶ್ವನಾಥ ಕಲ್ಯಾಣ ಮಂಟಪದಲ್ಲಿ ಕೋಲಾರ ಜಿಲ್ಲಾ ಪೋಲಿಸ್ ಇಲಾಖೆಯಿಂದ ನಶೆ ಮುಕ್ತ ಜಿಲ್ಲೆಯನ್ನಾಗಿಸುವ ಉದ್ದೇಶದಿಂದ ಹಮ್ಮಿಕೊಂಡಿದ್ದ ಜನ ಸಂಪರ್ಕ ಸಭೆಯಲ್ಲಿ ಅವರು ಮಾತನಾಡಿದರು. ಪೊಲೀಸರೊಂದಿಗೆ ಸಾಮಾನ್ಯ ಜನ ಬೆರೆತು ಸ್ಪಂದಿಸಿದರೆ ಇಲಾಖೆ ಉತ್ತಮ ರೀತಿಯಲ್ಲಿ ಕೆಲಸ ನಿರ್ವಹಿಸಲು ಸಾಧ್ಯವಾಗುತ್ತದೆ ಎಂದರು.
ಮಾಲೂರು ತಾಲೂಕಿನಲ್ಲಿ ಅಪರಾಧಗಳ ಸಂಖ್ಯೆ ಕಡಿಮೆಯಾಗಲು ಠಾಣಾಧಿಕಾರಿಗಳು ಸೂಕ್ತ ಕ್ರಮ ತೆಗೆದುಕೊಳ್ಳಬೇಕು. ಅಧಿಕಾರಿಗಳು ಜಾಗರೂಕರಾಗಿ ಜನರೊಂದಿಗೆ ಉತ್ತಮ ಬಾಂಧವ್ಯ ಇಟ್ಟುಕೊಳ್ಳಬೇಕು, ದುಷ್ಟ ಶಕ್ತಿಗಳಿಗೆ ಯಾವುದೇ ಕಾರಣಕ್ಕೂ ಸಹಕಾರ ನೀಡಬಾರದು ಎಂದು ಸೂಚಿಸಿದರು. ಸಾಮಾನ್ಯವಾಗಿ ಮನೆಗಳಲ್ಲಿ ಜಗಳ ನಡೆಯುತ್ತವೆ. ಇದನ್ನು ಠಾಣೆಗಳಲ್ಲಿ ದಾಖಲಿಸುವುದಕ್ಕಿಂತ ಮುಂಚೆ ನ್ಯಾಯ ಪಂಚಾಯಿತಿ ಮೂಲಕ ರಾಜಿ ಸಂಧಾನ ಮಾಡಿ ಇತ್ಯರ್ಥ ಪಡಿಸುವ ಕೆಲಸವನ್ನು ಪೊಲೀಸರು ಮತ್ತು ಸಂಘ ಸಂಸ್ಥೆಗಳ ಮುಖಂಡರು ಮಾಡಬೇಕಾಗಿದೆ ಎಂದರು.
ಕಳ್ಳತನಗಳು ಸೇರಿದಂತೆ ನಾನಾ ಅಪರಾಧ ಪ್ರಕರಣಗಳನ್ನು ಸುಲಭ ರೀತಿಯಲ್ಲಿ ಪತ್ತೆ ಹಚ್ಚುವ ವ್ಯವಸ್ಥೆ ಸುಮಾರು ವರ್ಷಗಳಿಂದ ರಾಜ್ಯದ ಪೊಲೀಸ್ ಇಲಾಖೆಯಲ್ಲಿದ್ದು, ಇದನ್ನು ಅರಿತು ಠಾಣಾಧಿಕಾರಿಗಳು ಉತ್ತಮ ರೀತಿಯಲ್ಲಿ ಕರ್ತವ್ಯ ನಿರ್ವಹಿಸಬೇಕು, ಜನ ಸಾಮಾನ್ಯರು ತಮ್ಮ ಸುತ್ತಮುತ್ತಲಿನಲ್ಲಿ ನಡೆಯುವ ಅಪರಾಧ ಕೃತ್ಯಗಳನ್ನು ನಮಗೇಕೆ ಎಂದು ಭಾವಿಸದೇ ಪೊಲೀಸರಿಗೆ ಮಾಹಿತಿ ನೀಡಬೇಕು ಎಂದು ಕರೆ ನೀಡಿದರು.
ಮಾಲೂರು ಪೊಲೀಸ್ ಠಾಣೆಯಲ್ಲಿ ದಲ್ಲಾಳಿಗಳು ಹೆಚ್ಚಾಗಿರುವ ಕುರಿತು ಮಾಹಿತಿ ಬಂದಿದ್ದು, ಪೊಲೀಸರಿಗೆ ಈ ಬಗ್ಗೆ ಮಾಹಿತಿ ಕೊರತೆಯಿರುವುದಾಗಿ ತಿಳಿದುಬಂದಿದೆ, ಪೊಲೀಸ್ ಠಾಣೆಯ ಹೊರಭಾಗದಲ್ಲಿ ಸಿಸಿ ಟಿವಿ ಅಳವಡಿಕೆಗೆ ಸೂಚಿಸಲಾಗಿದೆ. ನ್ಯಾಯ ಪಂಚಾಯತಿ ಮಾಡುವುದಾಗಿ ಹೇಳಿ ಹಣ ಪಡೆಯುವವರು ಕಂಡು ಬಂದಲ್ಲಿ ಅವರ ವಿರುದ್ಧ ಭ್ರಷ್ಟಾಚಾರ ಕಾಯ್ದೆ ಅಡಿಯಲ್ಲಿ ಕೇಸು ದಾಖಲಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಜಿಲ್ಲೆಯ ಜನಪ್ರತಿನಿಧಿಗಳ ಸಹಕಾರದಿಂದ ಟ್ರಾಫಿಕ್ ಸಿಗ್ನಲ್ ದ್ವೀಪಗಳು ಅಳವಡಿಕೆಗೆ ಅನುದಾನ ಮೀಸಲಿಟ್ಟಿದ್ದು, ಶೀಘ್ರದಲ್ಲೇ ಅಳವಡಿಕೆ ಕಾಮಗಾರಿ ನಡೆಯಲಿದೆ. ಕೋಲಾರ ಜಿಲ್ಲಾ ಪೊಲೀಸ್ ವ್ಯಾಪ್ತಿಯಲ್ಲಿ ಮಾಲೂರು ಪೊಲೀಸ್ ಠಾಣೆ ಮಾದರಿ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿರುವುದು ಪ್ರಶಂಸನೀಯ ಎಂದರು. ಎ.ಎಸ್.ಪಿ.ಜಗದೀಶ್, ಡಿ.ವೈ.ಎಸ್.ಪಿ. ಮೊಹಮದ್ ಹುಮಾಯಂ ನಾಗ್ತೆ, ತಾಲ್ಲೂಕು ವಕೀಲರ ಸಂಘದ ಅಧ್ಯಕ್ಷ ಟಿ.ಬಿ.ಕೃಷ್ಣಪ್ಪ, ಪಿ.ವೆಂಕಟೇಶ್, ಪುರಸಭಾ ಸದಸ್ಯ ಎನ್.ವಿ.ಮುರಳೀಧರ್, ಪಿಎಸ್.ಐ ವರಲಕ್ಷ್ಮೀ, ಎ.ಎಸ್.ಐ ವೆಂಕಟೇಶ್, ಮುನೇಗೌಡ, ಪೋಲಿಸ್ ಪೇದೆಗಳಾದ ಮೋಹನ್, ಯಶವಂತರಾವ್, ವೆಂಕಟೇಶ್, ಮಂಜುನಾಥ್ ಇದ್ದರು.