ಜೈಲಲ್ಲಿರುವ ದರ್ಶನ್ ಭೇಟಿ ಮಾಡಿದ ಪತ್ನಿ ವಿಜಯಲಕ್ಷ್ಮೀ ಮತ್ತು ನಟ ವಿನೋದ ಪ್ರಭಾಕರ್
1 min readಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ವಿಚಾರಣಾಧೀನ ಖೈದಿಯಾಗಿ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ನಟ ದರ್ಶನ್ ಅವರನ್ನು ನೋಡಲು ಅವರ ಪತ್ನಿ ವಿಜಯಲಕ್ಷ್ಮೀ ಹಾಗೂ ವಿನೋದ ಪ್ರಭಾಕರ್ ಅವರು ಜೈಲಿಗೆ ಆಗಮಿಸಿದ್ದರು.
ಜೈಲಿನಲ್ಲಿರುವ ತಮ ಪತಿಯನ್ನು ಭೇಟಿ ಮಾಡಲು ಆಗಮಿಸಿದ್ದ ವಿಜಯಲಕ್ಷ್ಮೀ ಹಾಗೂ ದರ್ಶನ್ ಪುತ್ರ ಮಾಧ್ಯಮದವರ ಕ್ಯಾಮೆರಾಗಳನ್ನು ನೋಡಿ ತುಸು ದೂರದಲ್ಲೇ ಕಾರು ನಿಲ್ಲಿಸಿದ್ದರು.ಅಲ್ಲಿಗೆ ತೆರಳಿದ ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯ ಸಿಬ್ಬಂದಿ ಅವರನ್ನು ಜೈಲಿನ ಬಳಿ ಕರೆದೊಯ್ದು ಜೈಲಿನ ಒಳಗೆ ಪ್ರವೇಶಿಸಲು ಅವಕಾಶ ಮಾಡಿಕೊಟ್ಟರು ಎನ್ನಲಾಗಿದೆ.
ನಂತರ ದರ್ಶನ್ ಆಪ್ತ ಸ್ನೇಹಿತ ನಟ ವಿನೋದ್ ಪ್ರಭಾಕರ್ ಕೂಡ ಆಗಮಿಸಿ ಗೇಟಿನ ಹೊರಗೆ ಕಾರು ನಿಲ್ಲಿಸಿ ಸಾಮಾನ್ಯ ಜನರಂತೆ ನಡೆದುಕೊಂಡು ಹೋಗಿದ್ದಾರೆ.ತಪಾಸಣೆ ಮಾಡಿ ನಂತರ ಜೈಲಿನ ಒಳಗೆ ದರ್ಶನ್ ಅವರನ್ನು ನೋಡಲು ಸಿಬ್ಬಂದಿ ಅವಕಾಶ ಮಾಡಿಕೊಟ್ಟರು ಎಂದು ತಿಳಿದುಬಂದಿದೆ.
ಇನ್ನು ಹಲವು ಅಭಿಮಾನಿಗಳು, ಸ್ನೇಹಿತರು ಅವರನ್ನು ನೋಡಲು ಬರುತ್ತಿದ್ದಾರೆ. ಕೆಲವರು ಹೊರಗಡೆ ಕಾಯುತ್ತಿದ್ದಾರೆ. ಈ ಪ್ರಕರಣದಲ್ಲಿ ಜೈಲಿನಲ್ಲಿರುವ ದರ್ಶನ್ ಸೇರಿದಂತೆ ಹಲವು ಆರೋಪಿಗಳನ್ನು ತುಮಕೂರು ಜೈಲಿಗೆ ಸ್ಥಳಾಂತರಿಸಲು ಪೊಲೀಸರು ಮನವಿ ಮಾಡಿರುವ ಅರ್ಜಿ ಇಂದು ನ್ಯಾಯಾಲಯದಲ್ಲಿ ವಿಚಾರಣೆಗೆ ಬರಲಿದೆ.
ಈ ಪ್ರಕರಣದ ಆರೋಪಿಗಳು ಒಂದೇ ಕಡೆ ಇರವುದು ಸುರಕ್ಷಿತವಲ್ಲ. ಕೆಲವರನ್ನು ತುಮಕೂರು ಜೈಲಿಗೆ ಸ್ಥಳಾಂತರಿಸುವಂತೆ ಎಸ್ಪಿಪಿ ಪ್ರಸನ್ನ ಕುಮಾರ್ ಮನವಿ ಮಾಡಿದ್ದರು.ಇವರ ಮನವಿಗೆ ದರ್ಶನ್ ಪರ ವಕೀಲರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.