ಎಚ್‌ಎಂಟಿ ಕಂಪನಿ ಉನ್ನತಾಧಿಕಾರಿಗಳ ಸಭೆ
1 min readಎಚ್‌ಎಂಟಿ ಕಂಪನಿ ಉನ್ನತಾಧಿಕಾರಿಗಳ ಸಭೆ
ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರಿಂದ ಸಭೆ
ಎಚ್‌ಎಂಟಿ ಪುನಶ್ಚೇತನಕ್ಕೆ ಕ್ರಮ, ವರದಿ ಕೇಳಿದ ಎಚ್‌ಡಿಕೆ
ಬೆಂಗಳೂರಿನ ಕೀರ್ತಿ ಕಳಸವಾಗಿದ್ದ ಕಂಪನಿಗೆ ಕಾಯಕಲ್ಪ ನೀಡಲು ಕ್ರಮ: ಎಚ್‌ಡಿಕೆ
ಮೋದಿ ಅವರ ಆತ್ಮನಿರ್ಭರ ಪರಿಕಲ್ಪನೆಯಂತೆ ಎಚ್‌ಎಂಟಿ ಪುನಶ್ಚೇತನ: ಎಚ್‌ಡಿಕೆ
ಕೇಂದ್ರ ಬೃಹತ್ ಕೈಗಾರಿಕೆ ಹಾಗೂ ಉಕ್ಕು ಖಾತೆ ಸಚಿವ ಹೆಚ್.ಡಿ. ಕುಮಾರಸ್ವಾಮಿ ಬೆಂಗಳೂರಿನಲ್ಲಿ ಹಿಂದೂಸ್ತಾನ್ ಮಶೀನ್ ಅಂಡ್ ಟೂಲ್ಸ್ ಕಂಪನಿಯ ಉನ್ನತ ಅಧಿಕಾರಿಗಳ ಸಭೆ ನಡೆಸಿದರು. ಕಂಪನಿಯ ಅಧ್ಯಕ್ಷ, ವ್ಯವಸ್ಥಾಪಕ ನಿರ್ದೇಶಕ ರಾಜೇಶ್ ಕೊಹ್ಲಿ ಸೇರಿ ಉನ್ನತಾಧಿಕಾರಿಗಳ ಜತೆ ಚರ್ಚೆ ನಡೆಸಿದ ಸಚಿವರು, ಕಂಪನಿ ಕಾರ್ಯ ಚಟುವಟಿಕೆ ಬಗ್ಗೆ ಪ್ರಾತ್ಯಕ್ಷಿಕೆ ವೀಕ್ಷಿಸಿ ಸಮಗ್ರ ಮಾಹಿತಿ ಪಡೆದರು.
ವಹಿವಾಟು, ನಿವ್ವಳ ಲಾಭ ಇತ್ಯಾದಿಗಳ ಬಗ್ಗೆ ಮಾಹಿತಿ ಪಡೆದ ಸಚಿವ ಕುಮಾರಸ್ವಾಮಿ, ಎಚ್‌ಎಂಟಿ ಕಂಪನಿಯ ಆರ್ಥಿಕತೆ, ಉತ್ಪಾದನೆ, ಇನ್ನಿತರೆ ಸ್ಥಿತಿಗತಿಗಳ ಬಗ್ಗೆ ಸಚಿವರು ಅಧಿಕಾರಿಗಳ ಜತೆ ಚರ್ಚಿಸಿದರು. ಒಂದು ಕಾಲದಲ್ಲಿ ವೈಭವಯುತವಾಗಿ ಮೆರೆದಿದ್ದ ಕಂಪನಿ ಇಂದು ದುಸ್ಥಿತಿಗೆ ಬಂದಿದೆ. ಕಂಪನಿಯನ್ನು ಮತ್ತಷ್ಟು ಸದೃಢ ಮಾಡಿ. ಅದಕ್ಕೆ ಅಗತ್ಯ ಉಪ ಕ್ರಮ ಕೈಗೊಳ್ಳಿ. ಅದಕ್ಕೆ ಅಗತ್ಯವಾದ ಪ್ರಸ್ತಾವನೆಯನ್ನು ಕೇಂದ್ರ ಸರಕಾರಕ್ಕೆ ಸಲ್ಲಿಸಿ ಎಂದು ರಾಜೇಶ್ ಕೊಹ್ಲಿ ಅವರಿಗೆ ಸಚಿವರು ಸೂಚಿಸಿದರು.
ಪ್ರಧಾನಿ ನರೇಂದ್ರ ಮೋದಿ ಅವರು ಕೈಗಾರಿಕೆ ಅಭಿವೃದ್ಧಿ ಬಗ್ಗೆ ದೊಡ್ಡ ಕನಸು ಕಟ್ಟಿಕೊಂಡಿದ್ದಾರೆ. ಅವರ ಆತ್ಮನಿರ್ಧರ ಪರಿಕಲ್ಪನೆಯ ಮೂಲಕ ಹೆಚ್ ಎಂ ಟಿ ಕಂಪನಿಯನ್ನು ಪುನರುಜ್ಜೀವನಗೊಳಿಸಬಹುದು. ಪ್ರಧಾನಿಗಳ ಆಲೋಚನೆಯಂತೆ ಚಿಂತಿಸಿ ಕಂಪನಿಯ ಚೇತರಿಕೆಗೆ ಮುಂದಾಗಿ. ಅದಕ್ಕೆ ಅಗತ್ಯವಾದ ನೆರವನ್ನು ಕೇಂದ್ರ ಸರ್ಕಾರ ಒದಗಿಸುತ್ತದೆ ಎಂದು ಸಚಿವರು ಹೇಳಿದರು.
ನೀವು ರಕ್ಷಣಾ ಇಲಾಖೆಗೆ, ಬಾಹ್ಯಾಕಾಶ ಯೋಜನೆಗಳಿಗೆ ಪರಿಕರಗಳನ್ನು ತಯಾರಿಸಿ ಕೊಡುತ್ತೀರಿ. ದೇಶದ ಉದ್ದಗಲಕ್ಕೂ ಕಂಪನಿಯ ಉತ್ಪಾದನಾ ಘಟಕಗಳಿವೆ. ಹೀಗಾಗಿ ಕಂಪನಿಯ ಕ್ಷಮತೆಯನ್ನು ಹೆಚ್ಚಿಸಬೇಕು ಎಂದು ಸಲಹೆ ನೀಡಿದರು. ಕಂಪನಿ ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದೆ ಎಂದು ಇದೇ ವೇಳೆ ಕಂಪನಿಯ ಅಧ್ಯಕ್ಷ ರಾಜೇಶ್ ಕೊಹ್ಲಿ, ನಷ್ಟದ ಜತೆಗೆ ಆರ್ಥಿಕ ಬಿಕ್ಕಟ್ಟು, ನ್ಯಾಯಾಲಯಗಳಲ್ಲಿ ಮೊಕದ್ದಮೆ ಇತ್ಯಾದಿ ಸಂಕಷ್ಟಗಳನ್ನು ಎದುರಿಸುತ್ತಿದೆ. ಇದಕ್ಕೆ ಕೇಂದ್ರದ ನೆರವು ಬೇಕಿದೆ ಎಂದು ಸಚಿವರಿಗೆ ಮನವಿ ಮಾಡಿದರು. ಇದಕ್ಕೆ ಸ್ಪಂದಿಸಿದ ಸಚಿವರು, ಈ ಸಮಸ್ಯೆಗಳನ್ನು ಬಗೆಹರಿಸುವ ಭರವಸೆ ನೀಡಿದರು. ಕೋಲಾರ ಸಂಸದ ಮಲ್ಲೇಶ್ ಬಾಬು, ಕಂಪನಿಯ ನಿರ್ದೇಶಕಿ ಸಮೀನಾ ಕೊಹ್ಲಿ ಸೇರಿದಂತೆ ಹಿರಿಯ ಅಧಿಕಾರಿಗಳು ಹಾಜರಿದ್ದರು.