ಶೀಘ್ರದಲ್ಲೇ 1000 ಗ್ರಾಮ ಲೆಕ್ಕಾಧಿಕಾರಿಗಳ ನೇಮಕಾತಿಗೆ ಅಧಿಸೂಚನೆ: ಕೃಷ್ಣ ಬೈರೇಗೌಡ
1 min readಕಂದಾಯ ಇಲಾಖೆಯ ಕೆಲಸವನ್ನು ಮತ್ತಷ್ಟು ಚುರುಕುಗೊಳಿಸಲು ಹಾಗೂ ಜನರಿಗೆ ಸರಳ ಆಡಳಿತ ನೀಡುವ ಉದ್ದೇಶದಿಂದ ಶೀಘ್ರದಲ್ಲೇ 1000 ಗ್ರಾಮ ಲೆಕ್ಕಾಧಿಕಾರಿಗಳ ನೇಮಕಾತಿಗೆ ಅಧಿಸೂಚನೆ ಹೊರಡಿಸಲಾಗುವುದು ಎಂದು ಸಚಿವ ಕೃಷ್ಣ ಬೈರೇಗೌಡ ಮಾಹಿತಿ ನೀಡಿದರು.
‘ತಾಲೂಕುಗಳಲ್ಲಿ ಗ್ರಾಮ ಲೆಕ್ಕಾಧಿಕಾರಿಗಳು ಸೇರಿದಂತೆ ಕಂದಾಯ ಇಲಾಖೆಯ ವಿವಿಧ ಹಂತದ ನೌಕರರನ್ನು ಬೇರೆಡೆ ನಿಯೋಜನೆಗೊಳಿಸಲಾಗುತ್ತಿದೆ.
ಉದ್ಯೋಗಿಗಳ ಕೊರತೆಯಿಂದಾಗಿ ಕಂದಾಯ ಇಲಾಖೆಯಲ್ಲಿ ಜನರಿಗೆ ಸರಿಯಾದ ಸಮಯಕ್ಕೆ ಕೆಲಸವಾಗುತ್ತಿಲ್ಲ’ ಎಂದು ಸೋಮವಾರ ವಿಧಾನಸಭೆಯ ಪ್ರಶ್ನೋತ್ತರ ಕಲಾಪದಲ್ಲಿ ಕುಂದಾಪುರ ಶಾಸಕರಾದ ಕಿರಣ್ ಕುಮಾರ್ ಕೂಡ್ಲಿ ಅವರು ಪ್ರಶ್ನಿಸಿದ್ದರು.
ಶಾಸಕರಾದ ಕಿರಣ್ ಕುಮಾರ್ ಕೂಡ್ಲಿ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವ ಕೃಷ್ಣ ಬೈರೇಗೌಡ ಅವರು, ‘ನಿಮ್ಮ ಪರ ನಾವಿದ್ದೇವೆ. ಇದರಲ್ಲಿ ಯಾವುದೂ ರಾಜಕೀಯ ಇಲ್ಲ. ಕುಂದಾಪುರ ತಾಲೂಕಿನಲ್ಲಿ ಕಂದಾಯ ಇಲಾಖೆಯ 110 ಹುದ್ದೆಗಳ ಪೈಕಿ 70 ಹುದ್ದೆಗಳನ್ನು ಈಗಾಗಲೇ ಭರ್ತಿ ಮಾಡಲಾಗಿದೆ. ಅಂದರೆ, ಶೇ.65ರಷ್ಟು ಸ್ಥಾನಗಳನ್ನು ಭರ್ತಿ ಮಾಡಲಾಗಿದೆ. ಉಳಿದ ಸ್ಥಾನಗಳನ್ನೂ ಶೀಘ್ರದಲ್ಲೇ ಭರ್ತಿ ಮಾಡಲಾಗುವುದು’ ಎಂದು ಭರವಸೆ ನೀಡಿದರು.
‘ಇತರೆ ಇಲಾಖೆಗಳಿಗೆ ಹೋಲಿಸಿದರೆ ಕಂದಾಯ ಇಲಾಖೆಯಲ್ಲಿ ನೌಕರರ ಸಂಖ್ಯೆ ಅಧಿಕವಿದೆ. ಅಲ್ಲದೆ, ಸಾರ್ವಜನಿಕರಿಗೆ ಶೀಘ್ರ ಸೇವೆ ನೀಡುವ ಉದ್ದೇಶಿದಿಂದ ಶೀಘ್ರದಲ್ಲೇ 1000 ಗ್ರಾಮ ಲೆಕ್ಕಾಧಿಕಾರಿಗಳ ನೇಮಕಾತಿಗೆ ಅಧಿಸೂಚನೆ ಹೊರಡಿಸಲಾಗುವುದು. ಮುಖ್ಯಮಂತ್ರಿ ಸಿದ್ದರಾಮಯ್ಯನವರೂ ಸಹ ಗ್ರಾಮ ಲೆಕ್ಕಾಧಿಕಾರಿಗಳ ನೇಮಕಾತಿಗೆ ಹಸಿರು ನಿಶಾನೆ ನೀಡಿದ್ದಾರೆ’ ಎಂದು ಮಾಹಿತಿ ನೀಡಿದರು.
ನಿಯೋಜನೆ ಮೇಲೆ ಅಧಿಕಾರಿಗಳು ಬೇರೆಡೆ ಕೆಲಸಕ್ಕೆ ತೆರಳುವ ಬಗ್ಗೆಯೂ ಗಮನ ಸೆಳೆದ ಸಚಿವ ಕೃಷ್ಣ ಬೈರೇಗೌಡ ಅವರು, ‘ಸರ್ಕಾರಕ್ಕೆ ಸಾರ್ವಜನಿಕರ ಹಿತ ಮುಖ್ಯ. ಹೀಗಾಗಿ ಕಂದಾಯ ಇಲಾಖೆ ನೌಕರರು ನಿಯೋಜನೆಯ ಮೇಲೆ ಬೇರೆಡೆ ತೆರಳುವುದು ಸರಿಯಲ್ಲ. ಅವರು ಸರ್ಕಾರ ನೌಕರಿ ಕೊಟ್ಟ ಕಡೆ ಕೆಲಸ ಮಾಡಲಿ’ ಎಂದು ಅಭಿಪ್ರಾಯಪಟ್ಟರು.
ಮುಂದುವರೆದು, ‘ಕಳೆದ ಸರ್ಕಾರ ತುಂಬಾ ಜನರನ್ನು ಬೇರೆಡೆ ನಿಯೋಜನೆ ಮಾಡಿದ್ದಾರೆ. ನನಗೂ ಕನಿಷ್ಠ 2000 ಉದ್ಯೋಗಿಗಳ ನಿಯೋಜನೆಗೆ ಮನವಿ ಸಲ್ಲಿಸಲಾಗಿದೆ. ಆದರೆ, ನಾನು ಈವರೆಗೆ ಒಬ್ಬರನ್ನೂ ನಿಯೋಜನೆ ಮಾಡಿಲ್ಲ. ಯಾರನ್ನೂ ಮೂಲ ಸ್ಥಾನದಿಂದ ನಿಯೋಜನೆಗೊಳಿಸದಂತೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ.
ಎಲ್ಲಾ ಜಿಲ್ಲಾಧಿಕಾರಿಗಳಿಗೂ ಈಗಾಗಲೇ ಈ ಬಗ್ಗೆ ಸೂಚನೆ ನೀಡಲಾಗಿದ್ದು, ಜಿಲ್ಲಾಧಿಕಾರಿಗಳ ವಿವೇಚನೆ ಮೇಲೆ ಗರಿಷ್ಠ 5 ಸ್ಥಾನಗಳನ್ನು ಹೊರತುಪಡಿಸಿ ಉಳಿದ ಎಲ್ಲ ನೌಕರರನ್ನೂ ಮೂಲ ಸ್ಥಾನಕ್ಕೆ ವಾಪಸ್ ಕರೆಸಿಕೊಳ್ಳಬೇಕು. ಜನರಿಗೆ ಸರಳ ಹಾಗೂ ಶೀಘ್ರ ಸೇವೆ ಒದಗಿಸಲು ಸೂಚಿಸಲಾಗಿದೆ’ ಎಂದು ಮಾಹಿತಿ ನೀಡಿದರು.