‘ಅಂಧಭಕ್ತ’ ರಾಜ್ಯಗಳಿಗೆ ಮಾತ್ರ ಹೆಚ್ಚಿನ ಅನುದಾನ, ದಕ್ಷಿಣಕ್ಕೆ ಕೇಂದ್ರದಿಂದ ಮಲತಾಯಿ ಧೋರಣೆ : ಬಿಕೆ ಹರಿಪ್ರಸಾದ್ ವಾಗ್ದಾಳಿ
1 min readದೇಶದಲ್ಲಿ ಅಂಧ ಭಕ್ತರು ಹೆಚ್ಚಿರುವ ರಾಜ್ಯಗಳಿಗೆ ಮಾತ್ರ ಹೆಚ್ಚಿನ ಅನುದಾನ ನೀಡುವ ಮೂಲಕ ಮತ ಬ್ಯಾಂಕ್ ಗಟ್ಟಿ ಮಾಡಿಕೊಳ್ಳುವ ಪ್ರಯತ್ನ ಮಾಡಲಾಗುತ್ತಿದೆ. ಆದರೆ, ದಕ್ಷಿಣ ಭಾರತದವರು ಅಂಧ ಭಕ್ತರಲ್ಲ ಎನ್ನುವ ಕಾರಣಕ್ಕೆ ಮಲತಾಯಿ ಧೋರಣೆ ಮಾಡುತ್ತಿದ್ದಾರೆ ಎಂದು ವಿಧಾನ ಪರಿಷತ್ ಸದಸ್ಯ ಬಿ.ಕೆ.
ಹರಿಪ್ರಸಾದ್ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಕರ್ನಾಟಕ ರಾಜ್ಯದ ಇತಿಹಾಸದಲ್ಲಿ ಮೊದಲ ಬಾರಿಗೆ ಇಂತಹ ಪ್ರತಿಭಟನೆ ನಡೆಸಲಾಗುತ್ತಿದೆ. ಕೇಂದ್ರದ ಮಲತಾಯಿ ಧೋರಣೆ ವಿರುದ್ಧ ಪ್ರತಿಭಟನೆ ನಡೆಸಲು ಬರ್ತಿದ್ದಾರೆ. ಭಾರತದಲ್ಲಿ ಗುಜರಾತ್ ಒಂದು ರಾಜ್ಯ, ಆದರೆ ಭಾರತ ಅಂದ್ರೆ ಗುಜುರಾತ್ ಅನ್ನೊ ಹಾಗಾಗಿದೆ.
ದೇಶದಲ್ಲಿ ಗುಜರಾತ್‌ಗೆ ಮಾತ್ರ ಹೆಚ್ಚು ಪ್ರಾಧಾನ್ಯತೆ ನೀಡಲಾಗುತ್ತಿದೆ. ಕ್ರಿಕೆಟ್ ನಿಂದ ಹಿಡಿದು ಕಡ್ಲೆಕಾಯಿ ಮಾರುವ ವಿಚಾರದಲ್ಲೂ ಗುಜುರಾತ್‌ಗೆ ಆದ್ಯತೆ ನೀಡಿದರೆ, ಬಾಕಿ ರಾಜ್ಯಗಳು ದನ ಮೇಯಿಸಲು ಬಂದಿವೆಯಾ? ಗುಜರಾತ್ ಮಾಡೆಲ್ ಅಂದ್ರೆ ಪಂಗನಾಮ ಹಾಕುವುದು ಅಂತಾನಾ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬಿಜೆಪಿಯವರು ತ್ರಿವರ್ಣ ಧ್ವಜ, ಸಂವಿಧಾನ, ಜಾತ್ಯತೀತ ತತ್ವದ ವಿರೋಧಿಗಳು ಆಗಿದ್ದಾರೆ. ಈ ಎಲ್ಲ ತತ್ವಗಳ ವಿರುದ್ಧ ಮಾತನಾಡುವ ಇವರಿಗೆ ದೇಶದ ಬಗ್ಗೆ ಮಾತನಾಡುವ ಹಕ್ಕಿಲ್ಲ. ಒನ್ ನೇಷನ್ ಒನ್ ರೇಷನ್ ನಿಂದ ಹಿಡಿದು ಎಲ್ಲ ಒಂದೇ ಮಾಡಲಾಗುತ್ತಿದೆ. ನಮ್ಮ ಭಾಷೆಗೆ ಪ್ರಾಮುಖ್ಯತೆ ಸಿಗುತ್ತಿಲ್ಲ.
ಉತ್ತರ ಭಾರತದ ಕೆಲವು ರಾಜ್ಯಗಳು ರೋಗಗ್ರಸ್ತ್ರ ರಾಜ್ಯಗಳಾಗಿವೆ. ಉತ್ಪಾದನೆ, ಉದ್ಯೋಗ ಸೃಷ್ಟಿ ಮಾಡಿದ್ದರೆ ಈ ರೀತಿಯ ಸಮಸ್ಯೆ ಬರುತ್ತಿರಲಿಲ್ಲ. ಈ ವಿಚಾರದ ಬಗ್ಗೆ ಸುರೇಶ್ ಮಾತನಾಡಿದ್ದಾರೆ ಅದನ್ನು ತಿರುಚುವ ಪ್ರಯತ್ನ ನಡೆಯುತ್ತಿದೆ ಎಂದು ಕಿಡಿಕಾರಿದರು.