ಹೊಟ್ಟೆ ನೋವು ಅಂತ ಆಸ್ಪತ್ರೆಗೆ ಹೋದ 14ರ ಬಾಲಕಿಗೆ ಹೆರಿಗೆ : ಗಂಡು ಮಗು ಜನನ
1 min readಪಾಠ ಕಲಿಯುತ್ತ, ಕಿಲಕಿಲನೆ ನಗುನಗುತ್ತ ಸಹಪಾಠಿಗಳೊಂದಿಗೆ ಆಟವಾಡಬೇಕಿದ್ದ ಶಾಲಾ ಬಾಲಕಿಯೊಬ್ಬಳು ಗಂಡು ಮಗುವಿಗೆ ಜನ್ಮ ನೀಡಿರುವ ವಿಲಕ್ಷಣ ಹಾಗೂ ಅನಾಗರಿಕ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿಯಲ್ಲಿ ನಡೆದಿದೆ. ಘಟನೆಯಿಂದ ಬಾಲಕಿಯ ಪೋಷಕರು ಹಾಗೂ ನಾಗರೀಕ ಸಮಾಜ ತಲೆ ತಗ್ಗಿಸುವಂತಾಗಿದೆ.
ಸಮಾಜ ಕಲ್ಯಾಣ ಇಲಾಖೆ ಹಾಸ್ಟೆಲ್ನಲ್ಲಿ 14 ವರ್ಷದ 9ನೇ ತರಗತಿ ವಿದ್ಯಾರ್ಥಿನಿ ವಿದ್ಯಾಭ್ಯಾಸ ಮಾಡುತ್ತಿದ್ದಳು. ಆಕೆಯ ತಾಯಿ ಬಾಗೇಪಲ್ಲಿ ತಾಲ್ಲೂಕಿನ ಗ್ರಾಮವೊಂದರಲ್ಲಿ ಅಂಗನವಾಡಿ ಶಿಕ್ಷಕಿ, ತಂದೆ ಕೃಷಿಕ. ತಮ್ಮ ಮಗಳು ಚೆನ್ನಾಗಿ ಓದಿ ಉದ್ಧಾರವಾಗಲಿ ಅಂತ ದೂರದ ಮಧುಗಿರಿ ತಾಲ್ಲೂಕಿನ ಸಮಾಜ ಕಲ್ಯಾಣ ಇಲಾಖೆ ವಿದ್ಯಾರ್ಥಿನಿಲಯಕ್ಕೆ ಸೇರಿಸಿ, ಅಲ್ಲಿಂದ ಶಾಲೆಗೆ ಕಳುಹಿಸಿದ್ದರು ಪೋಷಕರು.
ಆದರೆ ಆ ಬಾಲಕಿ ಕೈಯ್ಯಲ್ಲಿ ಉತ್ತಮ ಫಲಿತಾಂಶದ ಅಂಕಪಟ್ಟಿಯ ಬದಲಿಗೆ ಈಗ ಪುಟ್ಟ ಮಗುವೊಂದು ಕಾಣುತ್ತಿದೆ. ಶಾಲಾ ಬಾಲಕಿ ಗರ್ಭಿಣಿಯಾಗಿ, ಮಗುವಿಗೆ ಹೆರಿಗೆಯಾಗುವ ತನಕ ಆಕೆಯ ಪೋಷಕರು, ವಿದ್ಯಾರ್ಥಿನಿಲಯದ ಮೇಲ್ವಿಚಾರಕಿ, ಶಾಲಾ ಶಿಕ್ಷಕರು ಅವಳ ದೇಹದಲ್ಲಾಗುತ್ತಿರುವ ಬದಲಾವಣೆಗಳನ್ನು ಗಮನಿಸಲಿಲ್ಲವೇ ಎಂಬ ಪ್ರಶ್ನೆ ಸಹಜವಾಗಿ ಮೂಡುತ್ತಿದೆ. ಅಲ್ಲದೆ, ಎಲ್ಲಾ ಗೊತ್ತಿದ್ದರೂ ಕಂಡೂ ಕಾಣದಂತೆ ಇದ್ರಾ.? ಎನ್ನುವ ಅನುಮಾನ ಎಲ್ಲರನ್ನೂ ಕಾಡುತ್ತಿದೆ.
ಸಾರ್ವಜನಿಕ ಆಸ್ಪತ್ರೆಯಲ್ಲಿ ಹೆರಿಗೆ, ಗಂಡು ಮಗು ಜನನ : ಬಾಲಕಿ ಮೂರು ದಿನಗಳ ಹಿಂದಷ್ಟೇ ಹೊಟ್ಟೆನೋವು ಅಂತ ತನ್ನ ತಾಯಿಯ ಜತೆಯಲ್ಲಿ ಸಾರ್ವಜನಿಕ ಆಸ್ಪತ್ರೆಗೆ ಬಂದು ಚುಚ್ಚುಮದ್ದು ಹಾಕಿಸಿಕೊಂಡು ಹೋಗಿದ್ದರು. ಕೆಲ ಸಮಯದ ನಂತರ ಮತ್ತೆ ಹೊಟ್ಟೆನೋವು ಅಂತ ಆಸ್ಪತ್ರೆಗೆ ಬಂದಿದ್ದಾಳೆ. ಆಗ ಚಿಕಿತ್ಸೆ ನೀಡಿದ ಕೆಲ ಸಮಯದಲ್ಲೇ ಆ ಬಾಲಕಿಗೆ ಹೆರಿಗೆಯಾಗಿ ಗಂಡು ಮಗುವಿಗೆ ಜನ್ಮ ನೀಡಿದ್ದಾಳೆ. 2.2 ಕೆಜಿ ಇರುವ ಗಂಡುಮಗು ಜನನವಾಗಿದೆ.
ಬಾಗೇಪಲ್ಲಿ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಹೆರಿಗೆಯಾಗಿದ್ದು ವೈದ್ಯರು ಕಾನೂನು ಬದಿಗಿಟ್ಟು ತಾಯಿ ಮತ್ತು ಮಗುವನ್ನು ರಕ್ಷಿಸಿ ಮಾನವೀಯತೆ ಮೆರೆದಿದ್ದಾರೆ. ಸಧ್ಯ ಹೆಚ್ಚಿನ ಆರೈಕೆಗಾಗಿ ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಗೆ ರವಾನೆ ಮಾಡಲಾಗಿದೆ. ಬಾಲಕಿಯ ಈ ಪರಿಸ್ಥಿತಿಗೆ ಕಾರಣವಾದವನಿಗಾಗಿ ಹುಡುಕಾಟ ನಡೆಸಲಾಗಿದ್ದು, ಈ ಬಗ್ಗೆ ಬಾಗೇಪಲ್ಲಿ ಪೊಲೀಸ್ ಠಾಣೆಯಲ್ಲಿ ಸ್ವಯಂ ಪ್ರೇರಿತ ಪ್ರಕರಣ ದಾಖಲಾಗಿದೆ.