ಚಿಕ್ಕಬಳ್ಳಾಪುರದಲ್ಲಿ ಎಬಿವಿಪಿ ಪ್ರತಿಭಟನೆ
1 min readಚಿಕ್ಕಬಳ್ಳಾಪುರದಲ್ಲಿ ಎಬಿವಿಪಿ ಪ್ರತಿಭಟನೆ ಕೂಡಲೇ ವಿದ್ಯಾರ್ಥಿ ವೇತನ ಬಿಡುಗಡೆಗೆ ಆಗ್ರಹ ಅಸಮರ್ಪಕ ಬಸ್ ಸೇವೆಗೆ ಆಕ್ರೋಶ ಶಿಕ್ಷಣ ಸಚಿವರ ವಜಾಗೆ ವಿದ್ಯಾರ್ಥಿಗಳ ಒತ್ತಾಯ
ಬಡ ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ನೀಡದೆ, ಶಿಕ್ಷಣದಿಂದ ವಂಚಿತರಾಗುವಂತೆ ಮಾಡುತ್ತಿರುವ ರಾಜ್ಯ ಸರ್ಕಾರದ ನಡೆ ಖಂಡಿಸಿ ಅಖಿಲ ಭಾರತೀಯ ಪರಿಷತ್ ನಿಂದ ಚಿಕ್ಕಬಳ್ಳಾಪುರದ ಶಿಡ್ಲಘಟ್ಟ ವೃತ್ತದಿಂದ ಮೆರವಣಿಗೆಯಲ್ಲಿ ಬಂದು ತಾಲೂಕು ಕಚೇರಿ ಹಾಗೂ ಕೆ ಎಸ್ ಆರ್ ಟಿ ಸಿ ಅಧಿಕಾರಿಗೆ ಮನವಿ ಸಲ್ಲಿಸಲಾಯಿತು.
ಕರ್ನಾಟಕ ಉತ್ತಮ ಶಿಕ್ಷಣ ವ್ಯವಸ್ಥೆ ಹಾಗೂ ಉತ್ಕೃಷ್ಟ ಮಟ್ಟದ ವಿಶ್ವವಿದ್ಯಾಲಯಗಳಿಂದ ಹೆಸರುವಾಸಿಯಾಗಿದೆ. ಸಾವಿರಾರು ಹೊರರಾಜ್ಯದ ವಿದ್ಯಾರ್ಥಿಗಳು ಕರ್ನಾಟಕವನ್ನು ಶಿಕ್ಷಣಕ್ಕಾಗಿ ಆರಸಿ ಬರುತ್ತಿರುವುದು ರಾಜ್ಯದ ಹೆಮ್ಮೆಯಾಗಿದೆ. ಆದರೆ ಉನ್ನತ ಶಿಕ್ಷಣದ ಆಸೆ ಇಟ್ಟುಕೊಂಡ ರಾಜ್ಯದ ಅದೆಷ್ಟೋ ಬಡ ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳು ಸರ್ಕಾರ ನೆರವಿಗೆ ಧಾವಿಸುತ್ತದೆ. ವಿದ್ಯಾರ್ಥಿ ವೇತನದ ರೂಪದಲ್ಲಿ ನೀಡುತ್ತದೆ ಎಂದು ಕಾಲೇಜುಗಳಿಗೆ ದಾಖಲಾಗುತ್ತಾರೆ. ಆದರೆ ರಾಜ್ಯ ಸರ್ಕಾರ ಶಿಕ್ಷಣಕ್ಕೆ ನೀಡಬೇಕಾದ ಪ್ರಾಮುಖ್ಯತೆ ನೀಡದಿರುವುದು ನೋವಿನ ಸಂಗತಿ ಎಂದರು.
ವಿದ್ಯಾರ್ಥಿವೇತನದಲ್ಲೂ ರಾಜಕೀಯವ ರಾಜ್ಯ ಸರ್ಕಾರ ರಾಜ್ಯದ ವಿದ್ಯಾರ್ಥಿಗಳ ಶೋಚನೀಯ ಸ್ಥಿತಿಗೆ ಕಾರಣವಾಗಿದೆ. ಎಎಸ್‌ಪಿ ತಂತ್ರಾಂಶದ ಮೂಲಕ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಕೃಷಿ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಆಯುಷ್ ಇಲಾಖೆ, ತಾಂತ್ರಿಕ ಶಿಕ್ಷಣ ಇಲಾಖೆ ಸೇರಿದಂತೆ ಇತರ ಇಲಾಖೆಗಳಡಿ ಲಕ್ಷಾಂತರ ವಿದ್ಯಾರ್ಥಿಗಳು ಪದವಿ ಮತ್ತು ಸ್ನಾತ್ತಕೋತ್ತರ ಶಿಕ್ಷಣಕ್ಕಾಗಿ ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಆದರೆ ರಾಜ್ಯ ಸರ್ಕಾರ ಸರಿಯಾದ ಸಮಯಕ್ಕೆ ವಿದ್ಯಾರ್ಥಿವೇತನ ನೀಡದೆ ಲಕ್ಷಾಂತರ ವಿದ್ಯಾರ್ಥಿಗಳ ಶಿಕ್ಷಣ ಆತಂತ್ರ ಸ್ಥಿತಿಗೆ ತರುವ ಕೆಲಸ ಮಾಡಿದೆ ಎಂದು ಆರೋಪಿಸಿದರು.
ರಾಜ್ಯದ ರೈತರ ಮಕ್ಕಳ
ಶಿಕ್ಷಣಕ್ಕಾಗಿ ಹಿಂದಿನ ಸರ್ಕಾರ ರೈತ ವಿದ್ಯಾನಿಧಿ ವಿದ್ಯಾರ್ಥಿವೇತನವನ್ನು ಪ್ರಾರಂಭಿಸಿತ್ತು. ಈ ವಿದ್ಯಾರ್ಥಿವೇತನವನ್ನು ಈಗಿನ ರಾಜ್ಯ ಸರ್ಕಾರ ತಡೆಹಿಡಿಯುವ ಕೆಲಸ ಮಾಡಿ ರೈತರ ಮಕ್ಕಳ ಶಿಕ್ಷಣ ಕಸಿದುಕೊಳ್ಳುವ ಕೆಲಸ ಮಾಡುತ್ತಿದೆ ಎಂದರು.
ಈ ವೇಳೆ ಮಾತನಾಡಿದ ಅಖಿಲ ಭಾರತೀಯ ಪರಿಷತ್ ಚಿಕ್ಕಬಳ್ಳಾಪುರ ನಗರ ಕಾರ್ಯದರ್ಶಿ ಶ್ರೇಯಸ್, ಶಿಕ್ಷಣ ಸಚಿವ ಮಧು ಬಂಗಾರಪ್ಪ ಕೂಡಲೇ ರಾಜೀನಾಮೆ ನೀಡಬೇಕು, ಈಗಾಗಲೇ ಚೆಕ್ ಬೌನ್ಸ್ ಪ್ರಕರಣ ಇಡೀ ರಾಜ್ಯದ್ಯಂತ ಗೊತ್ತಿದೆ. ಹಾಗಾಗಿ ಚಿಕ್ಕಬಳ್ಳಾಪುರ ತಹಸಿಲ್ದಾರ್ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ನೀಡಲಾಗುವುದು ಎಂದರು.
ಶಿಕ್ಷಣ ಸಚಿವರು ಕೂಡಲೇ ರಾಜೀನಾಮೆ ನೀಡಬೇಕು, ಈ ಬಗ್ಗೆ ರಾಜ್ಯ ಸರ್ಕಾರ ತೀರ್ಮಾನ ತೆಗೆದುಕೊಳ್ಳಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.
ವಿದ್ಯಾರ್ಥಿನಿ ಮೇಘನಾ ಮಾತನಾಡಿ , ಕ್ಷೇತ್ರದಲ್ಲಿ ಬಸ್ ಗಳ ಸಮಸ್ಯೆ ತೀವ್ರವಾಗಿದ್ದು, ದೂರದ ಊರುಗಳಿಂದ ಬರುವ ವಿದ್ಯಾರ್ಥಿಗಳು ತರಗತಿಗಳಿಗೆ ಗೈರು ಹಾಜರಾಗುವಂತೆ ಆಗುತ್ತಿದೆ. ಬಸ್ ಗಳ ತೊಂದರೆಯಿಂದ ನಿಗಧಿತ ಸಮಯಕ್ಕೆ ತರಗತಿಗಳಿಗೆ ಹಾಜರಾಗಲು ಸಾಧ್ಯವಾಗುತ್ತಿಲ್ಲ. ಮಹಿಳೆಯರಿಗೆ ಉಚಿತ ಪ್ರಯಾಣ ಮಾಡಿರುವ ಕಾರಣ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿ, ವಿದ್ಯಾರ್ಥಿಗಳನ್ನ ನೋಡಿ ಬಸ್ ನಿಲ್ಲಿಸದೆ ಹೋಗುತ್ತಾರೆ. ಇದರಿಂದ ತೊಂದರೆಗುತ್ತಿದೆ ಎಂದು ನೋವು ತೋಡಿಕೊಂಡರು.