ಪಿ.ಸಿ.ಮೋಹನ್‌ಗೆ ಟಿಕೆಟ್: ಬಿಜೆಪಿಯಲ್ಲಿ ಗೊಂದಲ
1 min readಸತತ ಮೂರು ಬಾರಿ ಬಿಜೆಪಿ ಪ್ರತಿನಿಧಿಸುತ್ತಿರುವ ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದಲ್ಲಿ ಈ ಬಾರಿ ಎಲ್ಲ ಪಕ್ಷಗಳಲ್ಲೂ ಸರ್ವಸಮ್ಮತ ಅಭ್ಯರ್ಥಿ ಆಯ್ಕೆಯೇ ಸವಾಲಾಗಿದ್ದು, “ಸಾಂದರ್ಭಿಕ ಶಿಶು’ ಕಣಕ್ಕಿಳಿಯುವ ಸಾಧ್ಯತೆ ಹೆಚ್ಚಿದೆ.
ಸದ್ಯ ಸಂಸದರಾಗಿರುವ ಪಿ.ಸಿ.ಮೋಹನ್ ಮತ್ತೆ ಕಣಕ್ಕಿಳಿಯಲು ಸಿದ್ಧತೆ ನಡೆಸುತ್ತಿದ್ದಾರಾದರೂ, ಅವರಿಗೆ ಟಿಕೆಟ್ ನೀಡಬೇಕೇ, ಬೇಡವೇ ಎಂಬ ಪ್ರಶ್ನೆ ಬಿಜೆಪಿ ನಾಯಕರನ್ನು ಕಾಡುತ್ತಿದೆ.
ಸಂಘ ಪರಿವಾರದ ಕೆಲವು ನಾಯಕರ ಜತೆಗೆ ಬಿಜೆಪಿಯ ಮೂವರು ಶಾಸಕರು ಹಾಗೂ ಒಬ್ಬ ಪರಾಜಿತ ಅಭ್ಯರ್ಥಿ ಮೋಹನ್‌ಗೆ ಈ ಬಾರಿ ಟಿಕೆಟ್ ಬೇಡ ಎಂದು ಪಟ್ಟು ಹಿಡಿದಿದ್ದಾರೆ. ಬಲಿಜಿಗ ಸಮುದಾಯ ಸಹಿತ ಒಬಿಸಿ ಮತ ಹೆಚ್ಚಿನ ಸಂಖ್ಯೆಯಲ್ಲಿದೆ ಎಂಬ ಕಾರಣವನ್ನು ಮುಂದಿಟ್ಟು ಮಂಡ್ಯ ಸಂಸದೆ ಸುಮಲತಾಗೆ ಟಿಕೆಟ್ ನೀಡಿದರೆ ಹೇಗೆ? ಎಂಬ ಚರ್ಚೆಯೂ ಪಕ್ಷದಲ್ಲಿ ನಡೆಯುತ್ತಿದೆಯಾದರೂ ಹಾಲಿ ಸಂಸದರಿಗೆ ಅವಕಾಶ ನಿರಾಕರಿಸಬೇಕೋ, ಬೇಡವೋ ಎಂಬುದು ಇನ್ನೂ ಗಟ್ಟಿಯಾಗಿಲ್ಲ.
ಆದರೆ ಕಾಂಗ್ರೆಸ್‌ನಲ್ಲಿ ಮಾತ್ರ ಇದಕ್ಕೆ ವ್ಯತಿರಿಕ್ತ ಸ್ಥಿತಿ ಇದೆ. ಬೆಂಗಳೂರು ಕೇಂದ್ರ ಸಹಿತ ಒಟ್ಟು ಮೂರು ಲೋಕಸಭಾ ಕ್ಷೇತ್ರಗಳನ್ನು ತಮ್ಮ ಸಮು ದಾಯಕ್ಕೆ ಬಿಟ್ಟು ಕೊಡ ಬೇಕೆಂದು ಕಾಂಗ್ರೆಸ್‌ನ ಅಲ್ಪ ಸಂಖ್ಯಾಕ ನಾಯಕರು ಈಗಾಗಲೇ ಹೈಕಮಾಂಡ್‌ಗೆ ಬೇಡಿಕೆ ಸಲ್ಲಿಸಿದ್ದಾರೆ. ಶ್ರಮ ಹಾಕಿದರೆ ಬೆಂಗಳೂರು ಕೇಂದ್ರದಲ್ಲಿ ಗೆಲುವು ಕಷ್ಟವಲ್ಲ ಎಂದು ಕಾಂಗ್ರೆಸ್ ನಡೆಸಿದ ಥರ್ಡ್ ಪಾರ್ಟಿ ಸರ್ವೇ ತಿಳಿಸಿದೆ. ಹೀಗಾಗಿ ಅಲ್ಪಸಂ ಖ್ಯಾಕ ಸಮುದಾಯಕ್ಕೆ ಸೇರಿದ ಹಿರಿಯ ಕಿರಿಯ ನಾಯಕರು ಈಗ ಈ ಕ್ಷೇತ್ರದ ಮೇಲೆ ಕಣ್ಣಿಟ್ಟಿದ್ದು, ಬಿಜೆಪಿ ಗಿಂತಲೂ ಕಾಂಗ್ರೆಸ್‌ನಲ್ಲೇ ಪೈಪೋಟಿ ಹೆಚ್ಚಿದೆ.
ಅಲ್ಪಸಂಖ್ಯಾಕ ಸಮುದಾಯಕ್ಕೆ ಸೇರಿದ ಹಲವು ಮುಖಂಡರ ಹೆಸರು ಕೇಳಿಬರುತ್ತಿದೆ. ಕುತೂಹಲಕಾರಿ ಸಂಗತಿ ಎಂದರೆ ಕಳೆದ ಎರಡು ಚುನಾವಣೆಯಲ್ಲಿ ಬಿಜೆಪಿಗೆ ತೀವ್ರ ಪೈಪೋಟಿ ನೀಡಿದ್ದ ಶಾಸಕ ರಿಜ್ವಾನ್ ಅರ್ಷದ್ ತಾವು ಈ ಬಾರಿ ಲೋಕಸಭಾ ಚುನಾವಣೆಯ ಆಟಕ್ಕಿಲ್ಲ ಎಂಬ ಸ್ಪಷ್ಟ ಸಂದೇಶವನ್ನು ರಾಜ್ಯ ನಾಯಕರಿಗೆ ನೀಡಿದ್ದಾರೆ. ಹೀಗಾಗಿ ಶಾಸಕ ಎನ್.ಎ. ಹ್ಯಾರೀಸ್, ಕೆಪಿಸಿಸಿ ಮಾಜಿ ಪ್ರಧಾನ ಕಾರ್ಯದರ್ಶಿ ಎಸ್.ಎ.ಹುಸೇನ್, ರೆಹಮಾನ್ ಖಾನ್ ಪುತ್ರ ಮನ್ಸೂರ್ ಹಾಗೂ ಯುವ ಕಾಂಗ್ರೆಸ್ ಅಧ್ಯಕ್ಷ ಮೊಹಮ್ಮದ್ ನಲಪಾಡ್ ಹೆಸರು ಮುಂಚೂಣಿಯಲ್ಲಿದೆ.
ಒಲ್ಲೆ ಎಂದ ಜಮೀರ್
ಕಾಂಗ್ರೆಸ್ ಮೂಲಗಳ ಪ್ರಕಾರ ಈ ಬಾರಿ ಲೋಕಸಭಾ ಚುನಾವಣೆ ಯಲ್ಲಿ ಮುಸ್ಲಿಮರಿಗೆ 3 ಟಿಕೆಟ್ ನೀಡಬೇಕೆಂಬ ಪ್ರಸ್ತಾವವನ್ನು ವರಿಷ್ಠರ ಮುಂದಿಟ್ಟವರು ವಸತಿ ಸಚಿವ ಜಮೀರ್ ಅಹ್ಮದ್ ಖಾನ್. ಆದರೆ ಈ ಚರ್ಚೆ ವೇಳೆ ನೀವೇ ಕಣಕ್ಕೆ ಇಳಿಯಿರಿ ಎಂಬ ಸಂದೇಶ ವನ್ನು ವರಿಷ್ಠರು ನೀಡಿದ್ದರು. ಆದರೆ ಸ್ಪರ್ಧೆ ಒಲ್ಲೆ ಎಂದಿರುವ ಜಮೀರ್ ಅಭ್ಯರ್ಥಿಯ ಗೆಲುವಿಗೆ ಶ್ರಮಿಸುವುದಾಗಿ ಭರವಸೆ ನೀಡಿದ್ದಾರೆ.
ಹೀಗಾಗಿ ಬೆಂಗಳೂರು ಕೇಂದ್ರಕ್ಕೆ ಜಮೀರ್ ಬ್ಯಾಟಿಂಗ್ ಮಾಡಿದ ವ್ಯಕ್ತಿ ಕಣಕ್ಕಿಳಿಯುವುದು ಬಹುಪಾಲು ಪಕ್ಕಾ ಎಂಬುದು ಕಾಂಗ್ರೆಸ್ ಮೂಲಗಳ ಅಭಿಪ್ರಾಯ. ಕ್ಷೇತ್ರಕ್ಕೆ ಹ್ಯಾರೀಸ್ ಸೂಕ್ತ ಎಂಬ ಅಭಿಪ್ರಾಯವನ್ನು ರಿಜ್ವಾನ್ ಬಣ ಹರಿಬಿಟ್ಟಿದೆ. ಆದರೆ ಲೋಕಸಭೆಗೆ ಪುತ್ರನಿಗೆ ಅವಕಾಶ ನೀಡುವುದು ಸೂಕ್ತ ಎಂಬುದು ಹ್ಯಾರೀಸ್ ಅಭಿಮತ. ಹೀಗಾಗಿ ಸಂದರ್ಭವನ್ನು ಆಧರಿಸಿ ಹುಸೇನ್ ಅಥವಾ ಮನ್ಸೂರ್ ಪೈಕಿ ಒಬ್ಬರಿಗೆ ಬೆಂಗಳೂರು ಕೇಂದ್ರದ ಟಿಕೆಟ್ ಒಲಿಯಬಹುದೆಂಬ ಮಾತು ಕಾಂಗ್ರೆಸ್‌ನಲ್ಲಿ ಬಲವಾಗಿದೆ.
ತ್ರಿವಳಿ ಸಚಿವರಿಗೆ ಹೊಣೆ
ಬೆಂಗಳೂರು ಕೇಂದ್ರ ಲೋಕಸಭಾ ವ್ಯಾಪ್ತಿಯಿಂದಲೇ ರಾಜ್ಯ ಸಚಿವ ಸಂಪುಟದಲ್ಲಿ ತ್ರಿವಳಿ ಸಚಿವರು ಸ್ಥಾನ ಪಡೆದಿದ್ದಾರೆ. ಸರ್ವಜ್ಞನಗರದಿಂದ ಕೆ.ಜೆ.ಜಾರ್ಜ್, ಗಾಂಧಿನಗರದಿಂದ ದಿನೇಶ್ ಗುಂಡೂರಾವ್ ಹಾಗೂ ಚಾಮರಾಜಪೇಟೆಯಿಂದ ಆಯ್ಕೆಗೊಂಡಿರುವ ಜಮೀರ್ ಅಹ್ಮದ್ ಖಾನ್ ಸಿದ್ದರಾಮಯ್ಯ ಸಂಪುಟದ ಪ್ರಭಾವಿ ಸಚಿವರಾಗಿದ್ದಾರೆ. ಹೀಗಾಗಿ ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಈ ಬಾರಿ ಗೆದ್ದೇ ಗೆಲ್ಲಬೇಕೆಂಬುದು ಕಾಂಗ್ರೆಸ್ ಹೈಕಮಾಂಡ್‌ನ ನಿರೀಕ್ಷೆಯಾಗಿದೆ. ಈ ಹಿನ್ನೆಲೆಯಲ್ಲಿ ಈ ಮೂವರು ಸಚಿವರಿಗೆ ಚುನಾವಣೆಯ ಜವಾಬ್ದಾರಿ ಹೊರಿಸಲಾಗುತ್ತಿದೆ. ಕೆಲವು ಸಚಿವರಿಗೆ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುವಂತೆ ಸೂಚನೆ ನೀಡಬೇಕೆಂಬ ಪ್ರಸ್ತಾವ ಕಾಂಗ್ರೆಸ್‌ನಲ್ಲಿ ಇದೆಯಾದರೂ ಈ ಮೂವರಲ್ಲಿ ಯಾರೊಬ್ಬರೂ ಅಖಾಡಕ್ಕೆ ಇಳಿಯುವ ಸಾಧ್ಯತೆ ಇಲ್ಲ. ಹೀಗಾಗಿ ಹೊಣೆಗಾರಿಕೆ ತೆಗೆದುಕೊಳ್ಳುವುದು ಅನಿವಾರ್ಯವಾಗಲಿದೆ.
ಪಿ.ಸಿ.ಮೋಹನ್ ಹಾಲಿ ಸಂಸದ (ಬಿಜೆಪಿ)
ಬಿಜೆಪಿ-ಜೆಡಿಎಸ್ ಸಂಭಾವ್ಯರು
1.ಪಿ.ಸಿ.ಮೋಹನ್
2.ಸುಮಲತಾ
ಕಾಂಗ್ರೆಸ್ ಸಂಭಾವ್ಯರು
1.ಎನ್.ಎ.ಹ್ಯಾರೀಸ್ 2.ಎಸ್.ಎ.ಹುಸೇನ್
3.ಮನ್ಸೂರ್ 3.ಮೊಹಮ್ಮದ್ ನಲಪಾಡ್
https://youtube.com/@ctvnewschikkaballapura?si=C-CJWuVfM-65JQMa