ಹೈನುಗಾರಿಕೆ ಗ್ರಾಮೀಣ ರೈತರ ಜೀವನೋಪಾಯ ಶಾಸಕ ಧೀರಜ್ ಮುನಿರಾಜು ಅಭಿಮತ
1 min readಹೈನುಗಾರಿಕೆ ಗ್ರಾಮೀಣ ರೈತರ ಜೀವನೋಪಾಯ ಶಾಸಕ ಧೀರಜ್ ಮುನಿರಾಜು ಅಭಿಮತ ಅಧಿಕ ಹಾಲು ಕರೆದ ರೈತರಿಗೆ ಬಹುಮಾನ ವಿತರಣೆ
ದೊಡ್ಡಬಳ್ಳಾಪುರ ಭಾಗದಲ್ಲಿ ಹೈನುಗಾರಿಕೆ ಮೇಲೆ ಹೆಚ್ಚು ಮಂದಿ ಅವಲಂಬಿರಾಗಿದ್ದು, ಬರದ ಬಗ್ಗೆ ತಾಲ್ಲೂಕು ಆಡಳಿತ ಸಂಪೂರ್ಣ ಸಜ್ಜಾಗಿದೆ ಎಂದು ಶಾಸಕ ಧೀರಜ್ ಮುನಿರಾಜು ತಿಳಿಸಿದರು.
ದೊಡ್ಡಬಳ್ಳಾಪುರ ತಾಲ್ಲೂಕಿನ ಹುಸ್ಕೂರು ಗ್ರಾಮದಲ್ಲಿ ಮಂಗಳವಾರ ಕೆಎಂಎಫ್, ಬಮೂಲ್, ಪಶುಪಾಲನಾ ಇಲಾಖೆಗಳ ಸಹಭಾಗಿತ್ವದಲ್ಲಿ ಹಮ್ಮಿಕೊಂಡಿದ್ದ ಅಧಿಕ ಹಾಲು ಕರೆಯುವ ಸ್ಪರ್ಧೆ ವಿಜೇತರಿಗೆ ಬಹುಮಾನ ವಿತರಿಸಿ ಮಾತನಾಡಿದ ಶಾಸಕರು, ಈ ಬಾರಿ ತಾಲ್ಲೂಕಿನ ಪ್ರತಿ ಗ್ರಾಮಕ್ಕೆ ಮೇವು ನೀಡಲು ಜಿಲ್ಲಾ ಉಸ್ತುವಾರಿ ಸಚಿವ ಕೆಎಚ್ ಮುನಿಯಪ್ಪ ಒಪ್ಪಿಗೆ ನೀಡಿದ್ದಾರೆ ಎಂದರು.
ಹೈನುಗಾರಿಕೆ ಮಾಡುವ ಎಲ್ಲಾ ರೈತರಿಗೆ ಸಂಪೂರ್ಣ ಸಹಕಾರ ನೀಡಲಾಗುವುದು. ಹೈನುಗಾರಿಕೆ ಗ್ರಾಮೀಣ ಭಾಗದ ಸಣ್ಣ ರೈತರು ಮತ್ತು ಮಹಿಳೆಯರಿಗೆ ಜೀವನೋಪಾಯವಾಗಿದೆ ಎಂದರು.
ಹಾಲು ಕರೆಯುವ ಸ್ಪರ್ಧೆಯ ಕೊನೆಯ ಹಂತಕ್ಕೆ ಒಟ್ಟು 17 ರಾಸುಗಳು ಅರ್ಹತೆ ಪಡೆದವು. ಇದರಲ್ಲಿ ಹುಸ್ಕೂರು ಗ್ರಾಮದ ಗಜೇಂದ್ರ ಎಂಬುವರ ಹಸು 40.10 ಕೆಜಿ ಹಾಲು ಕರೆಯುವ ಮೂಲಕ ಪ್ರಥಮ ಸ್ಥಾನಪಡೆದರು. ಮರಳೆನಹಳ್ಳಿಯ ಆರ್ ಅರುಣ್ ಕುಮಾರ್ 39.45 ಕೆ.ಜಿ ಹಾಲು ಕರೆದು ದ್ವಿತಿಯ ಸ್ಥಾನ ಪಡೆದರು. ಮೂರನೇ ಸ್ಥಾನ ಪಡೆದ ಹುಸ್ಕೂರು ಗ್ರಾಮದ ಪಿಳ್ಳಣ್ಣ 35.7ಕೆಜಿ ಹಾಲು ಕರೆದರು.
ಕಾರ್ಯಕ್ರಮ ಕುರಿತು ಮಾತನಾಡಿದ ಕೆಎಂಎಫ್ ನಿರ್ದೇಶಕ ಬಿಸಿ ಆನಂದ್ ಕುಮಾರ್, ರೈತರ ಸಮಸ್ಯೆ ಕೇಳಿ ಬಗೆಹರಿಸುವ ಶಕ್ತಿ ಕೆಎಂಎಫ್ ಮುಖ್ಯ ವ್ಯವಸ್ಥಾಪಕ ನಿರ್ದೇಶಕರಿಗೆ ಇದೆ. ಸಮಸ್ಯೆ ಕೇಳಿ ರೈತರ ನೆರವಿಗೆ ಧಾವಿಸಿ. ಇದಕ್ಕಾಗಿಯೇ ನಿಮ್ಮನ್ನು ಇಲ್ಲಿಗೆ ಕರೆಸಿದ್ದೇವೆ. ಕನಿಷ್ಟ ರೈತರ ಪರ ನಿಲ್ಲಬೇಕು ಎಂದು ಆಗ್ರಹಿಸಿದರು
ಕಾರ್ಯಕ್ರಮದಲ್ಲಿ ಕೆಎಂಎಫ್ ಎಂಡಿ ಜಗದೀಶ್, ಬಮೂಲ್ ನಿರ್ದೆಶಕ ಬಿಸಿ ಆನಂದ್ ಕುಮಾರ್, ಹುಸ್ಕೂರು ಎಂಪಿಸಿಎಸ್ ಅಧ್ಯಕ್ಷ ಮಂಜುನಾಥ, ಕೆಸ್ತೂರು ಗ್ರಾ.ಪಂ ಅಧ್ಯಕ್ಷ ರಮೇಶ್, ಪಿಎಲ್ಡಿ ಬ್ಯಾಂಕ್ ಅಧ್ಯಕ್ಷ ಟಿ.ವಿ ಲಕ್ಣ್ಮೀನಾರಾಯಣ, ಬಮೂಲ್ ವ್ಯವಸ್ಥಾಪಕ ನರಸಿಂಹಯ್ಯ ಇದ್ದರು.