ತಿರುಪತಿ ಭಕ್ತರಿಗಾಗಿ ವಿಶೇಷ ರೈಲು ಪುನಃ ಓಡಿಸಲು ಒತ್ತಾಯ
1 min readಡಿಸೆಂಬರ್ 18; ತಿರುಪತಿ ತಿರುಮಲಕ್ಕೆ ದೇಶದ ವಿವಿಧ ರಾಜ್ಯಗಳಿಂದ ಲಕ್ಷಾಂತರ ಭಕ್ತರು ಭೇಟಿ ನೀಡುತ್ತಾರೆ. ಮಲೆನಾಡಿನ ಜನರು ಶ್ರೀ ವೆಂಕಟೇಶ್ವರ ಸ್ವಾಮಿ ದರ್ಶನಕ್ಕೆ ತೆರಳಲು ಇದ್ದ ರೈಲು ಸೇವೆ ನಿಂತು ಹೋಗಿದ್ದು, ತೊಂದರೆ ಉಂಟಾಗಿದೆ.
ಶಿವಮೊಗ್ಗ ಸಂಸದ ಬಿ.ವೈ. ರಾಘವೇಂದ್ರ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಭೇಟಿಯಾಗಿದ್ದಾರೆ. ಈ ಸಂದರ್ಭದಲ್ಲಿ ಲೋಕಸಭಾ ಕ್ಷೇತ್ರದ ಹಲವು ರೈಲು ಯೋಜನೆಗಳ ಕುರಿತು ಅವರು ಮನವಿಗಳನ್ನು ಸಲ್ಲಿಸಿದ್ದಾರೆ. ಆಗ ತಿರುಪತಿ ರೈಲಿನ ಬಗ್ಗೆ ಸಹ ಗಮನ ಸೆಳೆದಿದ್ದಾರೆ.
ಭಾರತೀಯ ರೈಲ್ವೆ ಶಿವಮೊಗ್ಗ-ರೇಣಿಗುಂಟ (ತಿರುಪತಿ ಸಮೀಪ)-ಚೆನ್ನೈ ನಡುವೆ ವಾರಕ್ಕೆ ಎರಡು ಬಾರಿ ಸಂಚಾರ ನಡೆಸುವ ವಿಶೇಷ ರೈಲು ಓಡಿಸುತ್ತಿತ್ತು. ಕೋವಿಡ್ ಸಂದರ್ಭದಲ್ಲಿ ರದ್ದುಗೊಂಡಿದ್ದ ರೈಲನ್ನು ಮತ್ತೆ ಆರಂಭಿಸಲಾಗಿತ್ತು.
ಪ್ರಯಾಣಿಕರಿಂದ ಭರ್ತಿ; ಶಿವಮೊಗ್ಗ, ಚಿತ್ರದುರ್ಗ, ದಾವಣಗೆರೆ, ಚಿಕ್ಕಮಗಳೂರು ಜಿಲ್ಲೆಗಳಿಂದ ತಿರುಪತಿಗೆ ತೆರಳುವ ಭಕ್ತರು ಈ ರೈಲನ್ನು ಅವಲಂಬಿಸಿದ್ದರು. ರೈಲು ವೇಳಾಪಟ್ಟಿಯೂ ಭಕ್ತರಿಗೆ ಅನುಕೂಲಕರವಾಗಿತ್ತು. ಆದರೆ ಅಕ್ಟೋಬರ್ 1ರಿಂದ ರೈಲು ಸೇವೆ ಸ್ಥಗಿತಗೊಳಿಸಲಾಗಿದೆ.
ಶಿವಮೊಗ್ಗ-ರೇಣಿಗುಂಟ-ಚೆನ್ನೈ ನಡುವೆ ವಾರಕ್ಕೆ ಎರಡು ಬಾರಿ ಸಂಚಾರ ನಡೆಸುವ ರೈಲು ಸ್ಥಗಿತಗೊಂಡಿರುವ ಕಾರಣ ಜನರಿಗೆ ತೊಂದರೆಯಾಗಿದೆ. ಅದರಲ್ಲೂ ತಿರುಪತಿಗೆ ಪ್ರಯಾಣಿಸುವ ಸಾವಿರಾರು ಭಕ್ತರಿಗೆ ತೊಂದರೆಯಾಗಿದೆ. ಆದ್ದರಿಂದ ರೈಲನ್ನು ಪುನಃ ಆರಂಭಿಸಬೇಕು ಎಂದು ಸಂಸದ ಬಿ. ವೈ. ರಾಘವೇಂದ್ರ ಮನವಿ ಮಾಡಿದ್ದಾರೆ.
ಸಂಸದ ಬಿ. ವೈ. ರಾಘವೇಂದ್ರ ಪ್ರಯತ್ನದ ಫಲವಾಗಿಯೇ 2019-20ರಲ್ಲಿ ರೈಲ್ವೆ ಇಲಾಖೆ ಮಲೆನಾಡು ಮತ್ತು ತಿರುಪತಿಗೆ ಸಂಪರ್ಕ ಕಲ್ಪಿಸುವ ಶಿವಮೊಗ್ಗ-ರೇಣಿಗುಂಟ-ಚೆನ್ನೈ ನಡುವಿನ ರೈಲನ್ನು ಆರಂಭಿಸಿತ್ತು. ಭಾನುವಾರ ಮತ್ತು ಮಂಗಳವಾರ ಶಿವಮೊಗ್ಗದಿಂದ, ಸೋಮವಾರ ಮತ್ತು ಬುಧವಾರ ಚೆನ್ನೈನಿಂದ ರೈಲು ಓಡುತ್ತಿತ್ತು. ಆದರೆ ಕೋವಿಡ್ ಸಂದರ್ಭದಲ್ಲಿ ರೈಲು ಸೇವೆ ಸ್ಥಗಿತಗೊಳಿಸಲಾಯಿತು.
ಕೋವಿಡ್ ಪರಿಸ್ಥಿತಿ ತಿಳಿಯಾದ ಬಳಿಕ ಬದಲಾದ ವೇಳಾಪಟ್ಟಿಯೊಂದಿಗೆ ರೈಲು ಸಂಚಾರವನ್ನು ಪುನಃ ಆರಂಭಿಸಿತ್ತು. ಪರಿಷ್ಕೃತ ವೇಳಾಪಟ್ಟಿಯಂತೆ ರೈಲು ಸಂಜೆ 7 ಗಂಟೆಗೆ ಶಿವಮೊಗ್ಗದಿಂದ ಹೊರಡುತ್ತಿತ್ತು. ಮರುದಿನ ಬೆಳಗ್ಗೆ 8.20ಕ್ಕೆ ರೇಣಿಗುಂಟ ತಲುಪಿ, ಅಲ್ಲಿಂದ 11.10ಕ್ಕೆ ಚೆನ್ನೈಗೆ ಸಂಚಾರ ನಡೆಸುತ್ತಿತ್ತು. ಚೆನ್ನೈನಿಂದ 3.50ಕ್ಕೆ ಹೊರಟು, 6.10ಕ್ಕೆ ರೇಣಿಗುಂಟಕ್ಕೆ ಆಗಮಿಸಿ, ಮರುದಿನ ಬೆಳಗ್ಗೆ 7.55ಕ್ಕೆ ಶಿವಮೊಗ್ಗಕ್ಕೆ ವಾಪಸ್ ಆಗುತ್ತಿತ್ತು. ಇದರಿಂದ ತಿರುಪತಿ ಭಕ್ತರಿಗೆ ಅನುಕೂಲವಾಗಿತ್ತು.
ಶಿವಮೊಗ್ಗದಿಂದ ಹೊರಡುವ ರೈಲು ಚಿತ್ರದುರ್ಗ, ಬಳ್ಳಾರಿ, ಗುಂತಕಲ್, ರೇಣಿಗುಂಟ ಮೂಲಕ ಚೆನ್ನೈ ತಲುಪುತ್ತಿತ್ತು. ರೈಲಿಗೆ ಭದ್ರಾವತಿ, ತರೀಕೆರೆ, ಬೀರೂರು, ಅಜ್ಜಂಪುರ, ಹೊಸದುರ್ಗ, ಚಿತ್ರದುರ್ಗ, ಚಳ್ಳಕೆರೆ, ಮೊಳಕಾಲ್ಮೂರು, ರಾಯದುರ್ಗ, ಬಳ್ಳಾರಿ, ಗುಂತಕಲ್, ತಡಪತ್ರಿ, ಗುತ್ತಿ, ಯರಗುಂಟಾ, ಕಡಪ, ರಾಯಪೇಟ, ರೇಣಿಗುಂಟ, ಪೆರಂಬೂರುಗಳಲ್ಲಿ ನಿಲುಗಡೆ ನೀಡಲಾಗಿತ್ತು. ಆದರೆ ಈಗ ರೈಲು ಸೇವೆ ರದ್ದಾಗಿದೆ.
ಕೆಲವು ದಿನಗಳ ಹಿಂದೆ ಶಿವಮೊಗ್ಗ-ಬಳ್ಳಾರಿ ಮೂಲಕ ಚೆನ್ನೈಗೆ ಸಂಚಾರ ನಡೆಸುವ ರೈಲು ಸೇವೆ ಪುನಃ ಆರಂಭಿಸಬೇಕು ಎಂದು ಕರ್ನಾಟಕ ರಾಜ್ಯ ರೈಲ್ವೆ ಕ್ರಿಯಾ ಸಮಿತಿ ಜನಪ್ರತಿನಿಧಿಗಳನ್ನು ಆಗ್ರಹಿಸಿತ್ತು. ಹಲವು ಜಿಲ್ಲೆಗಳ ಜನರಿಗೆ ಅನುಕೂಲವಾಗುವ ರೈಲು ನಿಲ್ಲಿಸಿರುವುದು ಸರಿಯಲ್ಲ ಎಂದು ಹೇಳಿತ್ತು.
ಈ ರೈಲಿನಿಂದಾಗಿ ಬಳ್ಳಾರಿಯ ಜನರು ಚೆನ್ನೈ ಮತ್ತು ತಿರುಪತಿಗೆ ಹೋಗಲು ಸಹಾಯಕವಾಗಿತ್ತು. ತಮಿಳುನಾಡು ಮತ್ತು ಬಳ್ಳಾರಿಯ ನಡುವೆ ಹಲವಾರು ಜನರು ಸಂಚಾರ ನಡೆಸುತ್ತಿದ್ದು, ಬಳ್ಳಾರಿ ಮತ್ತು ಶಿವಮೊಗ್ಗ ರೈಲು ಸಂಪರ್ಕ ಕೊಂಡಿಯಾಗಿತ್ತು ಎಂದು ಕ್ರಿಯಾ ಸಮಿತಿ ಹೇಳಿತ್ತು.
ಅಕ್ಟೋಬರ್ 1ರಿಂದ ವಿಶೇಷ ರೈಲು ಸೇವೆಯನ್ನು ಇಲಾಖೆ ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದೆ. ಇದರಿಂದಾಗಿ ಪ್ರಯಾಣಿಕರಿಗೆ ಅನಾನುಕೂಲವಾಗಿದೆ. ನೈಋತ್ಯ ರೈಲ್ವೆ ವಲಯದ ಅಧಿಕಾರಿಗಳು ರೈಲು ಪುನಃ ಆರಂಭಿಸಲು ಕ್ರಮ ಕೈಗೊಳ್ಳಬೇಕು ಎಂದು ಕ್ರಿಯಾ ಸಮಿತಿ ಒತ್ತಾಯಿಸಿತ್ತು.