ಬೆಂಗಳೂರಿನಲ್ಲಿ ಹೊಸವರ್ಷಾಚರಣೆ ವೇಳೆ ಅಹಿತಕರ ಘಟನೆ ತಡೆಗೆ ಮುನ್ನೆಚ್ಚರಿಕೆ; ಮಾರ್ಗಸೂಚಿಯಲ್ಲಿ ಏನಿದೆ?
1 min readಹೊಸ ವರ್ಷಾಚರಣೆಗೆ ಕೆಲವೇ ದಿನಗಳು ಬಾಕಿ ಉಳಿದಿವೆ. ರಾಜಧಾನಿಯಲ್ಲಿ ಹೊಸ ವರ್ಷಾಚರಣೆ ಸಮಯದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಬಿಬಿಎಂಪಿ ಹಾಗೂ ಪೊಲೀಸ್ ಇಲಾಖೆಯಿಂದ ಮಾರ್ಗಸೂಚಿ ಸಿದ್ಧಪಡಿಸಲಾಗಿದೆ. ಮಾರ್ಗಸೂಚಿ ರೂಪಿಸಲು ಪೊಲೀಸರು ವಿವಿಧ ಇಲಾಖೆಗಳ ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದಾರೆ.
ಪಾಲಿಕೆ ಜತೆ ಚರ್ಚಿಸಿದ ಪೊಲೀಸರು ಮಾರ್ಗಸೂಚಿ ರೂಪಿಸಿದ್ದು, ಸಾಕಷ್ಟು ಮುನ್ನೆಚ್ಚರಿಕೆ ವಹಿಸಲಾಗಿದೆ.
‘ಡಿಸೆಂಬರ್ 31ರಂದು ನಗರದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗುತ್ತದೆ. ಹೆಚ್ಚಿನ ಜನಸಂದಣಿಯ ಸ್ಥಳಗಳಲ್ಲಿ ಸಿಸಿ ಕ್ಯಾಮೆರಾಗಳ ಅಳವಡಿಕೆಗೆ ಸೂಚನೆ ನೀಡಲಾಗಿದೆ. ಪೊಲೀಸ್ ಇಲಾಖೆ ಜತೆ ಕೈಜೋಡಿಸಿ ಸುರಕ್ಷತಾ ಕ್ರಮ ಕೈಗೊಳ್ಳಲಾಗಿದೆ’ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಹೇಳಿದ್ದಾರೆ.
‘ಮಹಿಳೆಯರು ಮತ್ತು ಮಕ್ಕಳ ರಕ್ಷಣೆಗೆ ಮಹಿಳಾ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗುವುದು. ರಾತ್ರಿ ಒಂದು ಗಂಟೆಗೆ ಬಾರ್ ಮತ್ತು ಪಬ್‌ಗಳನ್ನು ಮುಚ್ಚುವಂತೆ ಸೂಚನೆ ನೀಡಲಾಗಿದೆ. ಲೌಡ್ ಸ್ಪೀಕರ್ ಬಳಕೆ, ಪಟಾಕಿ ಸಿಡಿಸಲು ಸಂಪೂರ್ಣ ನಿರ್ಬಂಧ ವಿಧಿಸಲಾಗಿದೆ. ಹೆಚ್ಚುವರಿ ಬಿಎಂಟಿಸಿ ಬಸ್‌ಗಳ ಸಂಚಾರ ಇರಲಿದೆ. ರಾತ್ರಿ ಒಂದು ಗಂಟೆಯವರೆಗೆ ಮೆಟ್ರೊ ರೈಲು ಸಂಚಾರ ಇರುತ್ತದೆ’ ಎಂದು ಆಯುಕ್ತರು ಮಾಹಿತಿ ನೀಡಿದ್ದಾರೆ.
ಸಭೆಯಲ್ಲಿ ನಗರ ಪೊಲೀಸ್ ಆಯುಕ್ತ ಬಿ ದಯಾನಂದ, ಹೆಚ್ಚುವರಿ ಪೊಲೀಸ್ ಆಯುಕ್ತರು, ಸಂಚಾರ ವಿಭಾಗದ ಜಂಟಿ ಆಯುಕ್ತರು, ಎಲ್ಲಾ ವಿಭಾಗಗಳ ಡಿಸಿಪಿಗಳು, ಅಗ್ನಿಶಾಮಕ ದಳದ ಅಧಿಕಾರಿಗಳು, ಬಿಬಿಎಂಪಿ, ಆರೋಗ್ಯ ಇಲಾಖೆ, ಬೆಸ್ಕಾಂ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಭಾಗಿಯಾಗಿದ್ದರು.
ಮಾರ್ಗಸೂಚಿಯಲ್ಲಿ ಏನಿದೆ?
* ಕಾರ್ಟೂನ್ ಮಾಸ್ಕ್‌ಗಳನ್ನು ಹೊಸ ವರ್ಷಾಚರಣೆ ವೇಳೆ ಸಂಪೂರ್ಣವಾಗಿ ನಿಷೇಧಿಸಲು ಚಿಂತನೆ ನಡೆಸಲಾಗಿದೆ.
* ರಾತ್ರಿ ವಿದ್ಯುತ್ ಸಂಪರ್ಕ ಸ್ಥಗಿತವಾಗದಂತೆ ಕ್ರಮ ವಹಿಸಬೇಕೆಂದು ಬೆಸ್ಕಾಂಗೆ ಸೂಚಿಸಲಾಗಿದೆ.
* ಬಾರ್ ಮತ್ತು ರೆಸ್ಟೋರೆಂಟ್‌ಗಳಿಗೆ ಕಠಿಣ ಮಾರ್ಗಸೂಚಿ ರೂಪಿಸಲಾಗಿದ್ದು, ಕುಟುಂಬದೊಂದಿಗೆ ಬರುವವರಿಗೆ ಪ್ರತ್ಯೇಕ ಮಾರ್ಗ ನಿರ್ಮಾಣದ ಬಗ್ಗೆಯೂ ಚರ್ಚಿಸಲಾಗಿದೆ.
* ರಾತ್ರಿ 1 ಗಂಟೆಯೊಳಗೆ ಹೊಸ ವರ್ಷಾಚರಣೆ ಮುಕ್ತಾಯಗೊಳಿಸಬೇಕು.
* ಎಂ.ಜಿ.ರಸ್ತೆ, ಬ್ರಿಗೇಡ್ ರಸ್ತೆ, ಇಂದಿರಾನಗರದಲ್ಲಿ ಹೊಸ ವರ್ಷ ಆಚರಿಸಲು ಅನುಮತಿ.
* ಎಂ.ಜಿ.ರಸ್ತೆ, ಬ್ರಿಗೇಡ್ ರಸ್ತೆಯಲ್ಲಿ ರಾತ್ರಿ 8 ಗಂಟೆಯಾದ ಬಳಿಕ ವಾಹನ ಸಂಚಾರ ಬಂದ್.
* ಸಂಭ್ರಮಾಚರಣೆಗೆ ಬರುವ ವಾಹನಗಳಿಗೆ ಪ್ರತ್ಯೇಕ ಪಾರ್ಕಿಂಗ್ ವ್ಯವಸ್ಥೆ.