ಪ್ಲಾಸ್ಟಿಕ್ ಮುಕ್ತ ಜಿಲ್ಲೆ ಘೋಷಣೆಗೆ ಮಾತ್ರ ಸೀಮಿತವಾಯಿತಾ?
1 min readಸ್ವಚ್ಛತಾ ಅಭಿಯಾನ ಜಿಲ್ಲಾಡಳಿತ, ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ.ಸುಧಾಕರ್ ಅವರ ಆಸಕ್ತಿಯ ಫಲವಾಗಿ ರೂಪುಗೊಂಡ ಕಾರ್ಯಕ್ರಮ. ಜಿಲ್ಲಾ ಕೇಂದ್ರ ಚಿಕ್ಕಬಳ್ಳಾಪುರ ಸೇರಿದಂತೆ ಜಿಲ್ಲೆಯ ತಾಲ್ಲೂಕು ಕೇಂದ್ರಗಳಿಗೂ ಈ ಅಭಿಯಾನ ವಿಸ್ತರಿಸಲಾಗಿದೆ. ಆದರೆ ಅದು ಘೋಷಣೆಗೆ ಮಾತ್ರ ಸೀಮಿತವಾಗಿದೆಯಾ?
ಇಂತಹ ಮಹತ್ವದ ಕಾರ್ಯಕ್ರಮ ಸ್ವಲ್ಪ ಮಟ್ಟಿಗಾದರೂ ಸಫಲವಾಗಿದೆಯೇ ಎಂಬ ಬಗ್ಗೆ ಸಿ ನ್ಯೂಸ್ ಚಿಕ್ಕಬಳ್ಳಾಪುರದಲ್ಲಿ ನಡೆಸಿದ ರಿಯಾಲಿಟಿ ಚೆಕ್‌ನಲ್ಲಿ ವಾಸ್ತವಾಂಶ ಬಯಲಾಗಿದ್ದು, ಕೇವಲ ಹೆಸರಿಗಷ್ಟೇ ಸ್ವಚ್ಛತಾ ಅಭಿಯಾನ ಎಂಬುದು ಬಯಲಾಗಿದೆ. ಬದಲಿಗೆ ನಗರ ಗಬ್ಬೆದ್ದು ನಾರುತ್ತಿದೆ ಎಂಬ ವಿಚಾರ ಬಹಿರಂಗವಾಗಿದೆ.
ಸ್ವಚ್ಛತೆ ವಿಚಾರದಲ್ಲಿ ಚಿಕ್ಕಬಳ್ಳಾಪುರ ನಾಗರಿಕರು ತೋರುತ್ತಿರುವ ನಿರ್ಲಕ್ಷ್ಯ ಎದ್ದು ಕಾಣುತ್ತಿದ್ದು, ಇದಕ್ಕೆ ನಗರಸಭೆ ಕಠಿಣ ಕ್ರಮಕೈಗೊಳ್ಳದಿರುವುದೇ ಕಾರಣ ಎಂಬ ಸತ್ಯ ಹೊರ ಬಂದಿದೆ.
ಚಿಕ್ಕಬಳ್ಳಾಪುರ ನಗರದ ಪ್ರಮುಖ ರಸ್ತೆಗಳಲ್ಲಿಯೇ ಕಸದ ದುರ್ವಾಸನೆ ಮೂಗಿಗೆ ಬಡಿಯುತ್ತದೆ. ಸ್ವಲ್ಪ ಮಳೆ ಬಂದರೂ ಕಸ ರಸ್ತೆಯಲ್ಲಿ ಹರಿಯುವ ಮಳೆ ನೀರಿನಲ್ಲಿ ತೇಲಾಡುತ್ತದೆ. ಬಿಯರ್ ಬಾಟಲಿಗಳು, ಮದ್ಯದ ಪೌಚ್ ಗಳು, ಮನೆಯಲ್ಲಿ ಉಳಿದ ಅನ್ನಸಾರು, ತಿಂದು ಎಸೆದ ಹೋಟೆಲ್ ಪಾರ್ಸೆಲ್ ಡಬ್ಬಿಗಳು ಸೇರಿದಂತೆ ರಾಶಿ ರಾಶಿ ಪ್ಲಾಸ್ಟಿಕ್ ನಗರದಾದ್ಯಂತ ತಾಂಡವವಾಡುತ್ತಿದೆ.
ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ ಅವರು ಹಸಿರು ಚಿಕ್ಕಬಳ್ಳಾಪುರ ಘೋಷಣೆಯಡಿ ಚಿಕ್ಕಬಳ್ಳಾಪುರದ ಬೈಪಾಸ್ ರಸ್ತೆಗಳು ಸೇರಿದಂತೆ ತಾಲ್ಲೂಕು ಕೇಂದ್ರಗಳಿಗೂ ಭೇಟಿ ನೀಡಿ ಸ್ವಚ್ಛತಾ ಕಾರ್ಯಗಳನ್ನು ಖುದ್ದಾಗಿ ನಡೆಸಿದ್ದರು. ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ.ಸುಧಾಕರ್, ಸ್ವಚ್ಛತೆಗೆ ಒತ್ತು ನೀಡಬೇಕು, ಕಸ ಎಲ್ಲೆಂದರಲ್ಲಿ ಎಸೆಯಬಾರದು. ನಗರಸಭೆಯ ಕಸದ ವಾಹನಗಳಿಗೆ ನೀಡಬೇಕು ಎಂದು ಮನವಿ ಮಾಡಿದ್ದರು.
ಈ ಇಬ್ಬರೂ ಪ್ರಮುಖರು ಮೂಡಿಸಿದ ಜಾಗೃತಿ ಅಭಿಯಾನ ನಾಗರಿಕರಿಗೆ ತಟ್ಟಿಲ್ಲ ಎಂಬುದಕ್ಕೆ ರಾರಾಜಿಸುತ್ತಿರುವ ಈ ಕಸದ ರಾಶಿಗಳೇ ಸಾಕ್ಷಿ. ನೈರ್ಮಲ್ಯದ ವಿಚಾರವಾಗಿ ಕಠಿಣ ಕ್ರಮಗಳನ್ನು ಕೈಗೊಳ್ಳಬೇಕಾದ ನಗರಸಭೆ ಮೃಧು ಧೋರಣೆ ಅನುಸರಿಸುತ್ತಿರುವುದೇ ನಾಗರಿಕರ ಈ ವರ್ತನೆಗೆ ಕಾರಣ ಎಂಬುದು ಪ್ರಜ್ಞಾವಂತರ ಆರೋಪ.
ಸ್ವಚ್ಛತೆ, ನೈರ್ಮಲ್ಯದಂತಹ ಯೋಜನೆ ಜಾರಿಯಲ್ಲಿ ನಾಗರಿಕರ ಸಹಕಾರ ಪ್ರಮುಖವಾಗಿದೆ. ಆದರೆ ಚಿಕ್ಕಬಳ್ಳಾಪುರ ನಗರವನ್ನು ಒಮ್ಮೆ ಸುತ್ತಿದರೆ ನಾಗರಿಕರು ಸ್ವಚ್ಛತಾ ಅಭಿಯಾನಕ್ಕೆ ಸ್ಪಂದಿಸದಿರುವುದು ಕಣ್ಣಿಗೆ ರಾಚುತ್ತದೆ.
ಇಲ್ಲೊಮ್ಮೆ ಕಣ್ಣು ಹಾಯಿಸಿ, ಇದು ಚಿಕ್ಕಬಳ್ಳಾಪುರದ ಪ್ರತಿಷ್ಠಿತ ಎಂಜಿ ರಸ್ತೆ. ಈ ಪ್ಲಾಸ್ಟಿಕ್ ಮಿಶ್ರಿತ ಕಸದ ರಾಶಿ ಕಾಣ್ತಾ ಇದೆಯಲ್ಲ? ಇದರ ಒಂದು ಬದಿಯಲ್ಲಿ ನಗರ ಪೊಲೀಸ್ ಠಾಣೆ ಇದೆ. ಮತ್ತೊಂದು ಬದಿಯಲ್ಲಿ ಸರ್ಕಾರಿ ಪ್ರತಮ ದರ್ಜೆ ಕಾಲೇಜು ಇದೆ.
ಇಂತಹ ಪ್ರತಿಷ್ಠಿತ ಜಾಗದಲ್ಲಿಯೇ ಇಷ್ಟು ಪ್ರಮಾಣದ ಪ್ಲಾಸ್ಟಿಕ್ ಒಂದು ದಿನದಲಗಲಿ ಶೇಖರಣೆಯಾಗಿದೆ ಎಂದರೆ ನಗರದ ಉಳಿದ ಭಾಗಗಳಲ್ಲಿ ಯಾವ ಪ್ರಮಾಣ ಪ್ಲಾಸ್ಟಿಕ್ ತ್ಯಾಜ್ಯ ಇರಬಹುದು ಎಂಬುದು ನಿಮ್ಮ ಊಹೆಗೆ ಬಿಟ್ಟಿದ್ದು.
ನಗರದಲ್ಲಿ ಉತ್ಪಾದನೆಯಾಗುವ ಕಸದಲ್ಲಿ ಶೇ.೫೦ಕ್ಕೂ ಹೆಚ್ಚು ಪ್ಲಾಸ್ಟಿಕ್ ತ್ಯಾ ಇದೆ ಎಂಬುದು ಬಹಿರಂಗ ಸತ್ಯ. ಇನ್ನು ಹಸಿರು ಮತ್ತು ಒಣ ಕಸ ವಿಂಗಡಣೆ ಎಂಬುದು ಮನೆಗಳಿಗೆ ಮಾತ್ರ ಸೀಮಿತ ಎಂಬ ಸ್ಥಿತಿ ಇದೆ. ಹೊಟೇಲ್, ಮಾಂಸ ಮತ್ತು ಮದ್ಯದ ಅಂಗಡಿಗಳಿಗೆ ಇದು ಅನ್ವಯಿಸುತ್ತಿಲ್ಲ ಎಂಬ ಆರೋಪವಿದೆ.
ಚಿಕ್ಕಬಳ್ಳಾಪುರದ ವಿವಿಧ ಬಡಾವಣೆಗಳ ಖಾಲಿ ನಿವೇಶಗಳಲ್ಲಿಯೂ ದೊಡ್ಡ ಪ್ರಮಾಣದಲ್ಲಿ ಕಸ ಸಂಗ್ರಹವಾಗಿದೆ. ಬಡಾವಣೆಗಳ ಮುಖ್ಯ ರಸ್ತೆಗಳಲ್ಲಿನ ಖಾಲಿ ನಿವೇಶಗಳಲ್ಲಿ ಬಿಯರ್ ಬಾಟಲಿಗಳು, ಮದ್ಯದ ಪೌಚ್ ಗಳು, ಪ್ಲಾಸ್ಟಿಕ್ ಸೇರಿದಂತೆ ಕಸದ ಪ್ರಮಾಣ ಬೃಹತ್ ಆಗಿಯೇ ಕಾಣುತ್ತದೆ. ಖಾಲಿ ನಿವೇಶನಗಳನ್ನು ಸ್ವಚ್ಛವಾಗಿ ಇಟ್ಟುಕೊಳ್ಳುವಂತೆ ನಗರಸಭೆ ನಿವೇಶನಗಳ ಮಾಲೀಕರಿಗೆ ಕಟ್ಟುನಿಟ್ಟಾಗಿ ಸೂಚಿಸುವ ಮತ್ತು ಕಸವನ್ನು ಮಾಲೀಕರಿಂದಲೇ ತೆರವುಗೊಳಿಸುವ ಅಥವಾ ದಂಡ ವಿಧಿಸುವ ಕ್ರಮವನ್ನು ಕೈಗೊಳ್ಳಬೇಕು.
ಕಟ್ಉನಿಟ್ಟಿನ ಕ್ರಮಕ್ಕೆ ಮುಂದಾಗಬೇಕಿದ್ದ ನಗರಸಭೆ ಈವರೆಗೂ ಹೇಳಿಕೆಗಳಿಗೆ ಮಾತ್ರ ಸೀಮಿತವಾಗಿರುವುದು ನಾಗರಿಕರ ನಿರ್ಲಕ್ಷ್ಯಕ್ಕೆ ಕಾರಣವಾ?
ಒಟ್ಟಿನಲ್ಲಿ ಅದಿಕಾರಿಗಳು ಮತ್ತು ಜನಪ್ರತಿನಿಧಿಗಳ ಮನವಿಗಳಿಗೆ ಜಗ್ಗುವವರಲ್ಲ ನಮ್ಮ ನಾಗರಿಕರು ಎಂಬುದು ಈಗಾಗಲೇ ಹಲವಾರು ಬಾರಿ ಸಾಬೀತಾಗಿದೆ. ಹಾಗಾಗಿ ನಗರಸಭೆ ಈಗಲಾದರೂ ದಂಡA ದಶಗುಣಂ ಎಂಬAತೆ ನಿರ್ಲಕ್ಷ್ಯ ವಹಿಸುವ ನಾಗರಿಕರ ವಿರುದ್ಧ ಕಠಿಣ ಕ್ರಮಕ್ಕೆ ಮುಂದಾಗಲಿದೆಯಾ? ಕಾದು ನೋಡೋಣ.