ಗಡಿದಂ ಶ್ರೀ ಲಕ್ಷ್ಮೀ ವೆಂಕಟರಮಣ ಸ್ವಾಮಿ ದೇವಾಲಯದಲ್ಲಿ ಕಾರ್ತಿಕ ಮಾಸದ ಪ್ರಯುಕ್ತ ಲಕ್ಷ ದೀಪೋತ್ಸವ
1 min readಸಾಂಸ್ಕೃತಿಕ ಪರಂಪರೆಯಲ್ಲಿ ದೀಪಕ್ಕೆ ಹೆಚ್ಚು ಮಹತ್ವವಿದೆ, ಒಂದು ದೀಪಕ್ಕೆ ಎಲ್ಲಾ ಪಾಪಗಳನ್ನು ನಿಗ್ರಹ ಮಾಡುವ ಶಕ್ತಿ ಇದ್ದು, ಮನುಷ್ಯನ ಜೀವನದಲ್ಲಿ ಹೊಸ ಚೈತನ್ಯ ತುಂಬುತ್ತದೆ ಎಂದು ಬಾಗೇಪಲ್ಲಿ ತಾಲ್ಲೂಕಿನ ತಹಸಿಲ್ದಾರ್ ಪ್ರಶಾಂತ್ ಕೆ.ಪಾಟೀಲ್ ತಿಳಿಸಿದ್ದಾರೆ.
ತಾಲ್ಲೂಕಿನ ದೇವರಗುಡಿಪಲ್ಲಿಯ ಶ್ರೀ ಲಕ್ಷ್ಮೀ ವೆಂಕಟರಮಣ ಸ್ವಾಮಿ ದೇವಾಲಯದಲ್ಲಿ ಏರ್ಪಡಿಸಿದ್ದ ಲಕ್ಷ ದೀಪೋತ್ಸವದಲ್ಲಿ ಜ್ಯೋತಿ ಬೆಳಗಿಸಿ ಅವರು ಮಾತನಾಡಿದರು.
ನಮ್ಮೊಳಗಿನ ಸತ್ಯ ಅರಿಯುವುದೇ ಜೀವನ. ದೇವರನ್ನು ನೋಡಲು ಸಾಧ್ಯವಿಲ್ಲ, ದೇವರ ಹಾದಿಯಲ್ಲಿ ಮುನ್ನಡೆಯುವುದು ಹೆಚ್ಚು ಆನಂದ ನೀಡುತ್ತದೆ. ಯಾವುದೇ ಅವಕಾಶಗಳು ಇಲ್ಲದಿದ್ದಾಗ ಮನುಷ್ಯ ಸಂತೃಪ್ತನಾಗಿದ್ದ, ಎಲ್ಲಾ ಅವಕಾಶಗಳು ಕೈಗೆಟುಕುವಂತಾಗಿ ಮಾನವ ಸನ್ಮಾರ್ಗದಲ್ಲಿ ಸಾಗಬೇಕು ಎಂದರು.
ನಾನು ನನ್ನದು ಎಂಬ ಅಹಂ ಮತ್ತು ವಿಕೃತಿಗೆ ಮನುಷ್ಯ ಒಳಗಾಗಿದ್ದಾನೆ. ಇದನ್ನು ಬಿಟ್ಟು ನಾವೆಲ್ಲರೂ ಎಂಬ ಭಾವನೆಯೊಂದಿಗೆ ಸಮಾಜದಲ್ಲಿ ಸ್ನೇಹಜೀವಿಯಾಗಿ ಜೀವಿಸಿದಾಗ ನೆಮ್ಮದಿ ಜೊತೆಗೆ ಸಾರ್ಥಕತೆಯನ್ನು ಕಾಣಲು ಸಾಧ್ಯವಾಗಲಿದೆ ಎಂದು ತಿಳಿಸಿದರು.
ಲಕ್ಷದೀಪೋತ್ಸವದಲ್ಲಿ ಹಲವಾರು ಗ್ರಾಮಗಳ ಭಕ್ತರು ಪಾಲ್ಗೊಂಡು ಶ್ರೀ ಓಂಕಾರೇಶ್ವರ ಸ್ವಾಮಿಗೆ ಪ್ರಾರ್ಥಿಸಿ, ದೀಪ ಬೆಳಗಿಸುವ ಮೂಲಕ ಇಷ್ಟಾರ್ಥ ಸಿದ್ಧಿಗಾಗಿ ಪ್ರಾರ್ಥಿಸಿದರು.ಈ ಸಂದರ್ಭದಲ್ಲಿ ದೇವಾಲಯದ ಪ್ರದಾನ ಅರ್ಚಕರಾದ ಪ್ರಕಾಶಪ್ಪ ಸ್ವಾಮಿ, ಅಶ್ವತ್ತಪ್ಪ ಸ್ವಾಮಿ, ರಾಘವೇಂದ್ರ ಸ್ವಾಮಿ, ಬಿಲ್ ಕಲೆಕ್ಟರ್ ಶ್ರೀನಿವಾಸ, ಹಾಗೂ ನೂರಾರು ಭಕ್ತಾದಿಗಳು ಭಾಗವಹಿಸಿದ್ದರು.