ಡಾ. ಸ್ವಾಮಿನಾಥನ್ ಆಯೋಗದ ವರದಿ ಜಾರಿಗೆ ಆಗ್ರಹ

ನೆಲಮಂಗಲದಲ್ಲಿ ಕೈಗಾರಿಕಾ ಉದ್ದೇಶಕ್ಕೆ ಭೂಸ್ವಾಧೀನ

ಅಕ್ರಮ ಭೂಮಿ ಮಂಜೂರು ವಜಾಗೆ ಒತ್ತಾಯ

ತಗಡೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಉದ್ಘಾಟನೆ

December 24, 2024

Ctv News Kannada

Chikkaballapura

ಕನ್ನಡ ಚಿತ್ರರಂಗದ ಹಿರಿಯ ನಟಿ ಲೀಲಾವತಿ ವಿಧಿವಶ

1 min read

ಲೀಲಾವತಿ ಕರ್ನಾಟಕದ ಜನತೆಗೆ ಚಿರಪರಿತ ಹೆಸರು. 600ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ ಮೇರು ನಟಿ.
ಅಷ್ಟೇ ಅಲ್ಲ, ಜೀವನದಲ್ಲಿ ನೋವುಗಳನ್ನೇ ಅನುಭವಿಸಿದ ಮಹಾತಾಯಿ. ಮುಖ್ಯವಾಗಿ ಮತ್ತೊಬ್ಬರ ನೋವಿಗೆ ಸ್ಪಂದಿಸುವ ದಯಾಮಯಿ. ಎಲ್ಲವನ್ನೂ ಕ್ಷಮಿಸುವ ಕ್ಷಮಯಾ ಧರಿತ್ರಿ.

ಹೌದು ಒಂದು ಕಾಲದಲ್ಲಿ ಸ್ಯಾಂಡಲ್ ವುಡ್ ತಾರೆಯಾಗಿ ಮಿಂಚಿದ ಲೀಲಮ್ಮ, ಎಂದೆಂದಿಗೂ ಅಜರಾಮರವಾದ ಧ್ರುವ ತಾರೆಯಾದ ಮಹಾ ನಟಿ. ಅಣ್ಣ ಅವರೊಂದಿಗೆ ಲೀಲಮ್ಮನ ಅಭಿನಯ ಕನ್ನಡ ಚಿತ್ರ ಪ್ರೇಮಿಗಳ ಮನದಲ್ಲಿ ಎಂದಿಗೂ ಮಾಸುವುದಿಲ್ಲ.ಕನ್ನಡದ ಕಂಠೀರವ, ಅಣ್ಣಾವ್ರು, ಡಾ. ರಾಜ್ ಕುಮಾರ್ ಅವರೊಂದಿಗೆ ಲೀಲಾವತು ಅವರು ಅಭಿನಯಿಸಿದ್ದು ಬರೋಬ್ಬರಿ 36 ಚಿತ್ರಗಳು. ಅಷ್ಟೇ ಅಲ್ಲ, ಅವರು ಅಭಿನಯಿಸಿದ ಒಟ್ಟು ಚಿತ್ರಗಳು 600ಕ್ಕೂ ಹೆಚ್ಚು. ಕಪ್ಪು ಬಿಳುಪಿನಿಂದ ಇತ್ತೀಚಿನ ನೂತನ ತಂತ್ರಜ್ಞಾನದ ಚಿತ್ರಗಳವರೆಗೆ ಅವರ ಅಭಿನಯ ಅವಿಸ್ಮರಣೀಯ.

ಲೀಲಾವತಿಯವರಿಗೆ ನಗರದ ಯಾಂತ್ರಿಕ ಜೀವನಕ್ಕಿಂದ ಹಳ್ಳಿಯ ಸೊಗಡೇ ಇಷ್ಟ. ಹಾಗಾಗಿಯೇ ಅವರು ಆ ಕಾಲದಲ್ಲಿಯೇ ಅವರು ನೆಲಮಂಗಲದ ಸಮೀಪ ಜಮೀನು ಖರೀದಿಸಿ, ತೋಟ ಮಾಡಿದರು. ತೋಟದಲ್ಲಿ ನೂತನ ತಂತ್ರಜ್ಞಾನದ ಹೊಸ ಹೊಸ ಪ್ರಯೋಗ ಮಾಡಿದರು. ಅವರ ಈ ಪ್ರಯೋಗಗಳಿಗೂ ವಿಧಿ ಬಿಡಲಿಲ್ಲ.

ಪಟ್ಟು ಬಿಡದ ತ್ರಿವಿಕ್ರಮ ಅಂತಾರಲ್ಲ, ಅದು ಲೀಲಮ್ಮನಿಗೆ ಸರಿಯಾಗಿ ಹೊಂದುತ್ತೆ. ಒಂದಲ್ಲ ಎರಡೆರಡು ಬಾರಿ ತೋಟಕ್ಕೆ ಬೆಂಕಿ ಬಿದ್ದು, ಮಕ್ಕಳಂತೆ ಸಾಕಿದ ಗಿಡ ಮರಗಳು ಬೆಂಕಿಗೆ ಆಹುತಿಯಾದರೂ ಅವರು ಛಲ ಬಿಡಲಿಲ್ಲ. ತೋಟ ಮತ್ತೆ ಹಸಿರಾಗುವಂತೆ ನೋಡಿಕೊಂಡರು.

ವಯಸ್ಸು ಎಲ್ಲರಿಗೂ ಅಗುತ್ತೆ, ಸಾವು ಎಲ್ಲರಿಗೂ ಬರುತ್ತೆ. ಅನಂತ ವಿಶ್ವದಲ್ಲಿ ಈವರೆಗೂ ಎಷ್ಟೋ ಮಂದಿ ಹುಟ್ಟಿದ್ದಾರೆ, ಎಷ್ಟೋ ಮಂದಿ ಸಾವಿನ ದವಡೆಗೆ ಸಿಲುಕಿದ್ದಾರೆ. ಆದರೆ ಅವರಲ್ಲಿ ಕೆಲವರು ಮಾತ್ರ ಜನರ ಮನಸ್ಸಿನಲ್ಲಿ ಶಾಶ್ವದವಾದ ಸ್ಥಾನ ಸಂಪಾದಿಸುತ್ತಾರೆ. ಆ ಗುಂಪಿಗೆ ಸೇರಿದವರೇ ನಮ್ಮ ಲೀಲಮ್ಮ.

ಅಭಿನಯದಲ್ಲಿ ಉತ್ತುಂಗಕ್ಕೇರಿದ್ದ ಲೀಲಮ್ಮ ದಾನ ಮಾಡುವುದರಲ್ಲಿ ಮಹಿಳಾ ಕರ್ಣನಿದ್ದಂತೆ. ಯಾರೇ ಕಷ್ಟ ಎಂದು ಬಂದರೂ ಬರಿಗೈಯಲ್ಲಿ ಕಳುಹಿಸಿದವರಲ್ಲ. ಅಷ್ಟೇಕೆ ಕೋವಿಡ್ ವೇಳೆ ಇಡೀ ದೇಶವೆ ಸ್ತಬ್ದವಾಗಿದ್ದರೆ, ಲೀಲಮ್ಮ ಹಸಿದವರ ಆರೈಕೆಯಲ್ಲಿ ತೊಡಗಿದ್ದರು.

ಲೀಲಮ್ಮ ಈ ಇಳಿ ವಯಸ್ಸಿನಲ್ಲಿಯೂ ಗ್ರಾಮೀಣ ಬಡವರು, ಪ್ರಾಣಿ ಪಕ್ಷಿಗಳ ಬಗ್ಗೆ ಅಪಾರವಾದ ಪ್ರೀತಿ ಹೊಂದಿದ್ದರು. ತಾಯಿಯ ಆಸೆಗೆ ತಕ್ಕ ಮಗ ಶ್ರವಣ ಕುಮಾರನಂತೆ ಪ್ರೀತಿಯಿಂದ ನೋಡಿಕೊಳ್ಳುತಿದ್ದಾರೆ.

ಇವರ ದಾನಗುಣಕ್ಕೆ ನಿದರ್ಶನ ಈ ಆಸ್ಪತ್ರೆ. ತಮ್ಮ ಆಸ್ತಿ ಮಾರಿ ಜನರಿಗಾಗಿ ಪ್ರಾಥಮಿಕ ಆರೋಗ್ಯ ಕೇಂದ್ರ ನಿರ್ಮಿಸಿದವರು ಇದೇ ಲೀಲಮ್ಮ. ಈ ಆಸ್ಪತ್ರೆ ಮೂಲಕ ಸಾವಿರಾರು ಜನರಿಗೆ ಆಸರೆಯಾಗಿರುವುದು ಅದೇ ಲೀಲಾವತಿ.

87ರ ಹರಯದ ಲೀಲಮ್ಮ ಕಳೆದ ಹಲವು ದಿನಗಳಿಂದ ಅನಾರೋಗ್ಯ ಪೀಡಿತರಾಗಿ ಮನೆಯಲ್ಲಿಯೇ ವಿಶ್ರಾಂತಿಗೆ ಮೊರೆ ಹೋಗಿದ್ರು. ತಾಯಿಯನ್ನು ಮಗುವಿನಂತೆ ಆರೈಕೆ ಮಾಡಿದ್ದು ಅದೇ ಕಲಿಯುಗದ ಶ್ರವಣ ಕುಮಾರ ವಿನೋದ್ ರಾಜ್.

ಬೆಂಗಳೂರು ಹೊರವಲಯದ ನೆಲಮಂಗಲ ತಾಲೂಕಿನ ಸೋಲದೇವನಹಳ್ಳಿಯ ತೋಟದ ಮನೆಯಲ್ಲಿ ಕಳೆದ 25 ವರ್ಷದಿಂದ ಲೀಲಾವತಿ ವಾಸವಾಗಿದ್ದಾರೆ. ತಮ್ಮ ತೋಟದಲ್ಲಿ ವಿವಿಧ ಬಗೆಯ ಮಿಶ್ರ ತಳಿ ಮೂಲಕ ವ್ಯವಸಾಯವನ್ನ ತಮ್ಮ ಮಗ ವಿನೋದ್ ರಾಜ್ ಮ‌ೂಲಕ ಬೆಳೆಸಿದ್ದಾರೆ.

ಅನಾರೋಗ್ಯದಿಂದ ಹಾಸಿಗೆ ಹಿಡಿದು ಕಳೆದ ಹಲವು ದಿನಗಳಿಂದ ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದ ಲೀಲಾವತಿ ಇನ್ನಿಲ್ಲ ಎಂಬುದು ಕನ್ನಡ ನಾಡಿನ ಜನತೆಗೆ ದುಃಖದ ಸಂಗತಿಯಲ್ಲದೆ ಮತ್ತೇನು.

ತಾಯಿಯ ಆರೋಗ್ಯ ವೃದ್ಧಿಗಾಗಿ ಮಗ ವಿನೋದ್ ರಾಜ್ ಮನೆಯಲ್ಲಿ ಮೃತ್ಯುಂಜಯ ಹೋಮ, ಗಣ ಹೋಮ, ಹೀಗೆ ಹೋಮ ಹವನಗಳನ್ನ ಮಾಡಿ ತಾಯಿಯ ಆರೋಗ್ಯಕ್ಕಾಗಿ ದೇವರ ಮೊರೆಹೋದರೂ ಫಲ ನೀಡಲಿಲ್ಲ.

ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ಹಿರಿಯ ನಟಿ ಲೀಲಾವತಿಯವರ ಆರೋಗ್ಯ ವಿಚಾರಿಸಲು ಚಿತ್ರರಂಗದ ಹಲವಾರು ನಟ ನಟಿಯರು ತೋಟಕ್ಕೆ ಬಂದು ಹೋಗಿದ್ದಾರೆ. ನಟರಾದ ಶಿವರಾಜ್ ಕುಮಾರ್, ದರ್ಶನ್ ಆಗಮಿಸಿ ವಿನೋದ್ ರಾಜ್ ಜೊತೆಗೆ ಲೀಲಾವತಿಯವರ ಆರೋಗ್ಯ ವಿಚಾರಿಸಿದ್ದರು.

ಒಟ್ಟಾರೆ ಸಾಕಷ್ಟು ಸಮಾಜದ ಸೇವೆಯ ಜೊತೆಗೆ ಚಿತ್ರರಂಗಕ್ಕೆ ತನ್ನದೇ ಆದ ಕೊಡುಗೆ ನೀಡಿರುವ ಮೇರು ನಟಿ ಡಾ.ಎಂ.ಲೀಲಾವತಿಯವರು ಇಹಲೋಕ ತ್ಯೆಜಿಸಿದ್ದಾರೆ.

ಸೋಲದೇವನಹಳ್ಳಿಯ ತಮ್ಮ ತೋಟದ ಮನೆಯಲ್ಲಿ ಅವರು ಕೊನೆಯುಸಿರು ಎಳೆದಿದ್ದು, ನಾಡಿನ ಹಲವಾರು ಗಣ್ಯರು ಲೀಲಮ್ಮನವರ ನಿದನಕ್ಕೆ ಸಂತಾಪ ವ್ಯಕ್ತಪಡಿಸಿದ್ದಾರೆ.

ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಕನ್ನಡ ಚಿತ್ರರಂಗದ ಹೆಸರಾಂತ ಹಿರಿಯ ನಟಿ ಲೀಲಾವತಿ ಇಂದು ನಿಧನರಾಗಿದ್ದಾರೆ. ಹಲವು ವರ್ಷಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ನಟಿ ನೆಲಮಂಗಲದ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು.

ಅವರಿಗೆ 87 ವರ್ಷ ವಯಸ್ಸಾಗಿತ್ತು. ತಾಯಿಯ ನಿಧನವನ್ನು ಪುತ್ರ ವಿನೋದ್​ ರಾಜ್​ ಖಚಿತಪಡಿಸಿದ್ದಾರೆ. ಲೀಲಾವತಿ ನಿಧನಕ್ಕೆ ಚಿತ್ರರಂಗದ ತಾರೆಯರು ಕಂಬನಿ ಮಿಡಿದಿದ್ದಾರೆ.

ಸಿಎಂ, ಡಿಸಿಎಂ ಸಂತಾಪ: ಮುಖ್ಯಮಂತ್ರಿ ಸಿದ್ದರಾಮಯ್ಯ ಸೋಷಿಯಲ್​ ಮೀಡಿಯಾದಲ್ಲಿ ಸಂತಾಪ ಸೂಚಿಸಿದ್ದಾರೆ. “ಕನ್ನಡ ಚಿತ್ರರಂಗದ ಹಿರಿಯ ನಟಿ ಲೀಲಾವತಿ ಅವರ ಅಗಲಿಕೆಯ ಸುದ್ದಿ ನೋವುಂಟು ಮಾಡಿದೆ. ಕಳೆದ ವಾರವಷ್ಟೇ ಅವರು ಅನಾರೋಗ್ಯಕ್ಕೀಡಾದ ವಿಚಾರ ತಿಳಿದು ಅವರ ಮನೆಗೆ ಭೇಟಿ ನೀಡಿ ಆರೋಗ್ಯ ವಿಚಾರಿಸಿ ಪುತ್ರ ವಿನೋದ್ ರಾಜ್ ಕುಮಾರ್ ಅವರೊಂದಿಗೆ ಮಾತನಾಡಿದ್ದೆ. ಹಲವು ದಶಕಗಳ ಕಾಲ ತಮ್ಮ‌ ಮನೋಜ್ಞ ಅಭಿನಯದ ಮೂಲಕ ಪ್ರೇಕ್ಷಕರನ್ನು ರಂಜಿಸಿದ್ದ ಲೀಲಾವತಿ ಅವರು ಗುಣಮುಖರಾಗಿ ಇನ್ನಷ್ಟು ಕಾಲ ನಮ್ಮ ನಡುವೆ ಇರುತ್ತಾರೆಂಬ ನನ್ನ ನಂಬಿಕೆ ಹುಸಿಯಾಗಿದೆ. ಮೃತರ ಆತ್ಮಕ್ಕೆ ಚಿರಶಾಂತಿ ದೊರಕಲಿ, ಅವರ ಕುಟುಂಬ ವರ್ಗಕ್ಕೆ ಈ ದುಃಖವನ್ನು ಭರಿಸುವ ಶಕ್ತಿ ಸಿಗಲಿ ಎಂದು ಪ್ರಾರ್ಥಿಸುತ್ತೇನೆ” ಎಂದು ಬರೆದಿದ್ದಾರೆ.

“ಹಿರಿಯ ನಟಿ ಲೀಲಾವತಿ ಅವರ ಅಗಲಿಕೆಯ ಸುದ್ದಿ ಅತೀವ ದುಃಖ ಉಂಟುಮಾಡಿದೆ. ಇತ್ತೀಚೆಗಷ್ಟೇ ಅವರು ನೆಲಮಂಗಲ ಬಳಿಯ ಸೋಲದೇವನಹಳ್ಳಿಯಲ್ಲಿ ನಿರ್ಮಿಸಿದ್ದ ಪಶು ಆಸ್ಪತ್ರೆಯನ್ನು ಉದ್ಘಾಟಿಸಿದ್ದೆ. ಸಂಕಷ್ಟದಲ್ಲಿದ್ದರೂ ಸಮಾಜ ಸೇವೆ ಮಾಡಬೇಕೆನ್ನುವ ಅವರ ಕಳಕಳಿ ನನ್ನ ಹೃದಯ ಮುಟ್ಟಿತು. ಮೃತರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ. ಪುತ್ರ ವಿನೋದ್‌ ರಾಜ್‌ ಕುಟುಂಬವರ್ಗದವರು ಹಾಗೂ ಅಭಿಮಾನಿಗಳ ನೋವಿನಲ್ಲಿ ನಾನೂ ಕೂಡ ಭಾಗಿ. ಓಂ ಶಾಂತಿ” ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್​ ಸಂತಾಪ ಸೂಚಿಸಿದ್ದಾರೆ.

ಲೀಲಾವತಿ ನಿಧನ ದುಃಖ ತಂದಿದೆ: “ಸುಮಾರು 600ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದ ಕನ್ನಡದ ಹಿರಿಯ ಬಹುಭಾಷಾ ನಟಿ ಲೀಲಾವತಿ ನಿಧನರಾಗಿದ್ದು ಅತ್ಯಂತ ದುಃಖ‌ ತಂದಿದೆ. ಕುಟುಂಬಕ್ಕೆ ಅವರ ಅಗಲಿಕೆಯ ನೋವನ್ನು ಸಹಿಸಿಕೊಳ್ಳುವ ಶಕ್ತಿಯನ್ನು, ಅವರ ಆತ್ಮಕ್ಕೆ ಚಿರಶಾಂತಿ‌ಯನ್ನು ಭಗವಂತ ನೀಡಲಿ ಎಂದು ಪ್ರಾರ್ಥಿಸುತ್ತೇನೆ” ಎಂದು ಪ್ರತಿಪಕ್ಷ ನಾಯಕ ಆರ್​.ಅಶೋಕ್​ ಎಕ್ಸ್​ನಲ್ಲಿ ಬರೆದಿದ್ದಾರೆ.

“ಕನ್ನಡ ಚಿತ್ರರಂಗದ ಶ್ರೇಷ್ಠ ನಟಿಯರಲ್ಲಿ ಒಬ್ಬರು, ಬಹುಭಾಷಾ ಕಲಾವಿದರಾದ ಲೀಲಾವತಿ ಅವರ ನಿಧನದ ವಾರ್ತೆ ಕೇಳಿ ಬಹಳ ನೋವುಂಟಾಯಿತು. ನಾಯಕಿಯಾಗಿ ಮಾತ್ರವಲ್ಲದೆ, ಪೋಷಕ ಪಾತ್ರಗಳಿಗೂ ಜೀವ ತುಂಬಿ ಬೆಳ್ಳಿತೆರೆಯ ಮೇಲೆ ಅವುಗಳ ಹೆಜ್ಜೆಗುರುತುಗಳು ಮೂಡುವಂತೆ ಮಾಡಿದವರು ಅವರು. ಅಮ್ಮ, ಅಕ್ಕ, ಅತ್ತೆ ಸೇರಿ ಅನೇಕ ಪಾತ್ರಗಳಲ್ಲಿ ಪರಕಾಯ ಪ್ರವೇಶ ಮಾಡಿ ನಟಿಸುತ್ತಿದ್ದರು. ಭಕ್ತ ಕುಂಬಾರ, ವೀರ ಕೇಸರಿ, ಭಾಗ್ಯದೇವತೆ, ಸೋತು ಗೆದ್ದವಳು, ನಂದಾದೀಪ, ವಿಧಿ ವಿಲಾಸ, ಸಂತ ತುಕಾರಾಂ, ರಣಧೀರ ಕಂಠೀರವ ಸೇರಿ ಅವರು ನಟಿಸಿದ್ದ ಅನೇಕ ಚಿತ್ರಗಳು ಕನ್ನಡಿಗರ ಮನೆ ಮನಗಳನ್ನು ತುಂಬಿರುತ್ತವೆ. ಲೀಲಾವತಿ ಅವರ ಆತ್ಮಕ್ಕೆ ಚಿರಶಾಂತಿ ಸಿಗಲಿ ಹಾಗೂ ಅವರ ಪುತ್ರ ವಿನೋದ್ ರಾಜ್ ಅವರಿಗೆ ದುಃಖ ಭರಿಸುವ ಶಕ್ತಿಯನ್ನು ಭಗವಂತ ಕರುಣಿಸಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ” ಎಂದು ಮಾಜಿ ಸಿಎಂ ಹೆಚ್​.ಡಿ.ಕುಮಾರಸ್ವಾಮಿ ಸಂತಾಪ ಸೂಚಿಸಿದ್ದಾರೆ.

About The Author

Leave a Reply

Your email address will not be published. Required fields are marked *