ಕತ್ತಲೆಯಿಂದ ಬೆಳಕಿನೆಡೆಗೆ: 41 ಕಾರ್ಮಿಕರ ಕುಟುಂಬ ನಿರಾಳ; ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮ
1 min readಉತ್ತರಾಖಂಡದ ಸಿಲ್ಕ್ಯಾರಾ ಸುರಂಗದಿಂದ ಸುರಕ್ಷಿತವಾಗಿ ಹೊರಬಂದ ಕಾರ್ಮಿಕರ ಕುಟುಂಬಗಳು ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದ್ದಾರೆ.
ಉತ್ತರಕಾಶಿ(ಉತ್ತರಾಖಂಡ): 17 ದಿನಗಳನ್ನು ಸುರಂಗದಲ್ಲಿ ಕಳೆದು ಹೊರಬಂದ ಕಾರ್ಮಿಕರ ಮೊಗದಲ್ಲಿ ಸಾವು ಗೆದ್ದ ಖುಷಿ ಕಾಣುತ್ತಿತ್ತು.
ಇತ್ತ, ಹಗಲು ರಾತ್ರಿ ತಮ್ಮವರಿಗಾಗಿ ಮರುಕ ಪಡುತ್ತಿದ್ದ ಈ ಕಾರ್ಮಿಕ ಕುಟುಂಬಗಳ ಸದಸ್ಯರ ಕಣ್ಣುಗಳಲ್ಲಿ ಆನಂದಭಾಷ್ಪ ಹರಿದುಬರುತ್ತಿತ್ತು. ಹತ್ತು ಹಲವು ರೀತಿಯ ಅಡೆತಡೆಗಳು ಮಧ್ಯೆಯೂ ನಡೆದ ಅಭೂತಪೂರ್ವ ರಕ್ಷಣಾ ಕಾರ್ಯಾಚರಣೆಯಲ್ಲಿ ಕೊನೆಗೂ ಉತ್ತರಾಖಂಡದ ಸಿಲ್ಕ್ಯಾರಾ ಸುರಂಗದಿಂದ 41 ಕಾರ್ಮಿಕರು ಜೀವಂತವಾಗಿ ಹೊರಬಂದ ಸಂದರ್ಭ ವರ್ಣಿಸಲಾಗದ ಭಾವುಕ ಕ್ಷಣಗಳಿಗೆ ಸಾಕ್ಷಿಯಾಯಿತು
ಕಾರ್ಮಿಕರನ್ನು ರಕ್ಷಿಸಿದವರ ಮಾತು: “ನಾವು ಕಾರ್ಯಾಚರಣೆಯ ಕೊನೆಯ ಹಂತದಲ್ಲಿದ್ದಾಗ ಕಾರ್ಮಿಕರನ್ನು ಇನ್ನೇನು ಕೆಲವೇ ನಿಮಿಷಗಳಲ್ಲಿ ತಲುಪಬಹುದು ಎಂಬ ಆಶಾಭಾವ ಹೊಂದಿದ್ದೆವು. ಅದರಂತೆ ಜಾಗರೂಕತೆಯಿಂದ ಅವಶೇಷಗಳನ್ನು ತೆರವುಗೊಳಿಸಿ ನಂತರ ನಾವು ಸುರಂಗದೊಳಗೆ ಇಳಿದೆವು. ನಮ್ಮನ್ನು ನೋಡುತ್ತಿದ್ದಂತೆ ಕಾರ್ಮಿಕರು ಅಪ್ಪಿಕೊಂಡು ಧನ್ಯವಾದ ತಿಳಿಸಿ, ತಬ್ಬಿಕೊಂಡರು. ಅವರು ನನ್ನನ್ನು ತಮ್ಮ ಭುಜದ ಮೇಲೆ ಎತ್ತಿಕೊಂಡರು. ಆ ಸಂದರ್ಭದಲ್ಲಿ ಕಾರ್ಮಿಕರಿಗಿಂತ ನಾನೇ ಹೆಚ್ಚು ಸಂತೋಷಪಟ್ಟೆ” ಎಂದು ರಾಟ್ ಹೋಲ್ ತಂತ್ರಜ್ಞ ಫಿರೋಜ್ ಖುರೇಷಿ ತಿಳಿಸಿದರು. ಖುರೇಷಿ ದೆಹಲಿ ಮೂಲದ ರಾಕ್‌ವೆಲ್ ಎಂಟರ್‌ಪ್ರೈಸಸ್‌ನ ಉದ್ಯೋಗಿಯಾಗಿದ್ದು, ಸುರಂಗ ಕೆಲಸದಲ್ಲಿ ಪರಿಣತರಾಗಿದ್ದಾರೆ.
“ಕಾರ್ಮಿಕರು ನನಗೆ ಮೊದಲು ಬಾದಾಮಿ ನೀಡಿದರು ಮತ್ತು ನನ್ನ ಹೆಸರು ಕೇಳಿದರು. ಇದಾದ ನಂತರ ಕೆಲ ಹೊತ್ತು ಕಾರ್ಮಿಕರೊಂದಿಗೆ ಕಳೆದೆವು. ಅರ್ಧ ಗಂಟೆಯ ನಂತರ ನಮ್ಮ ಇತರ ಸಹೋದ್ಯೋಗಿಗಳು ಅವರನ್ನು ಸಂಪರ್ಕಿಸಿದರು. ನಂತರ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್‌ಡಿಆರ್‌ಎಫ್) ಸಿಬ್ಬಂದಿ ಸುರಂಗದೊಳಗೆ ಹೋದರು. ಎನ್‌ಡಿಆರ್‌ಎಫ್ ಸಿಬ್ಬಂದಿ ಬಂದ ನಂತರವೇ ನಾವು ವಾಪಸ್ ಬಂದೆವು. ಈ ಐತಿಹಾಸಿಕ ಕಾರ್ಯಾಚರಣೆಯ ಭಾಗವಾಗಿರುವುದಕ್ಕೆ ನಮಗೆ ತುಂಬಾ ಸಂತೋಷವಾಗಿದೆ” ಎಂದು ಉತ್ತರ ಪ್ರದೇಶದ ಬುಲಂದ್‌ಶಹರ್ ನಿವಾಸಿಯಾದ ಕುಮಾರ್ ಹರ್ಷ ವ್ಯಕ್ತಪಡಿಸಿದರು.
ರಾಕ್‌ವೆಲ್ ಎಂಟರ್‌ಪ್ರೈಸಸ್‌ನ 12 ಸದಸ್ಯರ ತಂಡದ ನಾಯಕ ವಕೀಲ್ ಹಾಸನ್ ಮಾತನಾಡಿ, ”ನಾಲ್ಕು ದಿನಗಳ ಹಿಂದೆ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿರುವ ಕಂಪನಿಯು ಸಹಾಯಕ್ಕಾಗಿ ನಮ್ಮನ್ನು ಸಂಪರ್ಕಿಸಿತ್ತು. 24ರಿಂದ 36 ಗಂಟೆಯೊಳಗೆ ಕಾಮಗಾರಿ ಪೂರ್ಣಗೊಳ್ಳಲಿದೆ. ಅವಶೇಷಗಳಿಂದ ತೆಗೆಯುವಾಗ ಕಾಮಗಾರಿ ವಿಳಂಬವಾಯಿತು. ಸೋಮವಾರ ಮಧ್ಯಾಹ್ನ 3 ಗಂಟೆಗೆ ಆರಂಭಿಸಿ ಮಂಗಳವಾರ ಸಂಜೆ 6 ಗಂಟೆಗೆ ಕೆಲಸ ಮುಗಿಸಿದೆವು” ಎಂದು ಅವರು ಹೇಳಿದರು.
ಕಾರ್ಮಿಕರ ಯೋಗಕ್ಷೇಮ ವಿಚಾರಿಸಿದ ಮೋದಿ: ಕಾರ್ಮಿಕರನ್ನು ರಕ್ಷಿಸಿದ ನಂತರ ಇಡೀ ದೇಶವೇ ನೆಮ್ಮದಿಯ ನಿಟ್ಟುಸಿರುಬಿಟ್ಟಿತು. ಪರಿಹಾರ ಹಾಗೂ ರಕ್ಷಣಾ ತಂಡಗಳ ಪ್ರಯತ್ನಕ್ಕೆ ಎಲ್ಲೆಡೆ ಶ್ಲಾಘನೆ ವ್ಯಕ್ತವಾಗುತ್ತಿದೆ. ಸುರಂಗದಿಂದ ಸುರಕ್ಷಿತವಾಗಿ ಹೊರಬಂದ ಕಾರ್ಮಿಕರೊಂದಿಗೆ ಪ್ರಧಾನಿ ನರೇಂದ್ರ ಮೋದಿ ದೂರವಾಣಿಯಲ್ಲಿ ಮಾತನಾಡಿ ಯೋಗಕ್ಷೇಮ ವಿಚಾರಿಸಿದರು. ಮೊದಲ ದಿನದಿಂದಲೂ ಪ್ರಧಾನಿ ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಅವರಿಂದ ರಕ್ಷಣಾ ಕಾರ್ಯಾಚರಣೆಯ ಬಗ್ಗೆ ಅಪ್ಡೇಟ್ಗಳನ್ನು ಪಡೆದುಕೊಳ್ಳುತ್ತಿದ್ದರು.
ಕಾರ್ಮಿಕರ ಮನ-ಮನೆಗಳಲ್ಲಿ ದೀಪಾವಳಿ: ಸುರಂಗದಿಂದ ಸುರಕ್ಷಿತವಾಗಿ ಪಾರಾದ ಕಾರ್ಮಿಕರ ಮನೆಗಳಲ್ಲಿ ಸಂಭ್ರಮದ ವಾತಾವರಣವಿದೆ.