ಒಕ್ಕಲಿಗ ನಾಯಕ ಆರ್ ಅಶೋಕ್ ಗೆ ಒಲಿದ ವಿಪಕ್ಷ ನಾಯಕನ ಪಟ್ಟ
1 min readನವೆಂಬರ್ 18: ವಿಧಾನಸಭಾ ಚುನಾವಣೆಯ ಫಲಿತಾಂಶ ಬಂದು ಬರೋಬ್ಬರಿ ಆರು ತಿಂಗಳ ಬಿಜೆಪಿ ಹೈಕಮಾಂಡ್ ಕರ್ನಾಟಕದ ಪ್ರತಿಪಕ್ಷ ನಾಯಕರನ್ನಾಗಿ ಮಾಜಿ ಉಪ ಮುಖ್ಯಮಂತ್ರಿ, ಬೆಂಗಳೂರಿನ ಪದ್ಮನಾಭನಗರ ಕ್ಷೇತ್ರದ ಶಾಸಕ ಹಾಗೂ ಒಕ್ಕಲಿಗ ನಾಯಕರಾದ ಆರ್ ಅಶೋಕ್ ಅವರನ್ನ ಆಯ್ಕೆ ಮಾಡಿದೆ.
ಹೌದು, ಶುಕ್ರವಾರ ಬೆಂಗಳೂರಿನಲ್ಲಿ ನಡೆದ ಬಿಜೆಪಿ ಶಾಸಕಾಂಗ ಪಕ್ಷದ ಸಭೆಯಲ್ಲಿ ವಿಪಕ್ಷ ನಾಯಕನ ಆಯ್ಕೆ ಕುರಿತು ಚರ್ಚೆ ನಡೆದಿದ್ದು,ಶಾಸಕರ ಅಭಿಪ್ರಾಯ ಹಾಗೂ ಲೋಕಸಭಾ ಚುನಾವಣೆಯ ಲೆಕ್ಕಾಚಾರವನ್ನ ಹಾಕಿಕೊಂಡಿರುವ ಬಿಜೆಪಿ ಹೈಕಮಾಂಡ್ ಆಯ್ಕೆ ಮಾಡಿದೆ. ಈಗಾಗಲೇ ಲಿಂಗಾಯತ ಸಮುದಾಯದ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರ ಪುತ್ರ ಬಿ ವೈ ವಿಜಯೇಂದ್ರ ಅವರನ್ನ ಬಿಜೆಪಿ ನೂತನ ರಾಜ್ಯಾಧ್ಯಕ್ಷರಾಗಿ ಬಿಜೆಪಿ ಹೈಕಮಾಂಡ್ ನೇಮಕ ಮಾಡಿದ್ದು, ವಿಪಕ್ಷ ಸ್ಥಾನಕ್ಕೆ ಒಕ್ಕಲಿಗ ನಾಯಕ ಆರ್ ಅಶೋಕ್ ಅವರ ಆಯ್ಕೆ ಮಾಡುವ ಮೂಲಕ ಜಾತಿ ಲೆಕ್ಕಾಚಾರವನ್ನ ಗಮದಲ್ಲಿಟ್ಟುಕೊಂಡು ಈ ತಿರ್ಮಾನವನ್ನ ಬಿಜೆಪಿ ಹೈಕಮಾಂಡ್ ಮಾಡಿದೆ.
ಆರ್ ಅಶೋಕ್ ಆಯ್ಕೆಗೆ ಅಸಲಿ ಕಾರಣಗಳೇನು?
ಆರ್ ಅಶೋಕ್ ಪಕ್ಷದ ನಿಷ್ಠವಂತ ಕಾರ್ಯಕರ್ತ, ಉತ್ತಮ ಸಂಸದೀಯ ಪಟು, ಉಪಮುಖ್ಯಮಂತ್ರಿ ಆಗಿ, ಕಂದಾಯ ಸಚಿವ, ಗೃಹ ಸಚಿವ, ಆರೋಗ್ಯ, ಸಾರಿಗೆ, ಪೌರಾಡಳಿತ ಸಚಿವರಾಗಿಯೂ ಕೆಲಸ ಮಾಡಿದ್ದು, ರಾಜಕೀಯ ಅನುಭವ ಕೂಡ ಹೆಚ್ಚಾಗಿದ್ದು, ಆರ್ ಅಶೋಕ್ ಅವರು ವಿರೋಧ ಪಕ್ಷದ ನಾಯಕನ ಹುದ್ದೆಯನ್ನ ಸಮರ್ಥವಾಗಿ ನಿಭಾಯಿಸುತ್ತಾರೆ ಎನ್ನುವುದು ಬಿಜೆಪಿ ಹೈಕಮಾಂಡ್ ನಾಯಕರ ಲೆಕ್ಕಾಚಾರವಾಗಿದೆ.
ಈಗಾಗಲೇ ವಿಧಾನಸಭಾ ಚುನಾವಣೆಯಲ್ಲಿ ಹೀನಾಯವಾಗಿ ಸೋಲು ಕಂಡ ರಾಜ್ಯ ಬಿಜೆಪಿಯನ್ನ ಮತ್ತೆ ಕೆಳಮಟ್ಟದಿಂದಲೂ ಕಟ್ಟವ ಅನಿವಾರ್ಯತೆಯಿಂದಾಗಿ ಬಿಜೆಪಿ ಹೈಕಮಾಂಡ್ ಯಡಿಯೂರಪ್ಪ ಅವರ ಪುತ್ರ ಬಿ ವೈ ವಿಜಯೇಂದ್ರ ಅವರಿಗೆ ರಾಜ್ಯಾಧ್ಯಕ್ಷ ಹುದ್ದೆ ನೀಡಿದ್ದು, ಇತ್ತ ಸದನಗಳಲ್ಲಿ ಆಡಳಿತರೂಢ ಕಾಂಗ್ರೆಸ್ ಸರ್ಕಾರಕ್ಕೆ ಬಿಸಿ ಮುಟ್ಟಿಸಿ, ಸರ್ಕಾರದ ವೈಪಲ್ಯದ ವಿರುದ್ಧ ಸದನದ ಒಳಗೆ ಹಾಗೂ ಹೊರಗೆ ಹೋರಾಟ ನಡೆಸಲು ಒಕ್ಕಲಿಗ ನಾಯಕ ಆರ್ ಅಶೋಕ್ ಗೆ ಈ ಹುದ್ದೆಯನ್ನ ನೀಡಿದ್ದು, ರಾಜ್ಯದಲ್ಲಿ ಒಕ್ಕಲಿಗ ಸಮುದಾಯ ಹೆಚ್ಚು ಪ್ರಬಲವಾಗಿದ್ದು, ಹಲವು ಲೆಕ್ಕಾಚಾರಗಳಿವೆ ಎನ್ನಲಾಗಿದೆ.
ಇನ್ನೂ ಮುಂದಿನ ಲೋಕಸಭಾ ಚುಣಾವಣೆಗೆ ರಾಜ್ಯದಲ್ಲಿ ಕಾಂಗ್ರೆಸ್ ಸೋಲಿನ ರುಚಿ ತೋರಿಸಲು ಜೆಡಿಎಸ್ ಜೊತೆಗೆ ಮೈತ್ರಿಯಾಗಿರುವ ಬಿಜೆಪಿಗೆ ಹೋಂದಾಣಿಕೆ ಅನಿವಾರ್ಯವಾಗಿದ್ದು, ಆರ್ ಅಶೋಕ್ ಪ್ರತಿಪಕ್ಷ ನಾಯಕನಾದ್ರೆ ಜೆಡಿಎಸ್ ಜೊತೆಗೆ ಹೋಂದಾಣಿಕೆ ಮಾಡಿಕೊಳ್ಳುವ ನಿಟ್ಟಿನಲ್ಲಿ ಯಾವುದೇ ಸಮಸ್ಯೆಗಳು ಉದ್ಬವಿಸುವುದಿಲ್ಲ. ಒಂದು ವೇಳೆ ಸಮಸ್ಯೆಗಳು ಉದ್ಭವಿಸಿದ್ರು ಸಹ ಆರ್ ಅಶೋಕ್ ಸಮಸ್ಯೆಯನ್ನ ಉತ್ತಮವಾಗಿ ಬಗೆಹರಿಸುತ್ತಾರೆ ಎಂಬುದು ಹೈಕಮಾಂಡ್ ಲೆಕ್ಕಾಚಾರವಾಗಿದೆ.
ಈಗಾಗಲೇ ಸರ್ಕಾರ ರಚನೆಯ ಆರಂಭದಿಂದಲೂ ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಅವರು ಸರ್ಕಾರದ ವಿರುದ್ಧ ಧ್ವನಿ ಎತ್ತಿದ್ದು, ಕುಮಾರಸ್ವಾಮಿ ಅಧಿಕೃತ ವಿರೋಧ ಪಕ್ಷದ ನಾಯಕ ಅಲ್ಲದಿದ್ದರೂ ಅಧಿಕೃತ ವಿರೋಧ ಪಕ್ಷವಾಗಿಯೇ ಕೆಲಸ ಮಾಡುತ್ತಾರೆ. ಇನ್ನೂ ಮಾಜಿ ಮುಖ್ಯಮಂತ್ರಿ ಹಾಗೂ ಒಕ್ಕಲಿಗ ನಾಯಕರಾಗಿರುವ ಎಚ್ ಡಿ ಕುಮಾರಸ್ವಾಮಿ ಹೋರಾಟಕ್ಕೆ ಆರ್ ಅಶೋಕ್ ಸಾಥ್ ಕೊಟ್ಟರೆ ಸಾಕು ಎನ್ನುವುದು ಬಿಜೆಪಿಯ ಲೆಕ್ಕಾಚಾರ ಎನ್ನಲಾಗಿದೆ.
ಈಗಾಗಲೇ ಹಳೇ ಮೈಸೂರು ಭಾಗದಲ್ಲಿ ಒಕ್ಕಲಿಗ ಸಮುದಾಯವನ್ನ ಸೆಳೆಯುವ ನಿಟ್ಟಿನಲ್ಲಿ ಬಿಜೆಪಿಯೂ ಜೆಡಿಎಸ್ ಜೊತೆಗೆ ಮೈತ್ರಿಯಾಗಿದ್ದು, ಮತ್ತೆ ವಿಪಕ್ಷ ನಾಯಕನ ಆಯ್ಕೆಯಲ್ಲಿ ಒಕ್ಕಲಿಗ ನಾಯಕನಿಗೆ ಬಿಜೆಪಿ ಹೈಕಮಾಂಡ್ ಮಣೆ ಹಾಕಿದೆ. ಹಳೇ ಮೈಸೂರು ಭಾಗವನ್ನ ಮುಂದಿಟ್ಟುಕೊಂಡು ಒಕ್ಕಲಿಗೆ ನಾಯಕತ್ವಗೆ ಮನ್ನಣೆ ಹಾಕಲಾಗಿದೆ. ಯಾಕೆಂದರೆ ಮುಂದಿನ ದಿನಗಳಲ್ಲಿ ಜೆಡಿಎಸ್ ಮೈತ್ರಿಯಿಂದ ದೂರವಾದರೇ ಒಕ್ಕಲಿಗ ಸಮುದಾಯವನ್ನ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಹೈಕಮಾಂಡ್ ಈ ನಿರ್ಧಾರವನ್ನ ಕೈಗೊಂಡಿದೆ.