14 ದಿನಗಳ ಕಾಲ ಭಕ್ತರಿಗೆ ದರ್ಶನ ನೀಡಿದ ಹಾಸನಾಂಬೆ: 12 ದಿನಕ್ಕೆ 8 ಕೋಟಿ 72 ಲಕ್ಷ ಆದಾಯ
1 min readಹಾಸನಾಂಬೆ ದೇವಿ ಮತ್ತು ಶ್ರೀ ಸಿದ್ದೇಶ್ವರ ದೇವಾಲಯದ ಮುಂಭಾಗದ ಆವರಣದಲ್ಲಿ ಕಂದಾಯ ಇಲಾಖೆ ಮತ್ತು ಜಿಲ್ಲಾಡಳಿತದ ನೇತೃತ್ವದಲ್ಲಿ ಹುಂಡಿ ಎಣಿಕೆ ಕಾರ್ಯ ನಡೆಯಿತು.
ಹಾಸನ: ಪ್ರತಿವರ್ಷದಂತೆ ಈ ವರ್ಷವೂ ಕೂಡ ಅಧಿದೇವತೆ ಹಾಸನಾಂಬೆ ದೇವಿಯ ಗರ್ಭಗುಡಿ ಬಾಗಿಲು ತೆರೆದಿದ್ದು, 14 ದಿವಸಗಳ ಕಾಲ ದರ್ಶನದ ಭಾಗ್ಯ ಇರುವುದರಿಂದ ಭಕ್ತರಿಂದ ಟಿಕೆಟ್, ಲಾಡು ಮಾರಾಟ, ಕಾಣಿಕೆ ಮತ್ತು ಇ-ಹುಂಡಿಯಿಂದ ಸುಮಾರು 8 ಕೋಟಿ 72 ಲಕ್ಷದ 41 ಸಾವಿರದ 531 ರೂ.
ಆದಾಯ ಸಂಗ್ರಹ ಆಗುವ ಮೂಲಕ ಹಾಸನಾಂಬೆ ಮತ್ತು ಶ್ರೀ ಸಿದ್ದೇಶ್ವರ ಜಾತ್ರಾ ಮಹೋತ್ಸವ ಇತಿಹಾಸ ಸೃಷ್ಟಿಸಿದೆ.
ಹಾಸನಾಂಬೆ ದೇವಿ ಮತ್ತು ಶ್ರೀ ಸಿದ್ದೇಶ್ವರ ದೇವಾಲಯದ ಮುಂಭಾಗದ ಆವರಣದಲ್ಲಿ ಕಂದಾಯ ಇಲಾಖೆ ಶಾಸಕ ಹೆಚ್.ಪಿ. ಸ್ವರೂಪ್ ಮತ್ತು ಜಿಲ್ಲಾಡಳಿತದ ನೇತೃತ್ವದಲ್ಲಿ ಅಧಿಕಾರಿಗಳು, ಸಿಬ್ಬಂದಿ, ಭಾರತ್ ಸ್ಕೌಟ್ ಅಂಡ್ ಗೈಡ್ಸ್ ವಿದ್ಯಾರ್ಥಿಗಳು ಸೇರಿದಂತೆ ಬ್ಯಾಂಕ್ ಸಿಬ್ಬಂದಿ ಹುಂಡಿ ಎಣಿಕೆ ಕಾರ್ಯದಲ್ಲಿ ಭಾಗಿಯಾಗಿದ್ದರು.
ದೇವಿ ದರ್ಶನದ 1 ಸಾವಿರ ಬೆಲೆಯ ಟಿಕೆಟ್ ಮಾರಾಟದಿಂದ 3 ಕೋಟಿ 9 ಲಕ್ಷದ 89 ಸಾವಿರ ರೂ. 300 ರೂ ಬೆಲೆಯ ಟಿಕೆಟ್ ಮಾರಾಟದಿಂದ 2 ಕೋಟಿ 35 ಲಕ್ಷದ 4 ಸಾವಿರದ 400 ರೂ. ಇನ್ನು ಲಾಡು ಮಾರಾಟದಿಂದ 68 ಲಕ್ಷದ 23 ಸಾವಿರದ 760 ರೂ ಸಂಗ್ರಹವಾಗಿದೆ. ಈ ಹುಂಡಿ ಮೂಲಕ 4 ಲಕ್ಷದ 64 ಸಾವಿರ ಜಮೆ ಆಗಿದೆ. ದೇವಾಲಯದ ವಿವಿಧ ಭಾಗಗಳಲ್ಲಿ ಇಡಲಾಗಿದ್ದ 21 ಕಾಣಿಕೆ ಹುಂಡಿಗಳಿಂದ 2 ಕೋಟಿ 50 ಲಕ್ಷದ 77 ಸಾವಿರದ 497 ರೂಪಾಯಿ ಸಂಗ್ರಹವಾಗುವ ಮೂಲಕ ಒಟ್ಟು ಎಲ್ಲ ಸೇರಿ 8 ಕೋಟಿ 72 ಲಕ್ಷದ 41 ಸಾವಿರದ 531 ರೂ ದಾಖಲೆ ಆದಾಯ ಗಳಿಸಿದೆ.
ಕಾಣಿಕೆ ಹುಂಡಿಗೆ ವಿವಿಧ ಭಾಗದ ಭಕ್ತರು ಹರಕೆ ರೂಪದಲ್ಲಿ ನೀಡಿದ 62 ಗ್ರಾಂ ಚಿನ್ನ, 161 ಗ್ರಾಂ ಬೆಳ್ಳಿ ಸಂಗ್ರಹವಾಗಿದೆ. ಮಧ್ಯಾಹ್ನ 2 ಗಂಟೆಗೆ ಹುಂಡಿ ಏಣಿಕೆ ಕಾರ್ಯವನ್ನು ಸಿ ಸಿ ಕ್ಯಾಮೆರಾದ ಕಣ್ಗಾವಲಿನಲ್ಲಿ ನಡೆಸಲಾಯಿತು. ನ.2 ರಿಂದ 15ರ ವರೆಗೆ ಈ ಬಾರಿಯ ಹಾಸನಾಂಬೆ ಜಾತ್ರಾ ಮಹೋತ್ಸವ ನಡೆಯಿತು. ಈ ಅವಧಿಯಲ್ಲಿ ಮೊದಲ ಹಾಗೂ ಕಡೆಯ ದಿನ ಸಾರ್ವಜನಿಕ ದರ್ಶನ ಇಲ್ಲದೇ ಇದ್ದರೂ, ಗಣ್ಯರು, ಜನಪ್ರತಿನಿಧಿಗಳು ಸೇರಿ ಸುಮಾರು 14 ಲಕ್ಷಕ್ಕೂ ಹೆಚ್ಚು ಜನ ಭಕ್ತರು ದೇವಿಯ ದರ್ಶನ ಪಡೆದಿದ್ದಾರೆ.
ಹಾಸನಾಂಬೆ ದರ್ಶನ ಮಾಡಲು ಬಂದ ಅನೇಕರು ವಿವಿಧ ರೀತಿಯ ಕೋರಿಕೆ ಪತ್ರವನ್ನು ಕಾಣಿಕೆ ಹುಂಡಿಗೆ ಹಾಕುತ್ತಿದ್ದರು. ಅದನ್ನು ಬಹಿರಂಗಪಡಿಸಲಾಗುತ್ತಿತ್ತು. ಆದರೇ ಕಳೆದ ಎರಡು ವರ್ಷಗಳಿಂದಲೂ ಕೋರಿಕೆ ಪತ್ರವನ್ನು ಯಾರಿಗೂ ಪ್ರದರ್ಶಿಸಬಾರದು ಎಂಬ ಕಟ್ಟುನಿಟ್ಟಿನ ಸೂಚನೆ ನೀಡಿದ್ದರಿಂದ ಬಹಿರಂಗಪಡಿಸಲಿಲ್ಲ. ಭಕ್ತರ ಮನವಿಗಳು ದೇವರಲ್ಲಿಯೇ ಗೌಪ್ಯವಾಗಿ ಉಳಿಯಿತು.
ಇನ್ನು ಈ ವರ್ಷವೂ ಕೂಡ ವಿದೇಶಿ ಕರೆನ್ಸಿಗಳು ಕಾಣಿಕೆ ಹುಂಡಿಯಲ್ಲಿ ಕಾಣಿಸಿಕೊಂಡಿವೆ. ಈ ಬಾರಿ ಹಾಸನಾಂಬ ಮತ್ತು ಶ್ರೀ ಸಿದ್ದೇಶ್ವರ ಜಾತ್ರಾ ಮಹೋತ್ಸವ ಯಶಸ್ವಿಯಾಗಿ ಪೂರ್ಣಗೊಂಡಿದೆ ಎಂದು ಹಾಸನಾಂಬೆ ದೇವಿ ಮತ್ತು ಶ್ರೀ ಸಿದ್ದೇಶ್ವರ ದೇವಾಲಯದ ಆಡಳಿತ ವರ್ಗ ತಿಳಿಸಿದೆ.