ನ.17ರಿಂದ ನಾಲ್ಕು ದಿನ ಕೃಷಿ ಮೇಳ
1 min readಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ಆಶ್ರಯದಲ್ಲಿ ನ. 17ರಿಂದ 20ರವರೆಗೆ ಗಾಂಧಿ ಕೃಷಿ ವಿಜ್ಞಾನ ಕೇಂದ್ರದ (ಜಿಕೆವಿಕೆ) ಆವರಣದಲ್ಲಿ ‘ಆಹಾರ, ಆರೋಗ್ಯ, ಆದಾಯಕ್ಕಾಗಿ ಸಿರಿಧಾನ್ಯಗಳು’ ಎಂಬ ಘೋಷವಾಕ್ಯದಡಿ ಕೃಷಿ ಮೇಳ ಆಯೋಜಿಸಲಾಗಿದೆ’ ಎಂದು ವಿಶ್ವವಿದ್ಯಾಲಯದ ಕುಲಪತಿ ಎಸ್.ವಿ. ಸುರೇಶ ತಿಳಿಸಿದರು.
ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಈ ಬಾರಿಯ ಮೇಳದಲ್ಲಿ ವಿಶ್ವವಿದ್ಯಾಲಯದ ಸಂಶೋಧಕರು ಅಭಿವೃದ್ಧಿಪಡಿಸಿರುವ, 5 ಹೊಸ ತಳಿಗಳಾದ ಸಾಮೆ- ಜಿಪಿಯುಎಲ್ 11, ಬರಗು-ಜಿಪಿಯುಪಿ 32, ರಾಗಿ- ಎಂ.ಎಲ್ 22, ಸೂರ್ಯಕಾಂತಿ ಕೆಬಿಎಸ್‌ಎಚ್-85 ಮತ್ತು ಕೆಂಪು ಹಲಸು ತಳಿಗಳು ಬಿಡುಗಡೆಯಾಗಲಿವೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಳಿಗಳನ್ನು ಬಿಡುಗಡೆ ಮಾಡಲಿದ್ದಾರೆ’ ಎಂದು ಮಾಹಿತಿ ನೀಡಿದರು.
ಮೇಳ ವಿಶೇಷ : ‘ಬಾಡಲ್ ಬದನೆ, ಚೆರ್‍ರಿ ಟೊಮೆಟೊ ತರಕಾರಿಗಳು ಮತ್ತು ಅಲಂಕಾರಿಕ (ಆರ್ನಮೆಂಟಲ್) ಸೂರ್ಯಕಾಂತಿ ಹೂವಿನ ಪ್ರಾತ್ಯಕ್ಷಿಕೆಗಳ ಪ್ರದರ್ಶನ ಈ ಬಾರಿಯ ವಿಶೇಷ. ಜತೆಗೆ, ಬರಗಾಲದಲ್ಲಿ ಸೂಕ್ಷ್ಮ ನೀರಾವರಿ ತಂತ್ರಜ್ಞಾನದ ಮೂಲಕ ಸಿರಿಧಾನ್ಯಗಳನ್ನು ಬೆಳೆದು ಆದಾಯ ಹೆಚ್ಚಿಸಿಕೊಳ್ಳುವ ಬಗ್ಗೆ ರೈತರಿಗೆ ತಿಳಿವಳಿಕೆ ನೀಡಲಾಗುವುದು’ ಎಂದರು.
ಬೀಜ ಸಂತೆ: ಕೃಷಿ ಮೇಳದ ಇತಿಹಾಸದಲ್ಲಿ ಮೊದಲ ಬಾರಿಗೆ ‘ಬೀಜ ಸಂತೆ’ ಆಯೋಜಿಸಲಾಗುತ್ತಿದೆ. ಈವರೆಗೆ ಮೇಳದಲ್ಲಿ ಐಐಎಚ್‌ಆರ್, ಕರ್ನಾಟಕ ರಾಜ್ಯ ಬೀಜ ನಿಗಮ ಸೇರಿದಂತೆ ಸರ್ಕಾರಿ ಸ್ವಾಮ್ಯದ ಸಂಸ್ಥೆಗಳು ಬಿತ್ತನೆ ಬೀಜಗಳನ್ನು ಪ್ರದರ್ಶನಕ್ಕಷ್ಟೇ ಇಡುತ್ತಿದ್ದವು. ಆದರೆ ಈ ಬಾರಿ ಪ್ರದರ್ಶನದ ಜೊತೆಗೆ ಬಿತ್ತನೆ ಬೀಜಗಳ ಮಾರಾಟಕ್ಕೂ ಅವಕಾಶ ಕಲ್ಪಿಸಲಾಗಿದೆ’ ಎಂದರು.
ಸಿರಿಧಾನ್ಯ ಆಹಾರ ಮೇಳ: ಸಿರಿಧಾನ್ಯಗಳ ಬಳಕೆ ಪ್ರಮಾಣವನ್ನು ಹೆಚ್ಚಿಸುವ ಉದ್ದೇಶದಿಂದ ಈ ಬಾರಿಯ ಕೃಷಿ ಮೇಳದಲ್ಲಿ ವಿಶೇಷವಾಗಿ ‘ಸಿರಿಧಾನ್ಯಗಳ ಆಹಾರ ಮೇಳ’ವನ್ನು ಆಯೋಜಿಸಲಾಗುತ್ತಿದೆ. ಇದಕ್ಕಾಗಿ ಮೇಳದಲ್ಲಿ ಪ್ರತ್ಯೇಕ ಸಿರಿಧಾನ್ಯಗಳ ಫುಡ್‌ಕೋರ್ಟ್ ತೆರೆಯಲಾಗುತ್ತದೆ. ವಿಶ್ವವಿದ್ಯಾಲಯದ ಆಹಾರ ವಿಜ್ಞಾನ ವಿಭಾಗದಿಂದ ಸಿರಿಧಾನ್ಯ ಖಾದ್ಯಗಳ ರೆಸಿಪಿಗಳನ್ನು ಮೇಳದಲ್ಲಿ ಪರಿಚಯಿಸಲಿದ್ದಾರೆ’ ಎಂದು ಮಾಹಿತಿ ನೀಡಿದರು.
‘ಮೇಳದಲ್ಲಿ 625 ಮಳಿಗೆಗೆ ವ್ಯವಸ್ಥೆ ಮಾಡಲಾಗಿದೆ. ಸಾರ್ವಜನಿಕರಿಗೆ ಉಚಿತ ಪ್ರವೇಶವಿದೆ. ಕೃಷಿ ಮೇಳದ ಬಗ್ಗೆ ಸಂಪೂರ್ಣ ಮಾಹಿತಿ ನೀಡಲು ಪ್ರತ್ಯೇಕ ಆಯಪ್ ಸಿದ್ಧಪಡಿಸಲಾಗಿದ್ದು, ಗುರುವಾರ ಬೆಳಿಗ್ಗೆ ಬಿಡುಗಡೆ ಮಾಡಲಾಗುವುದು’ ಎಂದರು.
ಕೃಷಿ ವಿವಿ ಗುರುತಿಸಿ ಅಭಿವೃದ್ಧಿಪಡಿಸಿರುವ ಕೆಂಪು ತೊಳೆಗಳಿರುವ ‘ಜಿಕೆವಿಕೆ ಕೆಂಪು ಹಲಸು’ ತಳಿಯನ್ನು ಕೃಷಿ ಮೇಳದಲ್ಲಿ ಬಿಡುಗಡೆ ಮಾಡಲಾಗುತ್ತದೆ. ಇದು ನಾಟಿ ಮಾಡಿದ ಮೂರೂವರೆ ವರ್ಷಕ್ಕೆ ಫಸಲು ಆರಂಭವಾಗುತ್ತದೆ’ ಎಂದು ವಿಜ್ಞಾನಿ ಶ್ಯಾಮಲಮ್ಮ ಮಾಹಿತಿ ನೀಡಿದರು. ‘ವರ್ಷದಿಂದ ವರ್ಷಕ್ಕೆ ಹೆಚ್ಚು ಇಳುವರಿ ನೀಡುತ್ತದೆ. ಅಧ್ಯಯನದ ಪ್ರಕಾರ ಹತ್ತು ವರ್ಷದ ಒಂದು ಮರ ವರ್ಷಕ್ಕೆ 120 ರಿಂದ 150 ಹಣ್ಣುಗಳನ್ನು ಕೊಡುತ್ತದೆ. ಪ್ರತಿ ತೊಳೆ 25 ರಿಂದ 35 ಗ್ರಾಂ ತೂಕವಿರುತ್ತದೆ. ಆರಂಭದಲ್ಲಿ ರೆಂಬೆಗಳಲ್ಲಿ ಬಿಡುವ ಉದ್ದ ಆಕಾರದ ಹಣ್ಣುಗಳು ಮಧ್ಯಮ ಗಾತ್ರದಲ್ಲಿರುತ್ತವೆ. ಪ್ರತಿ ಹಣ್ಣು 5.5ಕೆಜಿಯಿಂದ 10 ಕೆಜಿ ತೂಕವಿರುತ್ತದೆ. ಅಂಟು ರಹಿತ ರುಚಿಕರವಾದ ವಿಶಿಷ್ಟ ಕೆಂಪು ತೊಳೆಯ ಈ ಹಣ್ಣನ್ನು ವಾಣಿಜ್ಯವಾಗಿಯೂ ಬೆಳೆಯಬಹುದು. ತಿನ್ನುವುದಕ್ಕೆ ಹಾಗೂ ಮೌಲ್ಯವರ್ಧನೆಗೂ ಎರಡಕ್ಕೂ ಸೂಕ್ತವಾಗುತ್ತದೆ’ ಎಂದರು.