ಬೆಳ್ಳಂಬೆಳಗ್ಗೆ ಭೀಕರ ರಸ್ತೆ ಅಪಘಾತ; ಒಟ್ಟಿಗೆ ಪ್ರಾಣ ಬಿಟ್ಟ ಆರು ಜನ ಸ್ನೇಹಿತರು
1 min readಉತ್ತರಪ್ರದೇಶ ಮುಜಾಫರ್‌ನಗರದಲ್ಲಿ ಬೆಳ್ಳಂಬೆಳಗ್ಗೆ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಅಪಘಾತಲ್ಲಿ ಆರು ಜನ ಸ್ನೇಹಿತರು ಅಸುನೀಗಿದ್ದಾರೆ. ಸದ್ಯ ಮಕ್ಕಳ ಸಾವಿನ ಸುದ್ದಿ ತಿಳಿದ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.
ಮುಜಾಫರ್‌ನಗರ(ಉತ್ತರಪ್ರದೇಶ): ಜಿಲ್ಲೆಯಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದೆ.
ಇಂದು ಬೆಳ್ಳಂಬೆಳಗ್ಗೆ ಸಂಭವಿಸಿದ ರಸ್ತೆ ಅಪಘಾತದಲ್ಲಿ ಆರು ಜನ ಸ್ನೇಹಿತರು ಸಾವನ್ನಪ್ಪಿದ್ದಾರೆ. ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದರು. ಮುಜಾಫರ್‌ನಗರ ಪೊಲೀಸರು ಕಾರಿನಲ್ಲಿ ಸಿಲುಕಿದ್ದ ಮೃತದೇಹವನ್ನು ಹೊರ ತೆಗೆಯಲು ಹರಸಾಹಸ ಪಟ್ಟರು. ಮೃತದೇಹಗಳನ್ನು ವಶಕ್ಕೆ ಪಡೆದ ಪೊಲೀಸರು ಮರಣೋತ್ತರ ಪರೀಕ್ಷೆಗಾಗಿ ಸರ್ಕಾರಿ ಆಸ್ಪತ್ರೆಗೆ ರವಾನಿಸಿದರು.
ರಸ್ತೆ ಅಪಘಾತದಲ್ಲಿ ಸ್ನೇಹಿತರ ಸಾವು: ಅತಿವೇಗದಲ್ಲಿ ಬಂದ ಕಾರು ಟ್ರಕ್ನ ಹಿಂಬದಿಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಆರು ಮಂದಿ ಸ್ನೇಹಿತರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮೃತರೆಲ್ಲರೂ ದೆಹಲಿಯ ಶಹದಾರ ನಿವಾಸಿಗಳಾಗಿದ್ದಾರೆ. ಅಪಘಾತದ ಬಗ್ಗೆ ಆಯಾ ಕುಟುಂಬಸ್ಥರಿಗೆ ಮಾಹಿತಿ ನೀಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಬೆಳ್ಳಂಬೆಳಗ್ಗೆ ರಸ್ತೆ ಅಪಘಾತ: ಇಂದು ಮುಂಜಾನೆ 4 ಗಂಟೆಗೆ ಟ್ರಕ್ ಸಂಖ್ಯೆ PB10ES 6377 ಮುಜಾಫರ್‌ನಗರದಿಂದ ಹರಿದ್ವಾರ ಕಡೆಗೆ ಹೋಗುತ್ತಿತ್ತು. ಈ ವೇಳೆ ಕಾರು ಸಂಖ್ಯೆ DL2CBD/8302 ಮುಜಾಫರ್‌ನಗರದ ಛಾಪರ್ ಬಳಿ ಹಿಂದಿನಿಂದ ಟ್ರಕ್‌ಗೆ ಡಿಕ್ಕಿ ಹೊಡೆದಿದೆ. ಕೂಡಲೇ ಸ್ಥಳೀಯರು ರಕ್ಷಣಾ ಕಾರ್ಯ ಕೈಗೊಂಡರು. ಆದ್ರೆ ಯಾವುದೇ ಪ್ರಯೋಜನೆಯಾಗಲಿಲ್ಲ. ಬಳಿಕ ಅಲ್ಲಿದ್ದವರು ಪೊಲೀಸರಿಗೆ ಕರೆ ಮಾಡಿ ಮಾಹಿತಿ ರವಾನಿಸಿದರು. ಸುದ್ದಿ ತಿಳಿದಾಕ್ಷಣ ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಅಪಘಾತದ ಬಗ್ಗೆ ಪರಿಶೀಲನೆ ನಡೆಸಿದರು. ಬಳಿಕ ಕ್ರೇನ್ ಸಹಾಯದಿಂದ ಕಾರನ್ನು ಲಾರಿಯಡಿಯಿಂದ ಹೊರತೆಗೆದರು.
ಮುಗಿಲು ಮುಟ್ಟಿದ ಆಕ್ರಂದನ: ಈ ಅಪಘಾತದಲ್ಲಿ ದೆಹಲಿಯ ಶಹದಾರಾದಲ್ಲಿ ವಾಸಿಸುತ್ತಿದ್ದ ಆರು ಜನ ಸ್ನೇಹಿತರು ಮೃತಪಟ್ಟಿದ್ದಾರೆ. ಮೃತರನ್ನು ಯೋಗೇಂದ್ರ ತ್ಯಾಗಿ ಅವರ ಪುತ್ರ ಶಿವಂ, ದೀಪಕ್ ಶರ್ಮಾ ಅವರ ಪುತ್ರ ಪಾರ್ಶ್, ನವೀನ್ ಶರ್ಮಾ ಅವರ ಪುತ್ರ ಕುನಾಲ್, ಧೀರಜ್, ವಿಶಾಲ್ ಮತ್ತು ಇನ್ನೊಬ್ಬ ಸ್ನೇಹಿತ ಎಂದು ಗುರುತಿಸಲಾಗಿದೆ. ಅಪಘಾತದ ಕುರಿತು ಆಯಾ ಕುಟುಂಬಸ್ಥರಿಗೆ ಮಾಹಿತಿ ಮುಟ್ಟಿಸಲಾಗಿದ್ದು, ಸುದ್ದಿ ತಿಳಿದ ಪೋಷಕರ ಮತ್ತು ಸಂಬಂಧಿಕರ ರೋದನೆ ಮುಗಿಲು ಮುಟ್ಟಿದೆ. ಈ ಅಪಘಾತದ ಕುರಿತು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.