ರಾಣಿಪೇಟೆಯಲ್ಲಿ ಪಟಾಕಿ ಸಿಡಿದು ಬಾಲಕಿ ಸಾವು; ಬೆಳಕಿನ ಹಬ್ಬದಲ್ಲಿ ಕತ್ತಲಾದ ಬದುಕು
1 min readಕುಟುಂಬಸ್ಥರೆಲ್ಲರೂ ಸೇರಿ ಪಟಾಕಿ ಹೊಡೆಯುವಾಗ ಬಾಲಕಿ ಸಾವನ್ನಪ್ಪಿರುವ ದುರ್ಘಟನೆ ಸಂಭವಿಸಿದೆ.
ರಾಣಿಪೇಟೆ (ತಮಿಳುನಾಡು) : ಬೆಳಕಿನ ಹಬ್ಬದ ಸಂಭ್ರಮದಲ್ಲಿ ಅವಘಡವೊಂದು ನಡೆದು ಬದುಕು ಕತ್ತಲಾಗಿದೆ. ದೀಪಾವಳಿ ಸಂಭ್ರಮಾಚರಣೆಯಲ್ಲಿದ್ದ ತಮಿಳುನಾಡಿನ ರಾಣಿಪೇಟೆ ಜಿಲ್ಲೆಯ ಮಂಪಕ್ಕಂನ ಆದಿ ದ್ರಾವಿಡರ ವಸತಿ ಪ್ರದೇಶದಲ್ಲಿ ಸೂತಕದ ಛಾಯೆ ಆವರಿಸಿದೆ.
ಭಾನುವಾರ ಪಟಾಕಿ ಸಿಡಿಸುವ ಸಮಯದಲ್ಲಿ ಪುಟ್ಟ ಬಾಲಕಿಯೋರ್ವಳು ಸಾವನ್ನಪ್ಪಿದ್ದಾಳೆ. ಆದಿ ದ್ರಾವಿಡರ ವಸತಿ ಪ್ರದೇಶದ ನಿವಾಸಿಗಳಾದ ರಮೇಶ್ (28) ಮತ್ತು ಅಶ್ವಿನಿ (25) ಎಂಬುವರ 4 ವರ್ಷದ ಕಂದಮ್ಮ ಮೃತ ದುರ್ದೈವಿ.
ದೀಪಾವಳಿ ಹಬ್ಬದ ನಿಮಿತ್ತ ರಮೇಶ್ ಅವರ ಕುಟುಂಬಸ್ಥರು ಒಟ್ಟಾಗಿ ಸೇರಿ ಪಟಾಕಿ ಹೊಡೆಯುತ್ತಿದ್ದರು. ಹೀಗಾಗಿ ರಮೇಶ್ ಅವರ ಸಹೋದರ ವಿಘ್ನೇಶ್ (31) ಸಿಡಿಸಿದ ಪಟಾಕಿಗಳು ಚೆಲ್ಲಾಪಿಲ್ಲಿಯಾಗಿದ್ದು, ಅಲ್ಲೇ ಇದ್ದ ಬಾಲಕಿಯ ಮೇಲೆ ಬಿದ್ದಿದೆ. ಪರಿಣಾಮ ಬಾಲಕಿಯ ಎದೆ ಮತ್ತು ತೋಳುಗಳ ಭಾಗಕ್ಕೆ ಗಂಭೀರ ಗಾಯಗಳಾಗಿದ್ದವು.
ಕೂಡಲೇ ಸಮೀಪದಲ್ಲಿರುವ ಚೇಯಾರ್ ಸರ್ಕಾರಿ ಆಸ್ಪತ್ರೆಗೆ ಬಾಲಕಿಯನ್ನು ಕರೆದೊಯ್ದಿದ್ದರು. ಆದರೆ, ಅಷ್ಟರಲ್ಲೇ ಬಾಲಕಿ ಸಾವನ್ನಪ್ಪಿರುವ ಬಗ್ಗೆ ಅಲ್ಲಿನ ವೈದ್ಯರು ತಿಳಿಸಿದ್ದಾರೆ. ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದ್ದು, ಈ ಸಂಬಂಧ ವಝೈಪಂದಲ್ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಪಟಾಕಿ ಸಿಡಿದಾಗ ಇರಲಿ ಜಾಗ್ರತ ಅಗತ್ಯ : ಕಣ್ಣಿಗೆ ಗಾಯವಾದಾಗ ಕಣ್ಣುಗಳನ್ನು ಉಜ್ಜಿಕೊಳ್ಳಬೇಡಿ. ಪಟಾಕಿಯ ದೊಡ್ಡ ಕಣವೇನಾದರೂ ಒಳಗೆ ಸಿಕ್ಕಿಹಾಕಿಕೊಂಡಿದ್ದರೆ ಬಲವಂತವಾಗಿ ಎಳೆದು ತೆಗೆಯಲು ಪ್ರಯತ್ನಿಸಬೇಡಿ. ಕಣ್ಣುಗಳನ್ನು ಮುಚ್ಚಿಸಿ ಕೂಡಲೇ ವೈದ್ಯರ ಬಳಿಗೆ ಕರೆದುಕೊಂಡು ಹೋಗಿ. ಗಾಯದ ಜಾಗವನ್ನು ಸ್ವಚ್ಛಗೊಳಿಸಿ ನೀರಿನಲ್ಲಿ ಅದ್ದಿಸಿ. ಆದರೆ ಐಸ್ ನೀರು ಬಳಸಬೇಡಿ, ಗಾಯದ ಸ್ಥಳ ಒಣಗಲು ಬಿಡಿ. ಶುದ್ಧವಾದ ಬಟ್ಟೆಯಿಂದ ಗಾಯವನ್ನು ಮುಚ್ಚಬೇಕು.
ಮುನ್ನೆಚ್ಚರಿಕೆ ವಹಿಸಿ: ಪಟಾಕಿ ಸಿಡಿಸುವಾಗ ಉದ್ದನೆಯ ಕಡ್ಡಿ ಬಳಸಿ. ಪಟಾಕಿ ಬಾಕ್ಸ್ ಮೇಲೆ ಇರುವ ಎಚ್ಚರಿಕೆಗಳನ್ನು ಓದಿಕೊಳ್ಳಿ. ಮಕ್ಕಳು ಪಟಾಕಿ ಹಚ್ಚುವಾಗ ದೊಡ್ಡವರು ಮಾರ್ಗದರ್ಶನ ಮಾಡಬೇಕು. ಪಕ್ಕದಲ್ಲಿ ಒಂದು ಬಕೆಟ್ ನೀರನ್ನು ಇಟ್ಟುಕೊಳ್ಳುವುದು ಒಳ್ಳೆಯದು. ಸಿಂಥೆಟಿಕ್ ಅಥವಾ ಬೇಗನೆ ಸುಡುವ ಸಡಿಲ ಬಟ್ಟೆ ಧರಿಸಿ ಪಟಾಕಿಗಳನ್ನು ಹಚ್ಚಬೇಡಿ. ಕಾಟನ್ ಬಟ್ಟೆ ಬಳಸಿ. ಅರೆಬರೆ ಸುಟ್ಟ ಪಟಾಕಿಯನ್ನು ಕೈಯಲ್ಲಾಗಲಿ, ಕಾಲಲ್ಲಾಗಲಿ ನಂದಿಸುವ ಪ್ರಯತ್ನ ಮಾಡಬಾರದು. ಜನದಟ್ಟಣೆಯ ಪ್ರದೇಶ, ಪಟಾಕಿ ಅಂಗಡಿಗಳ ಮುಂದೆ, ಆಸ್ಪತ್ರೆಗಳ ಬಳಿ, ವೃದ್ಧಾಶ್ರಮಗಳು ಹಾಗೂ ಪೆಟ್ರೋಲ್ ಬಂಕ್ ಬಳಿ ಪಟಾಕಿ ಸುಡಬಾರದು.