ದೊಡ್ಡಬಳ್ಳಾಪುರ: ಫೋಟೋಶೂಟ್ ವಿಚಾರಕ್ಕೆ ಗುಂಪುಗಳ ನಡುವೆ ಜಗಳ, ಯುವಕನ ಕೊಲೆ
1 min read
ಫೋಟೋಶೂಟ್ ಮಾಡುವಾಗ ಆರಂಭವಾದ ಜಗಳದಲ್ಲಿ ಯುವಕನಿಗೆ ಚಾಕುವಿನಿಂದ ಇರಿದು ಕೊಲೆ ಮಾಡಲಾಗಿದೆ.
ದೊಡ್ಡಬಳ್ಳಾಪುರ (ಬೆಂಗಳೂರು ಗ್ರಾಮಾಂತರ) : ಫೋಟೋಶೂಟ್ ಮಾಡುವ ವೇಳೆ ಎರಡು ಗುಂಪುಗಳ ನಡುವೆ ಜಗಳವಾಗಿದ್ದು, ಗಲಾಟೆಯ ಅವೇಶದಲ್ಲಿ ಯುವಕನ ಎದೆಗೆ ಚಾಕುವಿನಿಂದ ಇರಿದು ಕೊಲೆ ಮಾಡಲಾಗಿದೆ.
ದೊಡ್ಡಬಳ್ಳಾಪುರ ತಾಲೂಕಿನ ರಾಮೇಶ್ವದ ಬಳಿ ಇರುವ ಡಾಬಾದ ಮುಂಭಾಗದಲ್ಲಿ ಭಾನುವಾರ ಸಂಜೆ ಘಟನೆ ನಡೆದಿದ್ದು, ಘಟನೆಯಲ್ಲಿ ದೊಡ್ಡಬಳ್ಳಾಪುರ ನರಗದ ಕಚೇರಿಪಾಳ್ಯದ ನಿವಾಸಿ ಸೂರ್ಯ (22) ಕೊಲೆಗೀಡಾಗಿದ್ದಾನೆ.
ಮೃತ ಯುವಕ ಐಟಿಐ ವಿದ್ಯಾರ್ಥಿಯಾಗಿದ್ದು, ದೀಪಾವಳಿಯ ರಜೆ ಹಿನ್ನೆಲೆ ಫೋಟೋಶೂಟ್ಗಾಗಿ ಹೋಗಿದ್ದ ವೇಳೆ ಘಟನೆ ನಡೆದಿದೆ. ಕೊಲೆಯಾದ ಯುವಕ ಸೂರ್ಯ ಸಾಮಾಜಿಕ ಜಾಲತಾಣಗಳಲ್ಲಿ ರೀಲ್ಸ್ ಗಳನ್ನು ಮಾಡುತ್ತಿದ್ದನು. ಹೀಗಾಗಿ ರೀಲ್ಸ್ಗಾಗಿ ವಿಡಿಯೋ ಮತ್ತು ಫೋಟೋ ಶೂಟ್ ಮಾಡಲು ಸ್ನೇಹಿತರ ಜೊತೆ ರಾಮೇಶ್ವರ ಗ್ರಾಮದ ಬಳಿಯ ಡಾಬಾಕ್ಕೆ ಹೋಗಿದ್ದನು.
ಅಲ್ಲಿ ಡಾಬಾದ ಮುಂಭಾಗ ಅಲಂಕಾರಿಕ ಸೀನರಿ ಮುಂದೆ ಫೋಟೋಶೂಟ್ ಮಾಡಲಾಗುತ್ತಿತ್ತು. ಈ ವೇಳೆ ಯುವಕರ ಮತ್ತೊಂದು ಗುಂಪು ಫೋಟೋ ತೆಗೆಯುವಂತೆ ಕಿರಿಕ್ ತೆಗೆದಿದೆ. ಈ ಗಲಾಟೆಯಲ್ಲಿ ಅಪರಿಚಿತ ಗ್ಯಾಂಗ್ನಲ್ಲಿದ್ದ ಯುವಕನೊಬ್ಬ ಸೂರ್ಯನ ಎದೆಗೆ ಚಾಕುವಿನಿಂದ ಚುಚ್ಚಿದ್ದಾನೆ. ಗಾಯಗೊಂಡಿದ್ದ ಸೂರ್ಯನನ್ನು ಆಸ್ಪತ್ರೆಗೆ ಸಾಗಿಸಲಾಗಿತ್ತು. ಆದರೆ ತೀವ್ರ ರಕ್ತಸ್ರಾವದಿಂದ ಸೂರ್ಯ ಸಾವನ್ನಪ್ಪಿದ್ದಾನೆ. ಈ ಸಂಬಂಧ ದೊಡ್ಡಬೆಳವಂಗಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳ ಪತ್ತೆಗಾಗಿ ಪೊಲೀಸರು ಕಾರ್ಯಾಚರಣೆ ಕೈಗೊಂಡಿದ್ದಾರೆ.