ಹಿಮಾಚಲ – ಚೀನಾ ಗಡಿಯಲ್ಲಿ ಯೋಧರೊಂದಿಗೆ ದೀಪಾವಳಿ ಆಚರಿಸಿದ ಪ್ರಧಾನಿ ಮೋದಿ
1 min readಹಿಮಾಚಲ ಪ್ರದೇಶದ ಲೇಪ್ಚಾ ಗ್ರಾಮಕ್ಕೆ ಭೇಟಿ ನೀಡಿದ ಪ್ರಧಾನಿ ನರೇಂದ್ರ ಮೋದಿ ಅವರು ಯೋಧರೊಂದಿಗೆ ದೀಪಾವಳಿ ಹಬ್ಬವನ್ನು ಆಚರಿಸಿದರು.
ಲೇಪ್ಚಾ(ಹಿಮಾಚಲ ಪ್ರದೇಶ): ದೇಶಾದ್ಯಂತ ಇಂದು ದೀಪಾವಳಿ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಗುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಹಲವರು ಬೆಳಕಿನ ಹಬ್ಬಕ್ಕೆ ದೇಶವಾಸಿಗಳಿಗೆ ಶುಭಾಶಯ ಕೋರಿದ್ದಾರೆ.
ಇದರ ನಡುವೆ ಪ್ರಧಾನಿ ನರೇಂದ್ರ ಮೋದಿ ಪ್ರತಿ ಬಾರಿಯಂತೆ ಈ ಬಾರಿಯೂ ಯೋಧರ ಜೊತೆ ದೀಪಾವಳಿ ಆಚರಿಸಿದರು. ಹಿಮಾಚಲ ಪ್ರದೇಶದ ಲೇಪ್ಚಾ ಗ್ರಾಮಕ್ಕೆ ಭೇಟಿ ನೀಡಿದ ಪ್ರಧಾನಿ ಮೋದಿ, ಇಲ್ಲಿನ ಯೋಧರ ಜೊತೆ ದೀಪಾವಳಿ ಆಚರಿಸಿ ಸಂಭ್ರಮಿಸಿದರು. ಈ ಬಗ್ಗೆ ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ಪ್ರಧಾನಿ ಮೋದಿ, ನಮ್ಮ ವೀರ ಯೋಧರ ಜೊತೆ ದೀಪಾವಳಿ ಆಚರಿಸಲು ಹಿಮಾಚಲ ಪ್ರದೇಶದ ಲೇಪ್ಚಾ ಗ್ರಾಮಕ್ಕೆ ತಲುಪಿರುವುದಾಗಿ ಪೋಸ್ಟ್ ಮಾಡಿದ್ದಾರೆ.
ಯೋಧರೊಂದಿಗೆ ದೀಪಾವಳಿ ಆಚರಿಸಿದ ಮೋದಿ: ಹಿಮಾಚಲ ಪ್ರದೇಶದ ಚೀನಾ ಗಡಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ದೀಪಾವಳಿ ಆಚರಿಸಿದರು. ಹಿಮಾಚಲ ಪ್ರದೇಶವು ಚೀನಾದೊಂದಿಗೆ ಸುಮಾರು 260 ಕಿಮೀ ಗಡಿಯನ್ನು ಹಂಚಿಕೊಂಡಿದೆ. ಕಿನೌರ್ ಜಿಲ್ಲೆಯು ಚೀನಾದೊಂದಿಗೆ 140 ಕಿಮೀ ಗಡಿ ಹಂಚಿಕೊಂಡಿದ್ದು, ಲಾಹೌಲ್ ಮತ್ತು ಸ್ಪಿತಿ ಜಿಲ್ಲೆಯು 80 ಕಿಮೀನಷ್ಟು ಗಡಿ ಭಾಗವನ್ನು ಹಂಚಿಕೊಂಡಿದೆ. ಈ ಸಂಬಂಧ ಲೇಪ್ಚಾ ಗ್ರಾಮದಲ್ಲಿ ಇಂಡೋ – ಟಿಬೆಟನ್ ಗಡಿ ಪೊಲೀಸ್ ಮತ್ತು ಭಾರತೀಯ ಸೇನಾ ಕ್ಯಾಂಪ್ ಮಾಡಲಾಗಿದೆ. ಗಡಿ ಭಾಗದ ಒಟ್ಟು 20 ಕಡೆಗಳಲ್ಲಿ ಇಂಡೋ – ಟಿಬೆಟನ್ ಗಡಿ ಪೊಲೀಸ್ ಭದ್ರತಾ ಪಡೆಗಳನ್ನು ನಿಯೋಜಿಸಲಾಗಿದೆ.
ಪ್ರತಿ ವರ್ಷವು ಪ್ರಧಾನಿ ನರೇಂದ್ರ ಮೋದಿ ಅವರು ಯೋಧರೊಂದಿಗೆ ದೀಪಾವಳಿ ಹಬ್ಬವನ್ನು ಆಚರಿಸಿಕೊಂಡು ಬರುತ್ತಿದ್ದಾರೆ. ಕಳೆದ ವರ್ಷ ಕಾರ್ಗಿಲ್ನಲ್ಲಿ ಸೇನಾಪಡೆಗಳೊಂದಿಗೆ ದೀಪಾವಳಿ ಆಚರಿಸಿದ್ದರು. ಈ ವೇಳೆ ದೀಪಾವಳಿ ಎಂದರೆ ಭಯೋತ್ಪಾದನೆಯನ್ನು ಅಂತ್ಯಗೊಳಿಸುವ ಹಬ್ಬ. ಕಾರ್ಗಿಲ್ ಮಾಡಿ ತೋರಿಸಿತ್ತು ಎಂದು ಹೇಳಿದ್ದರು.
2019ರಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಜಮ್ಮು ಮತ್ತು ಕಾಶ್ಮೀರದ ರಾಜೌರಿ ಜಿಲ್ಲೆಯಲ್ಲಿರುವ ಗಡಿ ನಿಯಂತ್ರಣ ರೇಖೆಯಲ್ಲಿ ಹಬ್ಬವನ್ನು ಆಚರಿಸಿದ್ದರು. ಈ ವೇಳೆ ಮಾತನಾಡಿದ್ದ ಅವರು, ಗಡಿ ಕಾಯುವ ಯೋಧರು ನಮ್ಮ ಕುಟುಂಬ ಇದ್ದಂತೆ. ಹಬ್ಬದ ಸಂದರ್ಭದಲ್ಲಿಯೂ ದೇಶಕ್ಕಾಗಿ ಗಡಿ ಕಾಯುತ್ತಿದ್ದಾರೆ ಎಂದಿದ್ದರು. ಇದರ ಜೊತೆಗೆ ಪಠಾಣ್ ಕೋಟ್ನಲ್ಲಿರುವ ವಾಯುದಳಕ್ಕೆ ಭೇಟಿ ನೀಡಿ ಯೋಧರಿಗೆ ದೀಪಾವಳಿ ಶುಭಾಶಯ ಕೋರಿದ್ದರು.
ಹಿಮಾಚಲ- ಚೀನಾ ಗಡಿಯಲ್ಲಿ ಯೋಧರೊಂದಿಗೆ ದೀಪಾವಳಿ ಆಚರಿಸಿದ ಪ್ರಧಾನಿ ಮೋದಿ
2018ರಲ್ಲಿ ಉತ್ತರಾಖಂಡ್ನ ಹರ್ಸಿಲ್ನಲ್ಲಿ ಭಾರತೀಯ ಸೈನಿಕರು ಮತ್ತು ಇಂಡೋ ಟಿಬೆಟನ್ ಗಡಿ ಪೊಲೀಸ್ ಸಿಬ್ಬಂದಿ ಜೊತೆ ದೀಪಾವಳಿ ಆಚರಿಸಿದ್ದರು. ಬಳಿಕ ಕೇದಾರನಾಥಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದಿದ್ದರು. 2017ರಲ್ಲಿ ಜಮ್ಮು ಮತ್ತು ಕಾಶ್ಮೀರದ ಬಂಡಿಪೋರಾ ಜಿಲ್ಲೆಯ ಗುರೆಝ್ ವ್ಯಾಲಿಯಲ್ಲಿ ಭಾರತೀಯ ಸೇನಾ ಯೋಧರು ಮತ್ತು ಗಡಿ ಭದ್ರತಾ ಪಡೆಗಳೊಂದಿಗೆ ದೀಪಾವಳಿ ಆಚರಿಸಿದ್ದರು. 2016ರಲ್ಲಿ ಹಿಮಾಚಲಪ್ರದೇಶದಲ್ಲಿ ಮತ್ತು 2015ರಲ್ಲಿ ಪಂಜಾಬ್ ಗಡಿಯಲ್ಲಿ ದೀಪಾವಳಿ ಆಚರಿಸಿದ್ದರು. 2014ರಲ್ಲಿ ಸಿಯಾಚಿನ್ಗೆ ಭೇಟಿ ನೀಡಿದ್ದ ಮೋದಿ ಅಲ್ಲಿನ ಯೋಧರೊಂದಿಗೆ ದೀಪಾವಳಿ ಆಚರಿಸಿದ್ದರು. ಗುಜರಾತ್ ಸಿಎಂ ಆಗಿದ್ದಾಗಿನಿಂದಲೂ ಮೋದಿಯವರು ಸೇನಾ ಯೋಧರೊಂದಿಗೆ ದೀಪಾವಳಿ ಹಬ್ಬವನ್ನು ಆಚರಿಸಿಕೊಂಡು ಬರುತ್ತಿದ್ದಾರೆ.