ಭೂ ವಿಜ್ಞಾನಿ ಪ್ರತಿಮಾ ಹತ್ಯೆ: ಕೊಲೆ ಮಾಡಿ ಮುಡಿ ಕೊಡಲು ಹೋಗಿದ್ದ ಚಾಲಕ ಕಿರಣ್!
1 min readಹಿರಿಯ ಭೂ ವಿಜ್ಞಾನಿ ಕೆ.ಎಸ್. ಪ್ರತಿಮಾ ಅವರನ್ನು ಕೊಂದು ಪರಾರಿಯಾಗಿದ್ದ ಆರೋಪಿ ಕಿರಣ್‌ನನ್ನು ದಕ್ಷಿಣ ವಿಭಾಗದ ಪೊಲೀಸರು ಬಂಧಿಸಿದ್ದಾರೆ.
ಜಂಬೂ ಸವಾರಿ ದಿಣ್ಣೆಯ ನಿವಾಸಿ ಕಿರಣ್, ಪ್ರತಿಮಾ ಬಳಿ ಕಾರು ಚಾಲಕನಾಗಿ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದ.
ಈತನನ್ನು ಹಲವು ದಿನಗಳ ಹಿಂದೆ ಕೆಲಸದಿಂದ ತೆಗೆಯಲಾಗಿತ್ತು. ವಾಪಸು ಕೆಲಸಕ್ಕೆ ತೆಗೆದುಕೊಳ್ಳುವಂತೆ ಪ್ರತಿಮಾ ಅವರ ಬೆನ್ನು ಬಿದ್ದಿದ್ದ. ಆದರೆ, ಪ್ರತಿಮಾ ಕೆಲಸಕ್ಕೆ ತೆಗೆದುಕೊಂಡಿರಲಿಲ್ಲ. ಅದೇ ಕಾರಣಕ್ಕೆ ಕೋಪಗೊಂಡು ಆರೋಪಿ ಕೃತ್ಯ ಎಸಗಿದ್ದನೆಂದು ಪೊಲೀಸರು ಹೇಳಿದರು.
ಶನಿವಾರ ರಾತ್ರಿ ಕೊಲೆ ಮಾಡಿದ್ದ ಈತ, ಮುಡಿ ಕೊಡಲು ಮಲೆ ಮಹದೇಶ್ವರ ಬೆಟ್ಟಕ್ಕೆ ಸ್ನೇಹಿತರ ಜೊತೆ ಹೋಗಿದ್ದ. ಭಾನುವಾರ ಮಧ್ಯಾಹ್ನವೇ ಮಹದೇಶ್ವರ ಬೆಟ್ಟಕ್ಕೆ ಹೋಗಿದ್ದ ಪೊಲೀಸರು, ಕಿರಣ್‌ನನ್ನು ಬಂಧಿಸಿದ್ದಾರೆ ಎಂದು ತಿಳಿಸಿದರು.
ಕೆಲಸದಿಂದ ತೆಗೆದಿದ್ದರಿಂದ ಕೋಪಗೊಂಡು ಕೊಲೆ ಮಾಡಿದ್ದಾಗಿ ಆರೋಪಿ ಹೇಳಿಕೆ ನೀಡಿದ್ದಾನೆ. ಈತನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ಕಸ್ಟಡಿಗೆ ಪಡೆಯಲು ಅರ್ಜಿ ಸಲ್ಲಿಸಲಾಗುವುದು ಎಂದು ಪೊಲೀಸರು ಹೇಳಿದರು.