ಕುಕ್ಕೆ ಸುಬ್ರಮಣ್ಯ, ಧರ್ಮಸ್ಥಳದ ಭಕ್ತರಿಗೊಂದು ಮನವಿ
1 min readಮಂಗಳೂರು, ನವೆಂಬರ್ 06: ವಿಜಯಪುರ-ಮಂಗಳೂರು ರೈಲಿನ ವೇಳಾಪಟ್ಟಿ ಪರಿಷ್ಕರಣೆ ಮಾಡಬೇಕು ಮತ್ತು ಈ ರೈಲನ್ನು ಮಂಗಳೂರು ಸೆಂಟ್ರಲ್ ತನಕ ವಿಸ್ತರಣೆ ಮಾಡಬೇಕು ಎಂದು ಬೇಡಿಕೆ ಮುಂದಿಟ್ಟುಕೊಂಡು ಆನ್‌ಲೈನ್ ಸಹಿ ಅಭಿಯಾನ ನಡೆಸಲಾಗುತ್ತಿದೆ. ಇದಕ್ಕೆ ಉತ್ತಮ ಪ್ರತಿಕ್ರಿಯೆಯೂ ಸಿಕ್ಕಿದೆ.
ಆನ್‌ಲೈನ್ ಸಹಿ ಅಭಿಯಾನ ಆರಂಭಿಸಿರುವ Dakshina Kannada Railway Users ಇದುವರೆಗೂ 890 ಸಹಿಗಳು ಸಂಗ್ರಹಗೊಂಡಿದೆ. ನಿಮ್ಮ ಬೆಂಬಲ ಹೀಗೆ ಇರಲಿ ಎಲ್ಲರೂ ಸಹಿ ಮಾಡುವ ಮೂಲಕ ಅಭಿಯಾನವನ್ನು ಬೆಂಬಲಿಸಿ ಎಂದು ಸಾಮಾಜಿಕ ಜಾಲತಾಣದ ಮೂಲಕ ಮನವಿ ಮಾಡಿದೆ.
ದೇವಾಲಯದ ಭಕ್ತರಿಗೆ ಮನವಿ ಆನ್‌ಲೈನ್ ಸಹಿ ಅಭಿಯಾನಕ್ಕೆ ಬೆಂಬಲ ನೀಡುವಂತೆ ಕುಕ್ಕೆ ಸುಬ್ರಮಣ್ಯ ಮತ್ತು ಧರ್ಮಸ್ಥಳಕ್ಕೆ ಆಗಮಿಸುವ ಭಕ್ತರಿಗೆ ಮನವಿ ಮಾಡಲಾಗಿದೆ. ಈ ಕುರಿತು ಫೇಸ್‌ಬುಕ್ ಪೋಸ್ಟ್ ಹಾಕಲಾಗಿದೆ, ಸಹಿ ಮಾಡಲು ಲಿಂಕ್ ಸಹ ನೀಡಲಾಗಿದೆ.
ಫೇಸ್‌ಬುಕ್ ಪೋಸ್ಟ್‌ನಲ್ಲಿ ಕುಕ್ಕೆ ಶ್ರೀ ಸುಬ್ರಹ್ಮಣ್ಯ ಹಾಗೂ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ವಿಜಯಪುರ, ಗದಗ, ಬಾಗಲಕೋಟೆ, ಹುಬ್ಬಳ್ಳಿ, ಹಾವೇರಿ, ದಾವಣಗೆರೆ, ಚಿಕ್ಕಮಗಳೂರು, ಹಾಸನ ಸೇರಿ ನೆರೆ ಜಿಲ್ಲೆಗಳ ಭಾಗಗಳಿಂದ ರೈಲಿನಲ್ಲಿ ಬರುವ ಭಕ್ತಾದಿಗಳ ಬಳಿ ನಮ್ಮದೊಂದು ಮನವಿ ಎಂದು ತಿಳಿಸಲಾಗಿದೆ.
ಪ್ರಸ್ತುತ ಉತ್ತರ ಕರ್ನಾಟಕ ಹಾಗೂ ಕರಾವಳಿ ಕರ್ನಾಟಕದ ಮಧ್ಯೆ ರೈಲು ಸಂಪರ್ಕ ಕಲ್ಪಿಸುತ್ತಿರುವ ರೈಲು ಎಂದರೆ ಅದು ವಿಜಯಪುರ-ಮಂಗಳೂರು ರೈಲು. ಈ ರೈಲು ವಿಜಯಪುರದಿಂದ ಮಂಗಳೂರಿಗೆ ಸಂಚರಿಸುವ ರೈಲು ಸಂಖ್ಯೆ 07377 ವಿಜಯಪುರ-ಮಂಗಳೂರು ಜಂಕ್ಷನ್ ಎಕ್ಸ್‌ಪ್ರೆಸ್ ವಿಶೇಷ ರೈಲು ವಿಜಯಪುರದಿಂದ ಪ್ರತಿದಿನ ಸಂಜೆ 6:35ಕ್ಕೆ ಹೊರಡಲಿದೆ.
ರೈಲು ರಾತ್ರಿ 11:55ಕ್ಕೆ ಶ್ರೀ ಸಿದ್ಧರೂಡ ಸ್ವಾಮೀಜಿ ಹುಬ್ಬಳ್ಳಿ ಜಂಕ್ಷನ್ ರೈಲು ನಿಲ್ದಾಣ ತಲುಪುತ್ತದೆ. ಅಲ್ಲಿಂದ ರಾತ್ರಿ 12:05ಕ್ಕೆ ಹೊರಟು ಮರುದಿನ ಬೆಳಗ್ಗೆ 10:10ಕ್ಕೆ ಸುಬ್ರಹ್ಮಣ್ಯ ರೋಡ್, ಮಧ್ಯಾಹ್ನ 12:40ಕ್ಕೆ ಮಂಗಳೂರು ಜಂಕ್ಷನ್ ತಲುಪುತ್ತದೆ. ಮಂಗಳೂರು ಜಂಕ್ಷನ್‌ನಿಂದ ರೈಲು ಸಂಖ್ಯೆ 07378 ಮಂಗಳೂರು ಜಂಕ್ಷನ್-ವಿಜಯಪುರ ಎಕ್ಸ್‌ಪ್ರೆಸ್ ವಿಶೇಷ ರೈಲು ಮಧ್ಯಾಹ್ನ 2:55ಕ್ಕೆ ಹೊರಡಲಿದೆ.
ಸಂಜೆ 4:55ಕ್ಕೆ ಸುಬ್ರಹ್ಮಣ್ಯ ರೋಡ್, ಮರುದಿನ ಮುಂಜಾನೆ 3:35ಕ್ಕೆ ಶ್ರೀ ಸಿದ್ಧರೂಡ ಸ್ವಾಮೀಜಿ ಹುಬ್ಬಳ್ಳಿ ಜಂಕ್ಷನ್ ರೈಲು ನಿಲ್ದಾಣ ತಲುಪುತ್ತದೆ. ಅಲ್ಲಿಂದ ಮುಂಜಾನೆ 3:45ಕ್ಕೆ ಹೊರಟು ಬೆಳಗ್ಗೆ 9:35ಕ್ಕೆ ವಿಜಯಪುರ ತಲುಪುತ್ತದೆ ಎಂದು ವಿವರಣೆ ನೀಡಲಾಗಿದೆ. ಬಾಗಲಕೋಟೆ, ಗದಗ, ಹಾವೇರಿ, ದಾವಣಗೆರೆ, ಕಡೂರು, ಅರಸೀಕೆರೆ, ಹಾಸನ, ಸಕಲೇಶಪುರ, ಸುಬ್ರಹ್ಮಣ್ಯ ರೋಡ್, ಕಬಕ ಪುತ್ತೂರು ಮೂಲಕ ಹಾದುಹೋಗುವ ಈ ರೈಲು ತನ್ನ ಮಾರ್ಗದ ಪ್ರಮುಖ ರೈಲು ನಿಲ್ದಾಣ, ಪಟ್ಟಣಗಳಲ್ಲಿ ನಿಲ್ಲುತ್ತದೆ.
ಪ್ರತಿದಿನ ಸಾವಿರಾರು ಜನರನ್ನು ಕರಾವಳಿ ಕರ್ನಾಟಕ ಹಾಗು ಉತ್ತರ ಕರ್ನಾಟಕದ ಜೊತೆ ಸಂಪರ್ಕಿಸುತ್ತದೆ ಜೊತೆಗೆ ಈ ರೈಲಿನಲ್ಲಿ ಪ್ರತಿದಿನ ಅದೆಷ್ಟೋ ಭಕ್ತಾದಿಗಳು ಸುಬ್ರಹ್ಮಣ್ಯ ರೋಡ್ ತನಕ ಬಂದು ಅಲ್ಲಿಂದ ಕುಕ್ಕೆ ಸುಬ್ರಹ್ಮಣ್ಯ ಹಾಗು ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಪ್ರಯಾಣಿಸಿ ದೇವರ ದರ್ಶನ ಪಡೆದು ಪುನೀತರಾಗುತ್ತಿದ್ದಾರೆ ಎಂದು ವಿವರಿಸಲಾಗಿದೆ.
ಆದರೆ ಈ ರೈಲಿನ ವೇಳಾಪಟ್ಟಿ ಪ್ರಯಾಣಿಕರಿಗೆ ಅನುಕೂಲವಲ್ಲದ ಕಾರಣ ರೈಲಿನ ವೇಳಾಪಟ್ಟಿಯನ್ನು ಪರಿಷ್ಕರಿಸಬೇಕು ಹಾಗು ಮಂಗಳೂರಿನ ಮುಖ್ಯ ರೈಲು ನಿಲ್ದಾಣವಾದ ಮಂಗಳೂರು ಸೆಂಟ್ರಲ್ ತನಕ ರೈಲು ಓಡಿಸಬೇಕೆಂಬ ಬೇಡಿಕೆ ಬಹಳ ಸಮಯದಿಂದ ಇದೆ. ನೀವೇ ಆಲೋಚಿಸಿ ನೋಡಿ ಈ ರೈಲು ಸುಬ್ರಹ್ಮಣ್ಯ ರೋಡ್ ನಿಲ್ದಾಣಕ್ಕೆ ಬೆಳಗ್ಗೆ 10:10ಕ್ಕೆ ಬಂದರೆ ಅಲ್ಲಿಂದ ಸುಬ್ರಹ್ಮಣ್ಯ ತಲುಪುವಾಗ 11 ಗಂಟಿ ಆಗುತ್ತದೆ. ನಂತರ ದೇವರ ದರ್ಶನ ಪಡೆದು ಸೇವೆಗಳನ್ನು ಮಾಡಿಸಿ ಸಂಜೆ 4:45ಕ್ಕೆ ಸುಬ್ರಹ್ಮಣ್ಯ ರೋಡ್ ರೈಲು ನಿಲ್ದಾಣ ತಲುಪಬೇಕಾದರೆ ಸಂಜೆ 4 ಗಂಟೆಗೆ ಹೊರಟು ಬರುವುದು ಸ್ವಲ್ಪ ಕಷ್ಟದ ಕೆಲಸ.
ಈ ರೈಲಿನ ವೇಳಾಪಟ್ಟಿ ಪರಿಷ್ಕರಣೆಯ ಬೇಡಿಕೆಯ ಅನುಸಾರ ವಿಜಯಪುರದಿಂದ ಸಂಜೆ 4 ಗಂಟೆಗೆ ಹೊರಟು ರಾತ್ರಿ 9:30ಕ್ಕೆ
ಹುಬ್ಬಳ್ಳಿ,ಮರುದಿನ ಬೆಳಗ್ಗೆ 7:25ಕ್ಕೆ ಸುಬ್ರಹ್ಮಣ್ಯ ರೋಡ್, ಬೆಳಗ್ಗೆ 9:30ಕ್ಕೆ ಮಂಗಳೂರು ಸೆಂಟ್ರಲ್ ತಲುಪಲಿದೆ. ಸಂಜೆ 5 ಗಂಟೆಗೆ ಮಂಗಳೂರು ಸೆಂಟ್ರಲ್‌ನಿಂದ ಹೊರಟು, ಸಂಜೆ 7:05ಕ್ಕೆ ಸುಬ್ರಹ್ಮಣ್ಯ ರೋಡ್, ಮರುದಿನ ಬೆಳಗ್ಗೆ 5 ಗಂಟೆಗೆ ಹುಬ್ಬಳ್ಳಿ ಹಾಗು ಬೆಳಗ್ಗೆ 10:30ಕ್ಕೆ ವಿಜಯಪುರ ತಲುಪಲಿದೆ.
ಇದರಿಂದ ಕುಕ್ಕೆ ಸುಬ್ರಹ್ಮಣ್ಯ ಹಾಗು ಧರ್ಮಸ್ಥಳಕ್ಕೆ ಹೋಗಿ ಬರಲು ಸಾಕಷ್ಟು ಸಮಯ ದೊರಕುವುದು ಅಲ್ಲದೆ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಸಂಜೆ 5 ಗಂಟೆಗೆ ನಡೆಯುವ ಅಶ್ಲೇಷ ಬಲಿ ಸೇವೆಯನ್ನು ಮಾಡಿಸುವವರು ಕೂಡ ಸೇವೆ ಮಾಡಿಸಿ ಸಂಜೆ 7 ಗಂಟೆಯ ಒಳಗೆ ಸುಬ್ರಹ್ಮಣ್ಯ ರೋಡ್ ನಿಲ್ದಾಣ ತಲುಪಿ ಈ ರೈಲಿನಲ್ಲಿ ಹಾಸನ, ಹುಬ್ಬಳ್ಳಿ, ವಿಜಯಪುರ ಕಡೆ ಪ್ರಯಾಣಿಸಬಹುದಾಗಿದೆ. ಹೀಗಾಗಿ ಈ ಬಗ್ಗೆ ನೈರುತ್ಯ ರೈಲ್ವೆ ವಲಯ ಹಾಗು ದಕ್ಷಿಣ ರೈಲ್ವೆ ವಲಯಕ್ಕೆ ಮನವಿ ಮಾಡುವ ಸಲುವಾಗಿ ಹಾಗು ಪ್ರಯಾಣಿಕರ ಬೇಡಿಕೆಯ ಬಗ್ಗೆ ಮನವರಿಕೆ ಮಾಡಲು ಈ ಸಹಿ ಅಭಿಯಾನವನ್ನು ನಾವು ಹಮ್ಮಿಕೊಳ್ಳುತ್ತಿದ್ದೇವೆ. ಈ ಅಭಿಯಾನ ನವೆಂಬರ್ 15ರ ತನಕ ನಡೆಯಲಿದೆ. ಪ್ರಯಾಣಿಕರ ಈ ಬೇಡಿಕೆಯನ್ನು ಈಡೇರಿಸಲು ತಾವು ಕೂಡ ಈ ಸಹಿ ಅಭಿಯಾನದಲ್ಲಿ ಭಾಗಿಯಾಗಿ ಸಹಿ ಮೂಲಕ ಅಭಿಯಾನವನ್ನು ಬೆಂಬಲಿಸಿ ಎಂದು ಮನವಿ ಮಾಡಲಾಗಿದೆ.