3ನೇ ಮಹಾಯುದ್ಧಕ್ಕೆ ಅಧಿಕೃತ ಚಾಲನೆ ನೀಡಿದ ವ್ಲಾದಿಮಿರ್ ಪುಟಿನ್?
1 min readಭೂಮಿ ಮೇಲೆ ಎಲ್ಲಿ ನೋಡಿದ್ರೂ ಯುದ್ಧ.. ಯುದ್ಧ.. ಎಲ್ಲಿ ಕೇಳಿದ್ರೂ ಬಾಂಬ್ ಸದ್ದೇ ಮೊಳಗುತ್ತಿದೆ. ಕೆಲವೇ ವರ್ಷದ ಹಿಂದೆ ನೆಮ್ಮದಿಯಾಗಿದ್ದ ಜಗತ್ತಿಗೆ ಬೆಂಕಿ ಹೊತ್ತಿದೆ. ಇದೇ ಕಾರಣಕ್ಕೆ 3ನೇ ಮಹಾಯುದ್ಧದ ಭಯ ಕೂಡ ಆವರಿಸಿದೆ. ಇದೀಗ, ಆತಂಕ ಹೆಚ್ಚಾಗಿಸುವ ರೀತಿ ರಷ್ಯಾ ಅಧ್ಯಕ್ಷ ಪುಟಿನ್ ಭಯಾನಕ ನಿರ್ಧಾರ ಕೈಗೊಂಡಿದ್ದಾರೆ.
ಅಮೆರಿಕ ವಿರುದ್ಧದ ಕೋಪಕ್ಕೆ ಇಡೀ ಜಗತ್ತನ್ನೇ ನಾಶ ಮಾಡುವ ಹೆಜ್ಜೆ ಇಟ್ಟಿದ್ದಾರೆ.
ಉಕ್ರೇನ್ ಮೇಲೆ ಯುದ್ಧ ಸಾರಿದ ರಷ್ಯಾ ಸೇನೆ ವಿರುದ್ಧ ಅಮೆರಿಕ ಸರ್ಕಾರ ಪರೋಕ್ಷ ದಾಳಿ ನಡೆಸುತ್ತಿದೆ ಎಂಬ ಆರೋಪದ ಬೆನ್ನಲ್ಲೇ, ಪುಟಿನ್ ಸ್ಫೋಟಕ ನಿರ್ಧಾರ ಕೈಗೊಂಡಿದ್ದಾರೆ. ಪರಮಾಣು ಅಸ್ತ್ರಗಳ ಪರೀಕ್ಷೆಯನ್ನ ಮಾಡದೇ ಇರುವಂತೆ ಕೈಗೊಂಡಿದ್ದ ಒಪ್ಪಂದಕ್ಕೆ ಈಗ ಪುಟಿನ್ ಎಳ್ಳುನೀರು ಬಿಟ್ಟು, ಅಮೆರಿಕದ ನಾಯಕರಿಗೆ ಶಾಕ್ ಕೊಟ್ಟಿದ್ದಾರೆ. ಈ ಹಿಂದೆಯೇ ಅಮೆರಿಕ ಜೊತೆ ಸೇರಿ ಸಹಿ ಹಾಕಿದ್ದ, ಸಮಗ್ರ ಪರಮಾಣು ಪರೀಕ್ಷೆ ನಿಷೇಧ ಒಪ್ಪಂದಕ್ಕೆ ಈಗ ರಷ್ಯಾ ಗುಡ್‌ಬೈ ಹೇಳಿದೆ.
ಒಪ್ಪಂದ ನಡೆದಿದ್ದು ಯಾವಾಗ?
ರಷ್ಯಾ ಸೆಪ್ಟೆಂಬರ್ 24, 1996 ರಂದು ನ್ಯೂಯಾರ್ಕ್‌ನಲ್ಲಿ ಒಪ್ಪಂದಕ್ಕೆ ಸಹಿ ಹಾಕಿತ್ತು. ಹಾಗೂ ಮೇ 2000 ರ ಹೊತ್ತಿಗೆ ಇದನ್ನ ಅನುಮೋದನೆ ಮಾಡಲಾಗಿತ್ತು. ಹೀಗೆ ಜಗತ್ತಿಗೆ ಎದುರಾಗಿದ್ದ ಮಹಾ ಕಂಟಕ ತಪ್ಪಿ ಹೋಗಿದೆ ಎಂದು ನೆಮ್ಮದಿಯ ನಿಟ್ಟುಸಿರು ಬಿಡುವ ಸಮಯದಲ್ಲೇ, ರಷ್ಯಾ ಶಾಕ್ ನೀಡಿದೆ. ಅಮೆರಿಕ ನಾಯಕರು ಉಕ್ರೇನ್‌ಗೆ ಬೆನ್ನೆಲುಬಾಗಿ ನಿಂತು, ರಷ್ಯಾದ ವಿರುದ್ಧ ಪರೋಕ್ಷವಾಗಿ ಯುದ್ಧ ಮಾಡುತ್ತಿದ್ದಾರೆ ಎಂಬುದು ರಷ್ಯಾ ಆರೋಪ. ಈ ಕಾರಣ ರಷ್ಯಾ ತಿರುಗಿಬಿದ್ದು, ಅಮೆರಿಕದ ವಿರುದ್ಧ ರಿವೇಂಜ್ ತೆಗೆದುಕೊಳ್ಳಲು ಮುಂದಾಗಿದೆ.
ಮೊದಲ ಪರಮಾಣು ಬಾಂಬ್ ದಾಳಿ!
ಅದು 1945ರ ಆಗಸ್ಟ್ 6 & ಆಗಸ್ಟ್ 9, ಮನುಷ್ಯ ಎಷ್ಟು ಡೆಂಜರಸ್ ಅನ್ನೋದನ್ನ ತೋರಿಸಿದ್ದ. ನೋಡ ನೋಡುತ್ತಲೇ ಜಪಾನ್ ದೇಶದ ಹಿರೋಷಿಮಾ ಹಾಗೂ ನಾಗಸಾಕಿ ಮೇಲೆ ಪರಮಾಣು ಬಾಂಬ್ ಹಾಕಿದ್ದ. ಅಮೆರಿಕ ಮಾಡಿದ ಈ ಕೆಲಸ ಇಡೀ ಜಗತ್ತನ್ನ ಬೆಚ್ಚಿಬೀಳಿಸಿತ್ತು ಮುಕ್ಕಾಲು ಶತಮಾನದ ಹಿಂದೆ ನಡೆದಿದ್ದ ಈ ಘಟನೆಯಿಂದ ಈವತ್ತಿಗೂ ಜಪಾನ್ ಜನರು ನರಳುತ್ತಿದ್ದಾರೆ. ಆದರೆ ಜಗತ್ತಿನ ಬೇರೆ ದೇಶಗಳು ಮಾತ್ರ ಈ ಘಟನೆಯಿಂದ ಪಾಠ ಕಲಿತಿಲ್ಲ, ಅಂತಾ ಕಾಣುತ್ತಿದೆ. ಇದೇ ಕಾರಣಕ್ಕೆ ರಷ್ಯಾ ಹಾಗೂ ಅಮೆರಿಕ ಮಧ್ಯೆ ದಿಢೀರ್ ಪರಮಾಣು ಅಸ್ತ್ರಗಳ ಪರೀಕ್ಷೆಗೆ ರೇಸ್ ಶುರುವಾಗಿದೆ. ಅದ್ರಲ್ಲೂ ರಷ್ಯಾ ಅಧ್ಯಕ್ಷ ಪುಟಿನ್ ಈಗ ಕೈಗೊಂಡ ನಿರ್ಧಾರವು ಸಂಚಲನ ಸೃಷ್ಟಿಮಾಡಿದೆ.
ಯಾರ ಬಳಿ ಎಷ್ಟು ಪರಮಾಣು ಬಾಂಬ್?
ಈಗಿನ ಲೆಕ್ಕಾಚಾರದಂತೆ, ಜಗತ್ತಿನಾದ್ಯಂತ 13,000 ಪರಮಾಣು ಅಸ್ತ್ರ ಶೇಖರಣೆಯಾಗಿವೆ. ಈ ಪೈಕಿ ರಷ್ಯಾ ಹಾಗೂ ಅಮೆರಿಕ ಬಳಿ ಮುಕ್ಕಾಲು ಭಾಗಕ್ಕೂ ಹೆಚ್ಚು ಅಸ್ತ್ರಗಳು ಇವೆ. ಆದ್ರೆ ಶೀತಲ ಸಮರದ ಸಮಯದಲ್ಲಿ ಈ ಸಂಖ್ಯೆ ಸುಮಾರು 60,000 ಕ್ಕೂ ಹೆಚ್ಚು ಇತ್ತು. ಇದಕ್ಕೆ ಹೋಲಿಕೆ ಮಾಡಿದ್ರೆ ಪರಿಸ್ಥಿತಿ ಸುಧಾರಿಸುತ್ತಿದೆ ಬಿಡು ಎನ್ನಲಾಗಿತ್ತು. ಇನ್ನೇನು ಎಲ್ಲವೂ ತಣ್ಣಗಾಗಿ, ಈ ಜಗತ್ತಿನಿಂದ ಪರಮಾಣು ಅಸ್ತ್ರಗಳು ಮಾಯವಾಗುತ್ತವೆ ಅಂತ ಎಲ್ಲರೂ ಅಂದುಕೊಂಡರು. ಆದರೆ ಈಗ ಆಗುತ್ತಿರುವುದು ಏನು ಹೇಳಿ? ಮತ್ತದೆ ಪರಮಾಣು ಬಾಂಬ್‌ಗಳ ಪರೀಕ್ಷೆಯನ್ನ ನಡೆಸುವ ಪ್ರಯತ್ನ!
ಬುಡಕ್ಕೆ ಬಾಂಬ್ ಇಡ್ತಾನೆ ಸರ್ವಾಧಿಕಾರಿ!
ಇದೀಗ ರಷ್ಯಾ ಕೈಗೊಂಡಿರುವ ಕ್ರಮವು ಮುಂದೆ ಜಗತ್ತಿನಾದ್ಯಂತ ಪರಮಾಣು ಶಸ್ತ್ರಾಸ್ತ್ರಗಳ ರೇಸ್‌ಗೆ ಕಾರಣವಾಗುವ ಸಾಧ್ಯತೆ ದಟ್ಟವಾಗಿದೆ. ಅದರಲ್ಲೂ, ಉ.ಕೊರಿಯಾ ಸರ್ವಾಧಿಕಾರಿ ಮತ್ತೆ ಭಾರಿ ಪ್ರಮಾಣದಲ್ಲಿ ಅಣ್ವಸ್ತ್ರ ಸಾಮರ್ಥ್ಯದ ಕ್ಷಿಪಣಿಗಳನ್ನ ಪರೀಕ್ಷೆ ಮಾಡಬಹುದು. 1 ವರ್ಷದಲ್ಲಿ 100ಕ್ಕೂ ಹೆಚ್ಚು ಕ್ಷಿಪಣಿಗಳನ್ನು ಸಮುದ್ರಕ್ಕೆ ಉಡಾಯಿಸಿರುವ ಉತ್ತರ ಕೊರಿಯಾ ಸರ್ವಾಧಿಕಾರಿ, ಅಮೆರಿಕ ವಿರುದ್ಧ ಕೆಂಡ ಉಗುಳುತ್ತಿದ್ದಾನೆ. ಈಗ ರಷ್ಯಾ ಇಟ್ಟಿರುವ ಹೆಜ್ಜೆ, ಕಿಮ್ ಜಾಂಗ್ ಉನ್ ಪಾಲಿಗೆ ವರವಾಗುವ ಸಾಧ್ಯತೆ ಇದೆ. ಹೀಗಾಗಿ ಜಗತ್ತು ವೇಗವಾಗಿಯೇ 3ನೇ ಮಹಾಯುದ್ಧದ ಬಲೆಯಲ್ಲಿ ಸಿಲುಕುತ್ತಿದೆ.