ನೇಪಾಳದಲ್ಲಿ ಪ್ರಬಲ ಭೂಕಂಪ: ಸಾವಿನ ಸಂಖ್ಯೆ 70ಕ್ಕೆ ಏರಿಕೆ, ದೆಹಲಿಯಲ್ಲೂ ಕಂಪಿಸಿದ ಭೂಮಿ
1 min readನವದೆಹಲಿ/ಕಾಠ್ಮಂಡು: ಪರ್ವತಗಳ ನಾಡು ನೇಪಾಳದಲ್ಲಿ ಶುಕ್ರವಾರ ರಾತ್ರಿ 6.4 ತೀವ್ರತೆಯಲ್ಲಿ ಸಂಭವಿಸಿದ ಭೂಂಪನದಲ್ಲಿ ಮೃತಪಟ್ಟವರ ಸಂಖ್ಯೆ 74ಕ್ಕೇರಿದ್ದು, 140ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ. ಭಾರತದ ರಾಜಧಾನಿ ದೆಹಲಿ ಸೇರಿದಂತೆ ಉತ್ತರದ ಭಾರತದ ಕೆಲವೆಡೆ ಭೂಮಿ ಗಢ ಗಢ ನಡುಗಿದ್ದು, ಸ್ಥಳೀಯ ಜನರು ಭಯಭೀತಗೊಂಡಿದ್ದಾರೆ.
ನೇಪಾಳ ಮಾತ್ರವಲ್ಲದೆ, ಭಾರತದ ದೆಹಲಿ-ಎನ್‌ಸಿಆರ್ ವಲಯ, ಬಿಹಾರ, ಉತ್ತರ ಪ್ರದೇಶ ಮತ್ತು ಮಧ್ಯಪ್ರದೇಶಗಳಲ್ಲಿ ಭೂಕಂಪನವಾಗಿದೆ. ನೇಪಾಳದ ಭೂಕಂಪನ ರಾಷ್ಟ್ರೀಯ ಕೇಂದ್ರ (ಎನ್‌ಸಿಎಸ್)ದ ಪ್ರಕಾರ ಶುಕ್ರವಾರ ರಾತ್ರಿ 11.32 ಕ್ಕೆ 10 ಕಿಮೀ ಆಳದಲ್ಲಿ ಕಂಪನ ಸಂಭವಿಸಿದ್ದು, ನೇಪಾಳದ ಜಾಜರ್ಕೋಟ್ ಜಿಲ್ಲೆಯ ಲಾಮಿದಾಂದಾ ಏರಿಯಾವನ್ನು ಭೂಕಂಪನದ ಕೇಂದ್ರ ಬಿಂದು ಗುರುತಿಸಲಾಗಿದೆ.
ಶುಕ್ರವಾರ ಸಂಭವಿಸಿದ ಭೂಕಂಪವು ದೆಹಲಿ-ಎನ್‌ಸಿಆರ್ ಪ್ರದೇಶದಲ್ಲಿ ಸಂಭವಿಸಿದ ಭೂಕಂಪಗಳ ಸರಣಿಯಲ್ಲಿ ಇತ್ತೀಚಿನದು. ಕೆಲವೇ ದಿನಗಳ ಹಿಂದೆ ಅಂದರೆ, ಅಕ್ಟೋಬರ್ 22ರಂದು 6.1 ತೀವ್ರತೆಯಲ್ಲಿ ನೇಪಾಳದಲ್ಲಿ ಭೂಕಂಪನವಾಗಿತ್ತು. ಧಡಿಂಗ್ ಕ್ಷೇತ್ರ ಭೂಕಂಪನದ ಕೇಂದ್ರ ಬಿಂದುವಾಗಿತ್ತು. ಈ ಕಂಪನದ ಪರಿಣಾಮ ದೆಹಲಿ-ಎನ್‌ಸಿಆರ್ ಮೇಲೂ ಬೀರಿತ್ತು. ಹರಿಯಾಣದಲ್ಲಿ ಅಕ್ಟೋಬರ್ 15ರಂದು 3.1 ತೀವ್ರತೆಯಲ್ಲಿ ಭೂಮಿ ಕಂಪಿಸಿತ್ತು. ಈ ಸಮಯದಲ್ಲೂ ದೆಹಲಿ-ಎನ್‌ಸಿಆರ್ ವಲಯ ಗಢ ಗಢ ನಡುಗಿತ್ತು.
ಅ.3ರಂದು ನೇಪಾಳದಲ್ಲೇ ಸರಣಿ ಭೂಕಂಪಗಳು ಸಂಭವಿಸಿತ್ತು. ಇದಾದ ಕೆಲವೇ ಸಮಯದಲ್ಲಿ ದೆಹಲಿ ಮತ್ತು ಅದರ ಸುತ್ತಮುತ್ತಲಿನ ಪ್ರದೇಶಗಳು ಸೇರಿದಂತೆ ಉತ್ತರ ಭಾರತದ ಹಲವಾರು ಭಾಗಗಳಲ್ಲಿ ಬಲವಾದ
ಕಂಪನಗಳು ಸಂಭವಿಸಿದವು. ಈ ವೇಳೆ ರಿಕ್ಟರ್ ಮಾಪಕದಲ್ಲಿ 6.2ರ ತೀವ್ರತೆ ದಾಖಲಾಗಿತ್ತು.
ಭವಿಷ್ಯದ ಭೂಕಂಪಗಳಿಗೆ ಸಜ್ಜಾಗಿ
ಈ ಹಿಂದೆ ವಾಡಿಯಾ ಇನ್ಸ್ಟಿಟ್ಯೂಟ್ ಆಫ್ ಹಿಮಾಲಯನ್ ಜಿಯಾಲಜಿಯಲ್ಲಿ ಕೆಲಸ ಮಾಡಿದ ಭೂಕಂಪಶಾಸ್ತ್ರಜ್ಞ ಅಜಯ್ ಪೌಲ್ ಮಾತನಾಡಿದ್ದು, ಅ. 3ರಂದು ಸಂಭವಿಸಿದ ಭೂಕಂಪನದ ಕೇಂದ್ರ ಬಿಂದು ಸಮೀಪದಲ್ಲೇ ಶುಕ್ರವಾರ (ನ.3) ಮತ್ತೆ ಭೂಮಿ ಕಂಪಿಸಿದೆ. ಈ ಪ್ರದೇಶವನ್ನು ನೇಪಾಳದ ಕೇಂದ್ರ ಬೆಲ್ಟ್ ಎಂದು ಗುರುತಿಸಿದ್ದು, ಇವು ಸಕ್ರಿಯ ಶಕ್ತಿ ಬಿಡುಗಡೆ ವಲಯಗಳಾಗಿವೆ ಎಂದು ಮಾಹಿತಿ ನೀಡಿದರು. ಅಲ್ಲದೆ, ಪದೇಪದೆ ಭೂಕಂಪನಗಳು ಸಂಭವಿಸುತ್ತಿದ್ದು, ಭವಿಷ್ಯದಲ್ಲಿ ಸಂಭವಿಸುವ ಭೂಕಂಪನಗಳ ಬಗ್ಗೆ ಎಚ್ಚರವಿರಲಿ ಮತ್ತು ಅವುಗಳನ್ನು ಎದುರಿಸಲು ಸಜ್ಜಾಗಿ ಎಂದು ಸಲಹೆ ನೀಡಿದ್ದಾರೆ.
ಪ್ರಧಾನಿ ಸಂತಾಪ
ನೇಪಾಳ ಪ್ರಧಾನಿ ಪುಷ್ಪ ಕಮಲ್ ದಹಲ್ ಅಲಿಯಾಸ್ ಪ್ರಚಂಡ ಅವರು ಭೂಕಂಪನದಲ್ಲಿ ಸಾವಿಗೀಡಾದವರಿಗೆ ಸಂತಾಪ ಸೂಚಿಸಿದ್ದು, ಮೃತರ ಕುಟುಂಬಗಳಿಗೆ ಸಾಂತ್ವಾನ ಹೇಳಿದ್ದಾರೆ. ಶುಕ್ರವಾರ ರಾತ್ರಿ 11.47 ಕ್ಕೆ ಜಾಜರಕೋಟ್‌ನ ರಾಮಿದಂಡಾದಲ್ಲಿ ಸಂಭವಿಸಿದ ಭೂಕಂಪನದಿಂದ ಉಂಟಾದ ಜೀವ ಮತ್ತು ಆಸ್ತಿ ಹಾನಿಯ ಬಗ್ಗೆ ತೀವ್ರ ದುಃಖ ವ್ಯಕ್ತಪಡಿಸಿದ್ದಾರೆ ಮತ್ತು ತಕ್ಷಣದ ರಕ್ಷಣೆ ಹಾಗೂ ಪರಿಹಾರಕ್ಕಾಗಿ ಎಲ್ಲ 3 ಭದ್ರತಾ ಏಜೆನ್ಸಿಗಳನ್ನು ಸಜ್ಜುಗೊಳಿಸಿದ್ದಾರೆ ಎಂದು ನೇಪಾಳ ಪ್ರಧಾನಿ ಕಚೇರಿ ಎಕ್ಸ್ (ಈ ಹಿಂದೆ ಟ್ವಿಟರ್) ಮೂಲಕ ತಿಳಿಸಿದೆ.
ನೇಪಾಳದಲ್ಲಿ, ಆಂಬ್ಯುಲೆನ್ಸ್‌ಗಳು ಜನರಿಗೆ ಚಿಕಿತ್ಸೆ ನೀಡಲು ಧಾವಿಸುತ್ತಿರುವ ದೃಶ್ಯಗಳು ಮತ್ತು ಭೂಕಂಪದಿಂದ ಜನರು ಗಾಯಗೊಂಡಿರುವುದಕ್ಕೆ ಸಂಬಂಧಿಸಿದ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಭೂಕಂಪದ ಕೇಂದ್ರಬಿಂದುವಾಗಿರುವ ಜಾಜರ್‌ಕೋಟ್‌ನಲ್ಲಿ ಅತಿ ಹೆಚ್ಚು ಹಾನಿಯಾಗಿದ್ದು, ಗಾಯಗೊಂಡವರಿಗೆ ಚಿಕಿತ್ಸೆ ನೀಡಲು ತಡರಾತ್ರಿಯಲ್ಲಿ ಆಂಬ್ಯುಲೆನ್ಸ್ ಆಗಮಿಸುತ್ತಿರುವುದನ್ನು ವಿಡಿಯೋ ತೋರಿಸಿದೆ. ಭೂಕಂಪದ ಪರಿಣಾಮ ಮನೆಗಳ ಗೋಡೆಗಳು ಬಿರುಕು ಬಿಟ್ಟಿರುವುದನ್ನು ಅನೇಕ ಚಿತ್ರಗಳು ತೋರಿಸಿದ್ದು, ಸಾಕಷ್ಟು ಆಸ್ತಿಪಾಸ್ತಿಗೆ ಹಾನಿಯಾಗಿದೆ. ಭೂಮಿ ನಡುಗಿದ ಪರಿಗೆ ಮನೆಯೊಳಗೆ ಇದ್ದ ಮಂದಿ ಭಯಭೀತರಾಗಿ ಹೊರಗಟೆ ಓಡೋಡಿ ಬಂದು ಕಿರುಚಾಡಿದ್ದು, ಭೂಕಂಪನಕ್ಕೆ ಸಂಬಂಧಿಸಿದ ವಿಡಿಯೋ ತುಣುಕುಗಳು ಸದ್ಯ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ.