ಗ್ರಾಹಕರ ಕಣ್ಣಲ್ಲಿ ನೀರು ತರಿಸಿದ ಈರುಳ್ಳಿ
1 min readಉಡುಪಿ: ಈರುಳ್ಳಿ ದರ ಒಂದೇ ವಾರದಲ್ಲಿ ದುಪ್ಪಟ್ಟಾಗಿದ್ದು ಗ್ರಾಹಕರ ಕಣ್ಣಲ್ಲಿ ನೀರು ತರಿಸುತ್ತಿದೆ. ಕಳೆದವಾರ ಕೆ.ಜಿಗೆ ₹40 ರಿಂದ ₹50ಕ್ಕೆ ಮಾರಾಟವಾಗುತ್ತಿದ್ದ ಈರುಳ್ಳಿ ಪ್ರಸ್ತುತ ₹75ರಿಂದ ₹80ಕ್ಕೆ ಏರಿಕೆಯಾಗಿದೆ
ರಾಜ್ಯದಾದ್ಯಂತ ತೀವ್ರ ಮಳೆ ಕೊರತೆ ಎದುರಾಗಿರುವುದರಿಂದ ಈರುಳ್ಳಿ ಇಳುವರಿಯಲ್ಲಿ ಭಾರಿ ಕುಸಿತ ಹಾಗೂ ಬೆಳೆ ನಾಶ ದರ ಏರಿಕೆಗೆ ಪ್ರಮುಖ ಕಾರಣ.
ಸದ್ಯಕ್ಕೆ ಈರುಳ್ಳಿ ದರ ಇಳಿಕೆಯಾಗುವ ಲಕ್ಷಣಗಳು ಕಾಣುತ್ತಿಲ್ಲ. ಶೀಘ್ರ ಶತಕದ ಗಡಿ ದಾಟಿದರೂ ಅಚ್ಚರಿ ಇಲ್ಲ ಎನ್ನುತ್ತಾರೆ ವ್ಯಾಪಾರಿಗಳು.
ಜಿಲ್ಲೆಗೆ ಹೊರ ಜಿಲ್ಲೆ ಹಾಗೂ ಮಹಾರಾಷ್ಟ್ರದಿಂದ ಈರುಳ್ಳಿ ಪೂರೈಕೆಯಾಗುತ್ತದೆ. ವಾರದಿಂದ ಈಚೆಗೆ ಈರುಳ್ಳಿಗೆ ವಿಪರೀತ ಬೇಡಿಕೆ ಹೆಚ್ಚಾಗಿದ್ದು ಪೂರೈಕೆ ಕಡಿಮೆಯಾಗಿರುವುದರಿಂದ ದರ ಏರಿಕೆಯಾಗಿದೆ. ಮಾರುಕಟ್ಟೆಗೆ ಬರುತ್ತಿರುವ ಈರುಳ್ಳಿಯ ಗಾತ್ರ ಹಾಗೂ ಗುಣಮಟ್ಟವೂ ಕುಸಿತವಾಗಿದೆ ಎನ್ನುತ್ತಾರೆ ವ್ಯಾಪಾರಿ ವಿಶ್ವನಾಥ್.
ಹೋಟೆಲ್ ಉದ್ಯಮಕ್ಕೆ ಹೆಚ್ಚಿನ ಪ್ರಮಾಣದಲ್ಲಿ ಈರುಳ್ಳಿ ಪೂರೈಕೆಯಾಗುತ್ತಿರುವುದರಿಂದ ದರ ಏರಿಕೆ ಬಿಸಿ ಗ್ರಾಹಕರಿಗೂ ತಟ್ಟುವ ಸಾಧ್ಯತೆಗಳು ಹೆಚ್ಚಾಗಿವೆ. ಹೋಟೆಲ್‌ಗಳಲ್ಲಿ ಈರುಳ್ಳಿ ದೋಸೆ, ಈರುಳ್ಳಿ ಕರಿ, ಈರುಳ್ಳಿ ಬಜ್ಜಿಯ ದರವೂ ಹೆಚ್ಚಾಗಬಹುದು.
ಶುಂಠಿ, ಬೆಳ್ಳುಳ್ಳಿಯೂ ತುಟ್ಟಿ: ಈರುಳ್ಳಿ ಜತೆಗೆ ಮಸಾಲೆ ಪದಾರ್ಥಗಳನ್ನು ಸಿದ್ದಪಡಿಸಲು ಅಗತ್ಯವಾಗಿ ಬೇಕಾಗಿರುವ ಬೆಳ್ಳುಳ್ಳಿ ಹಾಗೂ ಶುಂಠಿ ದರವೂ ಕೈಗೆಟುಕದಷ್ಟು ಹೆಚ್ಚಾಗಿದೆ. ಚಿಲ್ಲರೆ ಮಾರುಕಟ್ಟೆಯಲ್ಲಿ ಕೆ.ಜಿ ಬೆಳ್ಳುಳ್ಳಿಗೆ ₹225ರಿಂದ ₹250 ಇದ್ದರೆ, ಸಗಟು ಮಾರುಕಟ್ಟೆಯಲ್ಲಿ ಕೆ.ಜಿಗೆ ₹180ರಿಂದ ₹200 ಇದೆ. ಶುಂಠಿ ಕೆ.ಜಿ.ಗೆ ₹250 ಇದೆ. ಎರಡೂ ಪದಾರ್ಥಗಳ ದರ 2 ತಿಂಗಳು ಕಳೆದರೂ ಇಳಿಕೆಯಾಗದೆ ಬಹುತೇಕ ಸ್ಥಿರವಾಗಿದೆ ಎನ್ನುತ್ತಾರೆ ವ್ಯಾಪಾರಿಗಳು.
ತರಕಾರಿಗಳೂ ದುಬಾರಿ: ಮಳೆ ಕೊರತೆಯ ಜತೆಗೆ ಸಾಲು ಸಾಲು ಹಬ್ಬಗಳು ಹಾಗೂ ಧಾರ್ಮಿಕ ಕಾರ್ಯಕ್ರಮಗಳ ಸುಗ್ಗಿಯ ಹಿನ್ನೆಲೆಯಲ್ಲಿ ಬಹುತೇಕ ತರಕಾರಿಗಳ ದರ ಗಗನಮುಖಿಯಾಗಿವೆ. ಕಳೆದವಾರ ಕೆ.ಜಿ.ಗೆ ₹10 ರಿಂದ ₹15ಕ್ಕೆ ಸಿಗುತ್ತಿದ್ದ ಟೊಮೆಟೊ ಈ ವಾರ ₹20ರಿಂದ ₹25ಕ್ಕೆ ಮುಟ್ಟಿದೆ. ಬೀನ್ಸ್ ಕೆ.ಜಿ.ಗೆ ₹90ಕ್ಕೆ ತಲುಪಿದೆ.
ನುಗ್ಗೆಯೂ ದುಬಾರಿ: ತಿಂಗಳ ಹಿಂದೆ ಕೆ.ಜಿ.ಗೆ ₹50ರಿಂದ ₹60ಕ್ಕೆ ಸಿಗುತ್ತಿದ್ದ ನುಗ್ಗೆಕಾಯಿ ಪ್ರಸ್ತುತ ₹130ರಿಂದ ₹150ಕ್ಕೆ ಮುಟ್ಟಿದೆ. ನುಗ್ಗೆಯ ದರ ಎರಡು ಪಟ್ಟು ಹೆಚ್ಚಾಗಿರುವುದು ಗ್ರಾಹಕರ ಜೇಬಿಗೆ ಹೊರೆಯಾಗಿದೆ. ಕ್ಯಾರೆಟ್ ಕೆ.ಜಿಗೆ₹ 50, ಆಲೂಗಡ್ಡೆ ₹40, ಎಲೆಕೋಸು ₹20, ಹೂ ಕೋಸು ₹30. ಬೀಟ್‌ರೂಟ್ ₹40, ಮೂಲಂಗಿ ₹55, ಸೌತೆಕಾಯಿ ₹25, ಸೋರೆಕಾಯಿ ₹30, ಮೆಣಸಿನಕಾಯಿ ₹75, ಕ್ಯಾಪ್ಸಿಕಂ ₹75, ಹಾಗಲಕಾಯಿ ₹50, ಬದನೆಕಾಯಿ ₹40, ಸಾಂಬಾರ್ ಸೌತೆ (ಮದ್ರಾಸ್) ₹25, ಬೆಂಗಳೂರು ಬದನೆ ₹30, ಬೂದು ಕುಂಬಳ ₹15 ರಿಂದ ₹20, ಸಿಹಿ ಕುಂಬಳ ₹20 ರಿಂದ ₹25, ಗಡ್ಡೆ (ಯಾಮ್) ಕೆ.ಜಿಗೆ₹ 90, ಈರೇಕಾಯಿ ₹60, ಬೆಂಡೆ ₹50, ಮೂಲಂಗಿ ₹60ಕ್ಕೆ ಮುಟ್ಟಿದೆ.
ಸೊಪ್ಪು ದುಬಾರಿ ಮಳೆ ಕೊರತೆ ಹಿನ್ನೆಲೆಯಲ್ಲಿ ಸೊಪ್ಪುಗಳ ದರವೂ ಹೆಚ್ಚಾಗಿದೆ. ದಂಟು ಕಟ್ಟಿಗೆ 10 ಕರಿಬೇವು ಕೊತ್ತಮರಿ ಸಬ್ಬಸ್ಸಿಗೆ ಮೆಂತೆ ಪುದೀನ ಪಾಲಕ್ ಸೊಪ್ಪು ಕಟ್ಟಿಗೆ ತಲಾ 7 ರಿಂದ 10 ಇದೆ.
ಹಣ್ಣಿನ ದರ ಏಲಕ್ಕಿ ಬಾಳೆಹಣ್ಣು ಕೆ.ಜಿಗೆ 80 ಪಚ್ಚಬಾಳೆ 45 ಕಿತ್ತಲೆ 60 ಕಲ್ಲಂಗಡಿ 25 ಸೇಬು 160 ರಿಂದ 250 ಮೋಸಂಬಿ 75 ದಾಳಿಂಬೆ 250 ಅನಾನಸ್ 60 ಮಸ್ಕ್ ಮೆಲನ್ 45 ಪಪ್ಪಾಯ 55 ಸಪೋಟ 70 ರಾಂಬುಟಾನ್ 320 ಸೀಬೆ 100 ಸೀತಾಫಲ 150 ದರ ಇದೆ.