ನೂರು ದಿನ…ನೂರು ಗೊಂದಲ, ದಿಕ್ಕು ತಪ್ಪಿದ ಆಡಳಿತ
1 min readದಿಕ್ಕು ತಪ್ಪಿ, ಜೋಲಿ ಹೊಡೆಯುತ್ತಿರುವ ನೌಕೆ. ನೂರು ದಿನಗಳ ಸಂಭ್ರಮ ಪೂರೈಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ಸ್ಥಿತಿ ಇದು. 135 ಶಾಸಕರ ಬೆಂಬಲ ಇದ್ದರೂ ಅಸ್ಥಿರತೆ, ಗೊಂದಲ, ಆತಂಕ, ಗೊಂದಲಗಳ ಮಧ್ಯೆಯೇ ಸರ್ಕಾರ ದಿನ ದೂಡುತ್ತಿದೆ. ಇನ್ನು ಎರಡು ತಿಂಗಳು ಕಳೆದರೆ ಹೊಸ ಆರ್ಥಿಕ ವರ್ಷಕ್ಕೆ ಮಂಡಿಸಬೇಕಾದ ಮುಂಗಡ ಪತ್ರಕ್ಕೆ ಪೂರಕ ಸಿದ್ಧತೆಗಳು ಆರಂಭವಾಗಬೇಕಾಗುತ್ತದೆ.
ಸರ್ಕಾರದ ವಿವಿಧ ಇಲಾಖೆಗಳು ಸಾಧಿಸಿರುವ ಪ್ರಗತಿ ,ಅಭಿವೃದ್ಧಿ ಯೋಜನೆಗಳ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಆಗಿರುವ ಪ್ರಗತಿಯ ಪರಾಮರ್ಶೆ ನಡೆಯಬೇಕು.ಆದರೆ ಸರ್ಕಾರದ ಒಟ್ಟು ಆಡಳಿತ ವೈಖರಿ ನೋಡಿದರೆ ಇನ್ನೂ ರಾಜಕೀಯ ಗೊಂದಲಗಳಿಂದ ಹೊರ ಬಂದಿಲ್ಲ ಎಂಬುದು ಸ್ಪಷ್ಟವಾಗುತ್ತದೆ. ಆಡಳಿತ ನಡೆಸಿದ ಅನುಭವ ಹೊಂದಿದ,ದೂರ ದೃಷ್ಟಿಯ ಸಂವೇದನಾಶೀಲ ನಾಯಕ ಎಂದೇ ಹೆಸರಾದ ಸಿದ್ದರಾಮಯ್ಯನವರು ಎರಡನೇ ಬಾರಿ ಮುಖ್ಯಮಂತ್ರಿಯಾದಾಗ ಈ ಸರ್ಕಾರದ ಆಡಳಿತ ಹೊಸ ದಿಕ್ಕಿನಲ್ಲಿ ಸಾಗಿ ಅಭಿವೃದ್ಧಿಗೆ,ರಾಜ್ಯವು ಎದುರಿಸುತ್ತಿರುವ ಜ್ವಲಂತ ಸಮಸ್ಯೆಗಳ ಪರಿಹಾರಕ್ಕೆ ಸ್ಪಷ್ಟ ಉತ್ತರ ಸಿಗಬಹುದೆಂಬ ನಿರೀಕ್ಷೆಗಳು ಇತ್ತು. ಆದರೆ ಆ ಯಾವ ನಿರೀಕ್ಷೆಗಳೂ ನಿಜವಾಗುವ ಲಕ್ಷಣಗಳು ಕಾಣುತ್ತಿಲ್ಲ.
ಆಡಳಿತಾತ್ಮಕ ವಿಚಾರಗಳನ್ನೇ ನೋಡಿದರೆ ಅಧಿಕಾರಿಗಳ ವರ್ಗಾವರ್ಗಿಯಲ್ಲೇ ಕಾಲಹರಣ ಆಗುತ್ತಿದೆ. ಆ ವಿಚಾರದಲ್ಲೂ ಸ್ವತಹಾ ಮುಖ್ಯಮಂತ್ರಿಗಳ ಕಚೇರಿಯೇ ಗೊಂದಲಕ್ಕೆ ಸಿಕ್ಕಿದೆ. ಅಧಿಕಾರಿಗಳ ವರ್ಗಾವಣೆಗೆ ಸಂಬಂಧಿಸಿದಂತೆ ಹೊರಡಿಸಿರುವ ಆದೇಶಗಳು ಸಾರ್ವತ್ರಿಕವಾಗಿ ನಗೆಪಾಟಲಿಗೆ ಗುರಿಯಾಗಿವೆ. ಅಕ್ಟೋಬರ್ ತಿಂಗಳ ಕೊನೆಯಲ್ಲೂ ವರ್ಗಾವಣೆ ಭರಾಟೆಗೆ ಕಡಿವಾಣ ಬಿದ್ದಿಲ್ಲ. ಹೊಸ ಸರ್ಕಾರ ಬಂದಾಗ ಸಹಜವಾಗೇ ಕೆಳ ಹಂತದಿಂದ ಮೇಲ್ಮಟ್ಟದ ವರೆಗೆ ಅಧಿಕಾರಿಗಳ ವರ್ಗಾವಣೆ ನಡೆಯುತ್ತದೆ. ಇದು ಸಹಜ ಪ್ರಕ್ರಿಯೆ ಎಂಬಂತೆ ಆಗಿದೆ. ವಿಧಾನಸಭಾ ಕ್ಷೆತ್ರಗಳ ಮಟ್ಟದಲ್ಲಿ ತಮ್ಮಮರ್ಜಿಗೆ ಅನುಸಾರವಾಗಿ ಕೆಲಸ ಮಾಡುವ ಅಧಿಕಾರಿಗಳನ್ನು ನಿಯೋಜಿಸಲು ಶಾಸಕರೇ ಒತ್ತಡ ಹೇರುವುದರಿಂದ ಅದನ್ನು ನಿಭಾಯಿಸಲು ಆಗದಷ್ಟು ಮಟ್ಟಕ್ಕೆ ಆಡಳಿತ ಕುಸಿದಿದೆ. ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಅವರೇ ಈ ವಿಚಾರದಲ್ಲಿ ಅಸಹಾಯಕರಾಗಿದ್ದಾರೆ.
ಇನ್ನು ಮಂತ್ರಿ ಮಂಡಲದಲ್ಲಿರುವ ಸಚಿವರುಗಳ ಕಾರ್ಯವೈಖರಿ ಗಣನೆಗೆ ತೆಗೆದುಕೊಂಡರೆ ಬೆರಳೆಣಿಕೆಯ ಮಂತ್ರಿಗಳನ್ನು ಬಿಟ್ಟರೆ ಉಳಿದವರು ತಮ್ಮ ಇಲಾಖೆಗಳತ್ತ ತಿರುಗಿಯೂ ನೋಡುತ್ತಿಲ್ಲ. ಸಚಿವರು ತಮಗೆ ವಹಿಸಿದ ಖಾತೆಗಳನ್ನು ಹೇಗೆ ನಿರ್ವಹಿಸುತ್ತಿದ್ದಾರೆ? ಇಲಾಖೆ ಕೆಲಸಗಳು, ಯೋಜನೆಗಳ ಜಾರಿ ಯಾವ ಹಂತದಲ್ಲಿದೆ ಎಂಬುದರ ಬಗ್ಗೆ ಸರ್ಕಾರದಲ್ಲಿ ಮಾಹಿತಿಯೇ ಇಲ್ಲ. ಸರ್ಕಾರದ ಮಹತ್ವದ ಸಾಧನೆ ಎಂದರೆ ಚುನಾವಣೆ ಸಂದರ್ಭದಲ್ಲಿ ಘೋಷಿಸಿದ್ದ ವಿವಿಧ ಗ್ಯಾರಂಟಿಗಳ ಜಾರಿಗೇ ಹೆಚ್ಚು ಸಮಯ ನೀಡುತ್ತಿರುವುದು.
ಮಹಿಳೆಯರಿಗೆ ಸಾರಿಗೆ ಸಂಸ್ಥೆಯ ಬಸ್ಸುಗಳಲ್ಲಿ ಉಚಿತ ಪ್ರಯಾಣದ ಭಾಗ್ಯ ಕಲ್ಪಿಸಿರುವ ಸರ್ಕಾರ ಅದರಿಂದ ಆಗುತ್ತಿರುವ ಸಾವಿರಾರು ಕೋಟಿ ರೂ. ಗಳ ಆರ್ಥಿಕ ಕೊರತೆಯನ್ನು ತುಂಬುವ ಬಗ್ಗೆ ಚಿಂತನೆ ನಡೆಸಿದಂತೆ ಕಾಣುತ್ತಿಲ್ಲ.
ಈಗಾಗಲೇ ನಷ್ಟದಲ್ಲಿ ನಡೆಯುತ್ತಿರುವ ಸಾರಿಗೆ ಸಂಸ್ಥೆಗಳಿಗೆ ಆರ್ಥಿಕ ನೆರವು ನೀಡಿ ಪುನಶ್ಚೇತನಕ್ಕೆ ಮುಂದಾಗಬೇಕಿದ್ದ ಸರ್ಕಾರ ಆಗೊಮ್ಮೆ ಈಗೊಮ್ಮೆ ಅಲ್ಪ ಪ್ರಮಾಣದ ಅನುದಾನವನ್ನು ಒದಗಿಸಿದ್ದು ಬಿಟ್ಟರೆ ಉಳಿದಂತೆ ನಷ್ಟದ ಪ್ರಮಾಣವನ್ನು ಸರಿದೂಗಿಸುವ ಕುರಿತು ಕ್ರಮವನ್ನೇ ಕೈಗೊಂಡಿಲ್ಲ. ಭವಿಷ್ಯದ ದಿನಗಳಲ್ಲಿ ಉಂಟಾಗಬಹುದಾದ ಆರ್ಥಿಕ ಸಂಕಷ್ಟ ನಿವಾರಣೆಗೆ ಸರ್ಕಾರ ಯಾವ ಕ್ರಮ ಕೈಗೊಂಡಿದೆ ಎಂಬುದರ ಬಗ್ಗೆ ಸ್ಪಷ್ಟ ಮಾಹಿತಿಯೇ ಇಲ್ಲ. ಇನ್ನು ಭಾರೀ ಪ್ರಚಾರದೊಂದಿಗೆ ಜಾರಿಗೆ ಮುಂದಾಗಿದ್ದ ಅನ್ನ ಭಾಗ್ಯ ಯೋಜನೆ ಕುರಿತು ಗೊಂದಲಗಳು ಇನ್ನೂ ಮುಗಿದಿಲ್ಲ. ಯೋಜನೆಯಲ್ಲಿ ಘೋಷಿಸಿರುವಂತೆ ಆರ್ಥಿಕವಾಗಿ ದುರ್ಬಲರಾದವರಿಗೆ ಅಕ್ಕಿ ಒದಗಿಸುವ ಯೋಜನೆ ಆರಂಭದಲ್ಲೇ ಮುಗ್ಗರಿಸಿದೆ. ಉಳಿದ ಗ್ಯಾರಂಟಿಗಳ ಕತೆಯೂ ಇದೇ.
ಮುಂದಿನ ವರ್ಷ ಹೊಸ ಮುಂಗಡ ಪತ್ರ ಮಂಡಿಸಬೇಕಾಗಿರುವ ಸಿದ್ದರಾಮಯ್ಯ ಈ ಯೋಜನೆಗಳ ಜಾರಿಯಿಂದ ಉಂಟಾಗುವ ಹೆಚ್ಚುವರಿ ಆರ್ಥಿಕ ಹೊರೆಯನ್ನು ನಿಭಾಯಿಸಲು ಯಾವ ಕ್ರಮ ಕೈಗೊಂಡಿದ್ದಾರೆ ಎಂದು ಪ್ರಶ್ನಿಸಿದರೆ ಸರ್ಕಾರದ ಬಳಿ ನಿಖರ ಉತ್ತರಗಳೇ ಇಲ್ಲ. ವಿಧಾನಸಭಾ ಕ್ಷೇತ್ರಗಳ ಅಭಿವೃದ್ಧಿ ಯೋಜನೆಗಳಿಗೆ ಅನುದಾನ ಬಿಡುಗಡೆ ಆಗದೆ ಶಾಸಕರು ಜನರ ಆಕ್ರೋಶವನ್ನು ಎದುರಿಸಬೇಕಾಗಿದೆ