ನಗರಸಭೆ ಅಧ್ಯಕ್ಷ ಚುನಾವಣೆಗೆ 35 ಮತದಾರರು
1 min readನಗರಸಭೆ ಅಧ್ಯಕ್ಷ ಚುನಾವಣೆಗೆ 35 ಮತದಾರರು
ಇಬ್ಬರು ವಿಧಾನಪರಿಷತ್ ಸದಸ್ಯರ ಸೇರ್ಪಡೆ
ಶಾಸಕ, ಸಂಸದರು ಸೇರಿ ೩೫ ಮತದಾರರು
ಸರಳ ಬಹುಮತಕ್ಕೆ ಅಗತ್ಯವಿದೆ 18 ಮತ
ತೀವ್ರ ವಿವಾದಕ್ಕೆ ಗುರಿಯಾಗಿದ್ದ ಚಿಕ್ಕಬಳ್ಳಾಪುರ ನಗರಸಭೆ ಅಧ್ಯಕ್ಷ ಚುನಾವಣೆ ಮತದಾರರ ಪಟ್ಟಿ ಕೊನೆಗೂ ಬಿಡುಗಡೆಯಾಗಿದೆ. ಈ ಅಂತಿಮ ಮತದಾರರ ಪಟ್ಟಿಯನ್ನು ಪೌರಾಯುಕ್ತರು ಸಹಿ ಮಾಡಿ ಬಿಡುಗಡೆಗೊಳಿಸಿದ್ದು, ಈ ಅಂತಿಮ ಮತದಾರರಪಟ್ಟಿಯಲ್ಲಿ ಒಟ್ಟು 35 ಮತದಾರರಿದ್ದಾರೆ. ಅಲಲಿಗೆ ಚಿಕ್ಕಬಳ್ಳಾಪುರ ನಗರಸಭೆಯ ಗದ್ದುಗೆ ಏರಲು 18 ಮಂದಿ ಮತದಾರರ ಬೆಂಬಲ ಅಗತ್ಯವಿದೆ.
ಹೌದು, ಕಳೆದ ಸುಮಾರು ಒಂದು ತಿಂಗಳಿನಿ0ದ ತೀವ್ರ ವಿವಾದ ಸೃಷ್ಟಿಸಿದ್ದ ಚಿಕ್ಕಬಳ್ಳಾಪುರ ನಗರಸಭೆ ಅಧ್ಯಕ್ಷೀಯ ಚುನಾವಣೆ ಮತದಾರರಪಟ್ಟಿ ಇದೀಗ ಬಿಡುಗಡೆಯಾಗಿದೆ. ಮತದಾರರ ಪಟ್ಟಿಯನ್ನು ಅಂತಿಮಗೊಳಿಸಿರುವ ಪೌರೌಯುಕ್ತ ಉಮಾಶಂಕರ್ ಅವರು, ಶನಿವಾರ ಬಿಡುಗಡೆ ಮಾಡಿದ್ದು, ಆ ಪಟ್ಟಿಯಲ್ಲಿರುವ ಮಾಹಿತಿಯಂತೆ ಒಟ್ಟು 35 ಮಂದಿ ಮತದಾರರು ಚಿಕ್ಕಬಳ್ಳಾಪುರ ನಗರಸಭೆ ನೂತನ ಅಧ್ಯಕ್ಷರ ಭವಿಷ್ಯ ಬರೆಯಲಿದ್ದಾರೆ.
ನಿರೀಕ್ಷೆಯಂತೆ ವಿಧಾನಪರಿಷತ್ ಸದಸ್ಯ ಎಂ.ಆರ್. ಸೀತಾರಾಂ ಅವರ ಹೆಸರು ಮತದಾರರಪಟ್ಟಿಯಲ್ಲಿ ಸೇರ್ಪಡೆಯಾಗಿದ್ದು, ಅವರೊಂದಿಗೆ ಮತ್ತೊಬ್ಬ ವಿಧಾನಪರಿಷತ್ ಸದಸ್ಯರಾದ ಅನಿಲ್‌ಕುಮಾರ್ ಅವರ ಹೆಸರೂ ಮತದಾರರಪಟ್ಟಿಯಲ್ಲಿದೆ. ಆದರೆ ಬಿಜೆಪಿ ಆರೋಪಿಸಿದಂತೆ ನಾಲ್ಕೆ`ದು ಮಂದಿ ವಿಧಾನಪರಿಷತ್ ಸದಸ್ಯರ ಹೆಸರು ಮತದಾರರ ಪಟ್ಟಿಯಲ್ಲಿ ಇಲ್ಲವಾಗಿದ್ದು, ಇಬ್ಬರು ವಿಧಾನಪರಿಷತ್ ಸದಸ್ಯರ ಹೆಸರು ಮಾತ್ರ ಸೇರ್ಪಡೆಗೊಳಿಸಲಾಗಿದೆ.
ಉಳಿದಂತೆ ಸಂಸದ ಡಾ.ಕೆ. ಸುಧಾಕರ್, ಶಾಸಕ ಪ್ರದೀಪ್ ಈಶ್ವರ್ ಅವರೂ ಮತದಾನಕ್ಕೆ ಅರ್ಹರಾಗಿದ್ದು, ಇವರೊಂದಿಗೆ ೩೧ ಮಂದಿ ನಗರಸಭೆಯ ಚುನಾಯಿತ ಸದಸ್ಯರು ಮತ ಚಲಾಯಿಸಬಹುದಾಗಿದೆ. ಅಲ್ಲಿಗೆ ನಗರಸಭೆ ಅಧ್ಯಕ್ಷರನ್ನು ಆಯ್ಕೆ ಮಾಡಲು ೩೫ ಮಂದಿ ಅರ್ಹ ಮತದಾರರಿದ್ದು, ಅಧ್ಯಕ್ಷರಾಗಲು 18 ಮತಗಳ ಅಗತ್ಯವಿದೆ. ಪ್ರಸ್ತುತ ಕಾಂಗ್ರೆಸ್‌ನಲ್ಲಿ 10 ಮಂದಿ ಕಾಂಗ್ರೆಸ್ ಸದಸ್ಯರು, ಒಬ್ಬರು ಪಕ್ಷೇತರ ಸದಸ್ಯರು ಮತ್ತು ಇಬ್ಬರು ಜೆಡಿಎಸ್ ಸದಸ್ಯರೂ ಸೇರಿ 13 ಸದಸ್ಯ ಬಲವಿದೆ. ಜೊತೆಗೆ ಇಬ್ಬರು ವಿಧಾನ ಪರಿಷತ್ ಸದಸ್ಯರು ಮತ್ತು ಒಬ್ಬ ಶಾಸಕರ ಮತ ಸೇರಿ ಕಾಂಗ್ರೆಸ್ ಬಲ 16ಕ್ಕೆ ಮುಟ್ಟಿದೆ.
ಆದರೆ ಬಹುಮತಕ್ಕೆ 18 ಮತಗಳ ಅಗತ್ಯವಿದ್ದು, ಪ್ರಸ್ತುತ ಕಾಂಗ್ರೆಸ್ ಬಳಿ ಆ ಸಂಖ್ಯಾ ಬಲವಿಲ್ಲ. ಆದರೆ ಬಿಜೆಪಿ ಪರವಾಗಿ ೯ ಮಂದಿ ಬಿಜೆಪಿ ಸದಸ್ಯರು, ನಾಲ್ವರು ಪಕ್ಷೇತರ ಸದಸ್ಯರು ಮತ್ತು ಐದು ಮಂದಿ ಕಾಂಗ್ರೆಸ್ ಸದಸ್ಯರೂ ಇದ್ದು, ಒಟ್ಟು ೧೮ ಮಂದಿ ಸದಸ್ಯ ಬಲವನ್ನು ಬಿಜೆಪಿ ಹೊಂದಿದೆ. ಇದರೊಂದಿಗೆ ಸಂಸದ ಡಾ.ಕೆ. ಸುಧಾಕರ್ ಅವರ ಮತವೂ ಲಭಿಸುವ ಕಾರಣದಿಂದ ಬಿಜೆಪಿ 19 ಮತಗಳ ಬಲ ಹೊಂದಿದ್ದು, ಅಧ್ಯಕ್ಷ ಸ್ಥಾನಕ್ಕೆ ಏರಲು ಈ ಬಹುಮತ ಸಾಕಾಗಿದೆ.
ಆದರೆ ಕಾಂಗ್ರೆಸ್ ಮತ್ತು ಬಿಜೆಪಿ ಬೆಂಬಲಿತ ಸದಸ್ಯರೆಲ್ಲರೂ ಪ್ರಸ್ತುತ ಪ್ರವಾಸದಲ್ಲಿದ್ದಾರೆ. ಕಾಂಗ್ರೆಸ್ ಸದಸ್ಯರು ರಾಜಸ್ಥಾನದ ಜೈಪುರ ತಲುಪಿದ್ದರೆ, ಬಿಜೆಪಿ ಬೆಂಬಲಿತ ಸದಸ್ಯರು ಡಾರ್ಜಲಿಂಗ್‌ನಲ್ಲಿ ನೆಲೆಸಿದ್ದಾರೆ. ಇಂದು ವಿನಾಯಕ ಚೌತಿ ಹಬ್ಬ ಇದ್ದು, ಮನೆಗಳಿಂದ ದೂರ ಅಂದರೆ ಡಾರ್ಜಲಿಂಗ್‌ನಲ್ಲಿರುವ ಬಿಜೆಪಿ ಬೆಂಬಲಿತ ಸದಸ್ಯರು ಸಣ್ಣ ಗಣೇಶ ಮೂರ್ತಿಯನ್ನು ಹೋಟೆಲ್‌ನಲ್ಲಿಯೇ ಪ್ರತಿಷ್ಟಾಪಿಸಿ, ಪೂಜೆ ಸಲ್ಲಿಸುವ ಮೂಲಕ ಗೌರಿ ಗಣೇಶ ಹಬ್ಬವನ್ನು ಆಚರಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಇನ್ನು ಶತಾಯ ಗತಾಯ ಅಧಿಕಾರ ಹಿಡಿಯಲೇಬೇಕು ಎಂದು ಹಠಕ್ಕೆ ಬಿದ್ದಿರುವ ಕಾಂಗ್ರೆಸ್ ಪ್ರಸ್ತುತ ಬಿಜೆಪಿಯಲ್ಲಿರುವ ಇಬ್ಬರು ಸದಸ್ಯರನ್ನಾದರೂ ತನ್ನತ್ತ ಸೆಳೆಯಲು ಕಸರತ್ತು ತೀವ್ರಗೊಳಿಸಿದೆ ಎಂದು ತಿಳಿದುಬಂದಿದೆ. ಇದರ ಭಾಗವಾಗಿಯೇ ಜೆಡಿಎಸ್ ಸದಸ್ಯರನ್ನು ಹೈಜಾಕ್ ಮಾಡಲಾಗಿದ್ದು, ಅದೇ ಮಾದರಿಯಲ್ಲಿಯೇ ಇನ್ನೂ ಇಬ್ಬರು ಸದಸ್ಯರನ್ನು ತನ್ನತ್ತ ಸೆಳೆದಲ್ಲಿ ಸುಲಭವಾಗಿ ಅಧಿಕಾರ ಹಿಡಿಯಬಹುದು ಎಂಬ ಲೆಕ್ಕಾಚಾರದಲ್ಲಿರುವ ಕಾಂಗ್ರೆಸ್ ಡಾರ್ಜಲಿಂಗ್‌ನಲ್ಲಿರುವ ಸದಸ್ಯರಿಗೆ ಗಾಳ ಹಾಕಲು ಹಲವು ಮೂಲಗಳಿಂದ ಪ್ರಯತ್ನಗಳನ್ನು ತೀವ್ರಗೊಳಿಸಿದೆ ಎಂದು ತಿಳಿದುಬಂದಿದೆ.
ಒಟ್ಟಿನಲ್ಲಿ ಚಿಕ್ಕಬಳ್ಳಾಪುರ ನಗರಸಭೆ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆಗೆ ಇನ್ನು ಕೇವಲ ೪ ದಿನವಗಳು ಮಾತ್ರ ಉಳಿದಿದ್ದು, ಕಾಂಗ್ರೆಸ್ ಮತ್ತು ಬಿಜೆಪಿಯಲ್ಲಿ ತೀವ್ರ ಆತಂಕ ಏರ್ಪಟ್ಟಿದೆ. ಇದಕ್ಕೆ ಕಾರಣ ಪ್ರಸ್ತುತ ತಮ್ಮ ಬಳಿ ಇರುವ ಸದಸ್ಯರನ್ನು ಉಳಿಸಿಕೊಳ್ಳುವ ಜೊತೆಗೆ ಮತ್ತಷ್ಟು ಸದಸ್ಯರನ್ನು ಸೆಳೆಯುವ ಪ್ರಯತ್ನ ಉಭಯ ಪಕ್ಷಗಳಿಂದಲೂ ನಡೆಯುತ್ತಿದ್ದು, ತಮ್ಮ ಬೆಂಬಲಕ್ಕಿರುವ ಸದಸ್ಯರು ಕೈ ಜಾರಿದರೆ ಗತಿ ಏನು ಎಂಬ ಆತಂಕ ಎರಡೂ ಪಕ್ಷಗಳನ್ನು ಕಾಡುತ್ತಿದೆ. ಹಾಗಾಗಿ ತಮ್ಮ ಬಳಿ ಇರುವ ಸದಸ್ಯರನ್ನು ಉಳಿಸಿಕೊಳ್ಳುವ ಜೊತೆಗೆ ಮತ್ತಷ್ಟು ಸದಸ್ಯರನ್ನು ಸೆಳೆಯಲು ಕಾಂಗ್ರೆಸ್ ಮತ್ತು ಬಿಜೆಪಿ ತೀವ್ರ ಪ್ರಯತ್ನವನ್ನು ಮುಂದುವರಿಸಿವೆ ಎಂಬುದು ಬಹಿರಂಗ ಸತ್ಯವಾಗಿದೆ.