ಕೇರಳದಲ್ಲಿ ಒಂದೇ ದಿನದಲ್ಲಿ ಪತ್ತೆಯಾದವು 300 ಸಕ್ರಿಯ ಕೋವಿಡ್ ಪ್ರಕರಣಗಳು: 3 ಸಾವು.. ಮಂಗಳೂರಲ್ಲಿ ಒಬ್ಬರಿಗೆ ಪಾಸಿಟಿವ್
1 min readಜೆಎನ್.1 ಸೋಂಕು ವೇಗವಾಗಿ ಹರಡುತ್ತದೆ. ಆದರೆ, ಯಾವುದೇ ಗಂಭೀರ ಆರೋಗ್ಯ ಮತ್ತು ಸಾವಿನ ಅಪಾಯ ಹೊಂದಿಲ್ಲ. ಹೀಗಾಗಿ ಯಾವುದೇ ಭಯ ಬೇಡ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಧೈರ್ಯವನ್ನೂ ತುಂಬಿದೆ.
ದೇಶದಲ್ಲಿ ಚಳಿ ಹೆಚ್ಚಿದಂತೆ ಕೋವಿಡ್ ಪ್ರಕರಣಗಳ ಏರಿಕೆ ಕಂಡಿದೆ.
ಕೇರಳದಲ್ಲಿ ಅತಿ ಹೆಚ್ಚು ಪ್ರಕರಣಗಳು ದಾಖಲಾಗಿವೆ. ಕೋವಿಡ್ ರೂಪಾಂತರ ತಳಿ ಜೆಎನ್.1 ಪತ್ತೆಯಾದ ಕೇರಳದಲ್ಲಿ ಡಿಸೆಂಬರ್ 20ರಂದು ಒಟ್ಟು 300 ಹೊಸ ಕೋವಿಡ್ ಪ್ರಕರಣಗಳು ದಾಖಲಾಗಿದ್ದು, 3 ಸಾವು ಸಂಭವಿಸಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ವರದಿ ಬಿಡುಗಡೆ ಮಾಡಿದೆ. ಇದೀಗ ದೇಶದಲ್ಲಿ ಒಟ್ಟು ಸಕ್ರಿಯ ಪ್ರಕರಣಗಳ ಸಂಖ್ಯೆ 2669 ಆಗಿದೆ.
ಕಳೆದ ಮೂರು ವರ್ಷಗಳ ಹಿಂದೆ ಕೋವಿಡ್ ಪತ್ತೆಯಾದಗಿನಿಂದ ಕೇರಳದಲ್ಲಿ ಕೋವಿಡ್ನಿಂದ ಸಾವನ್ನಪ್ಪಿರುವವರ ಸಂಖ್ಯೆ 72,056 ಆಗಿದೆ. ಇನ್ನು ಕಳೆದ 24 ಗಂಟೆ ಅವಧಿಯಲ್ಲಿ ರಾಜ್ಯದಲ್ಲಿ ಕೋವಿಡ್ನಿಂದ ಚೇತರಿಕೆ ಕಂಡು ಡಿಸ್ಚಾರ್ಜ್ ಆದವರ ಸಂಖ್ಯೆ 224 ಆಗಿದೆ. ರಾಜ್ಯದಲ್ಲಿ ಒಟ್ಟು 68,37,203 ಪ್ರಕರಣಗಳು ಇಲ್ಲಿಯವರೆಗೆ ದಾಖಲಾಗಿದೆ.
ಕೇರಳದಲ್ಲಿ ಕೋವಿಡ್ ಉಲ್ಬಣ ಆಗುತ್ತಿರುವ ಕುರಿತು ಮಾತನಾಡಿರುವ ಆರೋಗ್ಯ ಸಚಿವೆ ವೀಣಾ ಜಾರ್ಜ್, ಸೋಂಕಿನ ಬಗ್ಗೆ ಜನರು ಆತಂಕ ಪಡುವ ಅಗತ್ಯವಿಲ್ಲ. ಇದರ ನಿರ್ವಹಣೆಗೆ ಎಲ್ಲಾ ರೀತಿಯ ಸಿದ್ಧತೆ ನಡೆಸಲಾಗಿದೆ. ಕೋವಿಡ್ ರೋಗಿಗಳಿಗಾಗಿ ಐಸೋಲೇಷನ್ ವಾರ್ಡ್, ರೂಂ, ಆಕ್ಸಿಜನ್ ಬೆಡ್, ಐಸಿಯು ಬೆಡ್ ಮತ್ತು ವೆಂಟಿಲೇಟರ್ ವ್ಯವಸ್ಥೆ ಮಾಡಲಾಗಿದೆ ಎಂದು ಮಾಹಿತಿ ನೀಡಿದರು. ದೇಶದಲ್ಲಿ ದಾಖಲಾಗುತ್ತಿರುವ ಬಹುತೇಕ ಕೋವಿಡ್ ಪ್ರಕರಣದಲ್ಲಿ ಅತಿ ಹೆಚ್ಚು ಪ್ರಕರಣಗಳು ಕೇರಳ, ಕರ್ನಾಟಕ ಮತ್ತು ಒಡಿಸ್ಸಾದಲ್ಲಿ ದಾಖಲಾಗುತ್ತಿದೆ.
ಮಂಗಳೂರಿನಲ್ಲಿ ವೃದ್ಧನಿಗೆ ಕೋವಿಡ್ ಪಾಸಿಟಿವ್: ಮಂಗಳೂರಿನಲ್ಲಿ 82 ವರ್ಷದ ವೃದ್ಧನಲ್ಲಿ ಕೋವಿಡ್ ಪಾಸಿಟಿವ್ ಕಂಡು ಬಂದಿದೆ. ಅವರು ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದು ಚಿಕಿತ್ಸೆ ನೀಡಲಾಗುತ್ತಿದೆ. ಜಿಲ್ಲಾ ವೈದ್ಯಾಧಿಕಾರಿ ಡಾ. ಹೆಚ್ ಆರ್ ತಿಮ್ಮಯ್ಯ ದೃಢಪಡಿಸಿದ್ದಾರೆ. ವೃದ್ಧ ಮೂಲತಃ ಉಡುಪಿಯವರಾಗಿದ್ದು, ಮಂಗಳೂರು ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ.
ಮುನ್ನೆಚ್ಚರಿಕೆ ಅಗತ್ಯ: ಕೋವಿಡ್ ಪ್ರಕರಣ ಏರಿಕೆ ಹಿನ್ನೆಲೆ ಬುಧವಾರ ಎಲ್ಲ ರಾಜ್ಯ ಮತ್ತು ಕೇಂದ್ರಾಡಳಿತದ ಆರೋಗ್ಯ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಕೇಂದ್ರ ಆರೋಗ್ಯ ಸಚಿವ ಡಾ ಮನ್ಸುಖ್ ಮಾಂಡೋವಿಯಾ, ಸೋಂಕಿನ ವಿರುದ್ಧ ಎಲ್ಲಾ ಸರ್ಕಾರಗಳು ಒಟ್ಟಾಗ ಕೆಲಸ ಮಾಡಬೇಕಿದೆ. ನಾವು ಜಾಗ್ರತರಾಗಿರಬೇಕಿದೆ. ಹೊರತು ಆತಂಕ ಬೇಡ. ಆಸ್ಪತ್ರೆಗಳಲ್ಲಿ ಎಲ್ಲ ರೀತಿಯ ಸಿದ್ಧತೆಗಳು ಇದೆಯಾ ಎಂಬ ಬಗ್ಗೆ ಮಾಕ್ಡ್ರಿಲ್ ನಡೆಸಬೇಕು. ಸೋಂಕಿನ ವಿರುದ್ಧ ಕಣ್ಗಾವಲನ್ನು ಹೆಚ್ಚಿಸಿ, ಜನರಲ್ಲಿ ಸೋಂಕಿನ ಕುರಿತು ಪರಿಣಾಮಕಾರಿ ಅರಿವು ಮೀಡಿಸಿದೆ. ಪ್ರತಿ ಮೂರು ತಿಂಗಳಿಗೆ ಒಮ್ಮೆ ಆಸ್ಪತ್ರೆಗಳಲ್ಲಿ ಮಾಕ್ ಡ್ರಿಲ್ ನಡೆಸಿ, ಸೋಂಕಿನ ವಿರುದ್ಧ ಹೋರಾಡಲು ಕೇಂದ್ರ ಎಲ್ಲಾ ರೀತಿಯ ಬೆಂಬಲವನ್ನು ನೀಡುತ್ತದೆ. ಆರೋಗ್ಯ ಎಂಬುದು ರಾಜಕೀಯ ಪ್ರದೇಶ ಅಲ್ಲ ಎಂದರು.
ಜೆಎನ್.1 ಸೋಂಕು ವೇಗವಾಗಿ ಹರಡುತ್ತದೆ. ಆದರೆ, ಯಾವುದೇ ಗಂಭೀರ ಆರೋಗ್ಯ ಮತ್ತು ಸಾವಿನ ಅಪಾಯವನ್ನು ಹೊಂದಿಲ್ಲ. ಈ ಹಿನ್ನಲೆ ಜನರು ಹಬ್ಬದ ಋತುಮಾನ ಹಿನ್ನಲೆ ಮುನ್ನೆಚ್ಚರಿಕೆವಹಿಸುವಂತೆ ಸಭೆಯಲ್ಲಿ ಸೂಚಿಸಲಾಯಿತು.