ಎನ್‌ಡಿಎ ಸರ್ಕಾರದಿಂದ ರಾಜ್ಯದ ರೈತರಿಗೆ 13,551 ಕೋಟಿ ವಿಮೆ
1 min readಎನ್‌ಡಿಎ ಸರ್ಕಾರದಿಂದ ರಾಜ್ಯದ ರೈತರಿಗೆ 13,551 ಕೋಟಿ ವಿಮೆ
17,102 ಕೋಟಿ ರೂ. ಕಿಸಾನ್ ಸಮ್ಮಾನ್ ಯೋಜನೆ ಮೊತ್ತ
ಸಂಸದ ಡಾ.ಕೆ. ಸುಧಾಕರ್ ಪ್ರಶ್ನೆಗೆ ಉತ್ತರ ನೀಡಿದ ಕೇಂದ್ರ ಸರ್ಕಾರ
2023-24ನೇ ಸಾಲಿನಲ್ಲಿ 2,021 ಕೋಟಿ ರೂ. ಬೆಳೆ ನಷ್ಟ ಪರಿಹಾರ
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಫಸಲ್ ಬಿಮಾ ಯೋಜನೆಯಡಿ ಕರ್ನಾಟಕದ ರೈತರಿಗೆ ಒಟ್ಟು 13,551 ಕೋಟಿ ರೂ. ವಿಮೆ ಪರಿಹಾರ ಒದಗಿಸಿದ್ದು, ಕೃಷಿ ಸಮ್ಮಾನ್ ಯೋಜನೆಯಡಿ ಒಟ್ಟು 17,102 ಕೋಟಿ ರೂ. ನೀಡಲಾಗಿದೆ ಎಂದು ಕೇಂದ್ರ ಸರ್ಕಾರ ಮಾಹಿತಿ ನೀಡಿದೆ.
ಈ ಕುರಿತು ಚಿಕ್ಕಬಳ್ಳಾಪುರ ಸಂಸದ ಡಾ.ಕೆ.ಸುಧಾಕರ್ ಅವರು ಸಂಸತ್ತಿನಲ್ಲಿ ಕೇಳಿದ ಪ್ರಶ್ನೆಗೆ ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ರಾಜ್ಯ ಸಚಿವ ಭಗೀರಥ ಚೌಧರಿ ಉತ್ತರಿಸಿದ್ದಾರೆ. ರೈತರು ಎದುರಿಸುವ ಬೆಳೆ ನಷ್ಟದ ಸಮಸ್ಯೆಗೆ ಪರಿಹಾರ ನೀಡಲು ಕೇಂದ್ರ ಸರ್ಕಾರ 2016 ರಲ್ಲಿ ಫಸಲ್ ಬಿಮಾ ಯೋಜನೆ ಜಾರಿ ಮಾಡಿದೆ. ಮುಂಗಾರು ಹಾಗೂ ಹಿಂಗಾರು ಅವಧಿ ಸೇರಿದಂತೆ ಅನೇಕ ರೈತರು ಅತಿವೃಷ್ಟಿ, ಅನಾವೃಷ್ಟಿ ಹಾಗೂ ಮತ್ತಿತರ ಕಾರಣಗಳಿಂದ ಬೆಳೆ ನಷ್ಟ ಅನುಭವಿಸಿದ್ದಾರೆ. 2023-24ನೇ ಸಾಲಿನ ಮುಂಗಾರು ಅವಧಿಯಲ್ಲಿ 1,867.11 ಕೋಟಿ ರೂ. ಹಾಗೂ ಹಿಂಗಾರು ಅವಧಿಯಲ್ಲಿ 154.45 ಕೋಟಿ ರೂ. ಬೆಳೆ ನಷ್ಟ ಪರಿಹಾರ ನೀಡಲಾಗಿದೆ ಎಂದು ಮಾಹಿತಿ ಒದಗಿಸಿದ್ದಾರೆ.
ಒಟ್ಟಾರೆಯಾಗಿ ಈ ಸಾಲಿನಲ್ಲಿ 2,021.56 ಕೋಟಿ ರೂ. ಬೆಳೆ ನಷ್ಟ ಪರಿಹಾರ ರೈತರಿಗೆ ಸಂದಿದೆ. 2016-17ನೇ ಸಾಲಿನಿಂದ ಈವರೆಗೆ ಒಟ್ಟಾರೆಯಾಗಿ 13,551.70 ಕೋಟಿ ರೂ. ನಷ್ಟ ಪರಿಹಾರವನ್ನು ರೈತರು ಪಡೆದಿದ್ದಾರೆ ಎಂದು ಕೇಂದ್ರ ಸರ್ಕಾರ ಉತ್ತರಿಸಿದೆ. ಪ್ರಧಾನಿ ನರೇಂದ್ರ ಮೋದಿಯವರ ಮಹತ್ವಕಾಂಕ್ಷೆಯ ಕಿಸಾನ್ ಸಮ್ಮಾನ್ ಯೋಜನೆ 2018-19 ರಿಂದ ಆರಂಭವಾಗಿದೆ. ಈವರೆಗೆ ಒಟ್ಟು 18 ಕಂತುಗಳಲ್ಲಿ ಕರ್ನಾಟಕದ ಸರಾಸರಿ 50 ಲಕ್ಷ ರೈತ ಕುಟುಂಬಗಳಿಗೆ ಒಟ್ಟು 17,102.79 ಕೋಟಿ ರೂ. ಹಣವನ್ನು ರೈತರ ಬ್ಯಾಂಕ್ ಖಾತೆಗಳಿಗೆ ನೇರವಾಗಿ ಜಮೆ ಮಾಡಲಾಗಿದೆ.
2024-25ನೇ ಸಾಲಿನ ಏಪ್ರಿಲ್‌ನಿಂದ ಜುಲೈ ಅವಧಿಯ 17ನೇ ಕಂತಿನಲ್ಲಿ 43,04,818 ರೈತರಿಗೆ 958.26 ಕೋಟಿ ರೂ. ಹಾಗೂ ಆಗಸ್ಟ್- ನವೆಂಬರ್ ಅವಧಿಯ 18 ನೇ ಕಂತಿನಲ್ಲಿ 43,47,737ರೈತರಿಗೆ 941.76 ಕೋಟಿ ರೂ. ಸಹಾಯಧನ ನೀಡಲಾಗಿದೆ ಎಂದು ಸರ್ಕಾರ ಉತ್ತರ ನೀಡಿದೆ. ಈ ಕುರಿತು ಸಂತಸ ವ್ಯಕ್ತಪಡಿಸಿರುವ ಸಂಸದ ಡಾ.ಕೆ.ಸುಧಾಕರ್, ಪ್ರಧಾನಿ ನರೇಂದ್ರ ಮೋದಿಯವರು ರೈತರ ಆರ್ಥಿಕ ಸ್ಥಿತಿಯನ್ನು ಸಬಲೀಕರಣ ಮಾಡಲು ಹಲವಾರು ಕ್ರಮಗಳನ್ನು ಕೈಗೊಂಡಿದ್ದಾರೆ. ರೈತರ ಕಲ್ಯಾಣವೇ ಎನ್‌ಡಿಎ ಸರ್ಕಾರದ ಪ್ರಥಮ ಆದ್ಯತೆ ಎಂದು ಹೇಳಿದ್ದಾರೆ.